* ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್ ಹೋರಾಟ ಅಂತ್ಯ*  ಕ್ವಾರ್ಟರ್ ಫೈನಲ್‌ನಲ್ಲಿಯೇ ಕ್ರೊವೇಷಿಯಾ ಎದುರು ಮುಗ್ಗರಿಸಿದ ಬ್ರೆಜಿಲ್* ನೇಯ್ಮರ್ ಅಂತಾರಾಷ್ಟ್ರೀಯ ಫುಟ್ಬಾಲ್‌ ಬದುಕು ಅಂತ್ಯ

ದೋಹಾ(ಡಿ.12): ಬ್ರೆಜಿಲ್‌ನ ತಾರಾ ಆಟಗಾರ ನೇಯ್ಮರ್‌ ಜೂನಿಯರ್‌ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ತಾವು ಮುಂದುವರಿಯಬೇಕೋ ಬೇಡವೋ ಎನ್ನುವ ಬಗ್ಗೆ ಸದ್ಯದಲ್ಲೇ ನಿರ್ಧರಿಸುವುದಾಗಿ ಹೇಳಿದ್ದಾರೆ. ಕ್ರೊವೇಷಿಯಾ ವಿರುದ್ಧ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬ್ರೆಜಿಲ್‌ ಸೋಲು ಅನುಭವಿಸಿದ ಬಳಿಕ ಕಣ್ಣೀರಿಟ್ಟ ನೇಯ್ಮರ್‌, ಆ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

‘ಈಗಲೇ ಏನನ್ನೂ ಹೇಳುವುದು ಕಷ್ಟ. ನನಗೆ ಸ್ವಲ್ಪ ಸಮಯಾವಕಾಶ ಬೇಕಿದೆ. ಬ್ರೆಜಿಲ್‌ ತಂಡದಲ್ಲಿ ಮತ್ತೆ ಆಡುವುದಿಲ್ಲ ಎಂದು ನಾನು ಈಗಲೇ ಹೇಳುತ್ತಿಲ್ಲ. ಆದರೆ ಆಡುತ್ತೇನೋ ಇಲ್ಲವೋ ಎನ್ನುವುದು ಸಹ ಸ್ಪಷ್ಟವಿಲ್ಲ’ ಎಂದಿದ್ದಾರೆ. ಟೂರ್ನಿಗೆ ಪ್ರವೇಶಿಸುವ ಮೊದಲು 30 ವರ್ಷದ ನೇಯ್ಮರ್‌ ಇದು ತಮ್ಮ ಕೊನೆಯ ವಿಶ್ವಕಪ್‌ ಆಗಬಹುದು ಎನ್ನುವ ಸುಳಿವು ನೀಡಿದ್ದರು.

‘ಈಗ ತವರಿಗೆ ವಾಪಸಾಗಿ ವಿಶ್ರಾಂತಿ ಪಡೆಯಲಿದ್ದೇನೆ. ಪ್ರಶಸ್ತಿ ಗೆಲ್ಲಲಿಲ್ಲ ಎನ್ನುವುದು ನನ್ನಲ್ಲಿ ಇನ್ನಷ್ಟು ಉತ್ಸಾಹ ತುಂಬಲಿದೆ’ ಎಂದು ನೇಯ್ಮರ್‌ ಹೇಳಿಕೊಂಡಿದ್ದಾರೆ. ಬ್ರೆಜಿಲ್‌ ತಂಡದೊಂದಿಗೆ ಅವರು 2013ರ ಕಾನ್ಫೆಡರೇಷನ್ಸ್‌ ಕಪ್‌ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಬ್ರೆಜಿಲ್‌ಗೆ ಗೇಟ್‌ಪಾಸ್‌ ಕೊಟ್ಟ ಕ್ರೊವೇಷಿಯಾ!

ದಾಖಲೆಯ 6ನೇ ಬಾರಿ ಚಾಂಪಿಯನ್‌ ಆಗುವ ಬ್ರೆಜಿಲ್‌ ಕನಸು ಭಗ್ನಗೊಂಡಿದೆ. ಸತತ 2ನೇ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಕ್ರೊವೇಷಿಯಾ ಸೆಮಿಫೈನಲ್‌ ಪ್ರವೇಶಿಸಿದೆ. ಜಪಾನ್‌ ವಿರುದ್ಧ ಪ್ರಿ ಕ್ವಾರ್ಟರ್‌ನಲ್ಲೂ ಶೂಟೌಟ್‌ನಲ್ಲಿ ಜಯಿಸಿದ್ದ ಲೂಕಾ ಮೊಡ್ರಿಚ್‌ ಪಡೆ ಕೈ ಮೀರಿದ್ದ ಈ ಪಂದ್ಯವನ್ನೂ ಗೆಲ್ಲುವಲ್ಲಿ ಯಶಸ್ವಿಯಾಯಿತು.

FIFA World Cup 2022: ವಿಶ್ವಕಪ್‌ನಿಂದ ಬ್ರೆಜಿಲ್‌ ಔಟ್‌, ಪೆನಾಲ್ಟಿ ಕಿಂಗ್‌ ಕ್ರೋವೇಷಿಯಾ ಸೂಪರ್‌ ವಿನ್‌!

ಶೂಟೌಟ್‌ನಲ್ಲಿ ಕ್ರೊವೇಷಿಯಾ 4 ಗೋಲು ಬಾರಿಸಿದರೆ, ಬ್ರೆಜಿಲ್‌ ಕೇವಲ 2 ಗೋಲು ಗಳಿಸಲಷ್ಟೇ ಶಕ್ತವಾಯಿತು. 2006ರಿಂದ 2022ರ ನಡುವೆ 5 ವಿಶ್ವಕಪ್‌ಗಳಲ್ಲಿ 4 ಬಾರಿ ಬ್ರೆಜಿಲ್‌ ಕ್ವಾರ್ಟರ್‌ ಫೈನಲ್‌ನಲ್ಲೇ ಸೋತು ಹೊರಬಿದ್ದಂತಾಗಿದೆ.

ರೊನಾಲ್ಡೋ ಮೇಲೆ ನೀರೆರೆಚಿದ ವ್ಯಕ್ತಿ!

ದೋಹಾ: ಮೊರಾಕ್ಕೊ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದ ಮೊದಲಾರ್ಧದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಕಣಕ್ಕಿಳಿದಿರಲಿಲ್ಲ. ಮೀಸಲು ಆಟಗಾರನಾಗಿದ್ದ ರೊನಾಲ್ಡೋ ಅತ್ತಿತ್ತ ಓಡಾಡುವಾಗ ವ್ಯಕ್ತಿಯೊಬ್ಬ ಅವರ ಮೇಲೆ ನೀರೆರೆಚಿ ಅನುಚಿತವಾಗಿ ವರ್ತಿಸಿದ ಪ್ರಸಂಗ ನಡೆಯಿತು. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಕ್ರೀಡಾಂಗಣದಿಂದ ಹೊರಹಾಕಿದರು.

ಪ್ಯಾರಿಸ್‌ನಲ್ಲಿ ಮೊರಾಕ್ಕೊ, ಫ್ರಾನ್ಸ್‌ ಫ್ಯಾನ್ಸ್‌ ಹೊಡೆದಾಟ!

ಪ್ಯಾರಿಸ್‌: ಫುಟ್ಬಾಲ್‌ ವಿಶ್ವಕಪ್‌ ಸೆಮಿಫೈನಲ್‌ ಮುಖಾಮುಖಿಗೂ ಮೊದಲೇ ಫ್ರಾನ್ಸ್‌ ಹಾಗೂ ಮೊರಾಕ್ಕೊ ಅಭಿಮಾನಿಗಳು ಪರಸ್ಪರ ಹೊಡೆದಾಡಿದ ಘಟನೆ ಶನಿವಾರ ರಾತ್ರಿ ವರದಿಯಾಗಿದೆ. ಫ್ರಾನ್ಸ್‌ಗೆ ವಲಸೆ ಹೋಗಿರುವ ಮೊರಾಕ್ಕೊ ಮೂಲದ ಜನರು, ಪೋರ್ಚುಗಲ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ತಮ್ಮ ದೇಶ ಗೆದ್ದ ಬಳಿಕ ರಸ್ತೆಗಿಳಿದು ಸಂಭ್ರಮಿಸಲು ಶುರು ಮಾಡಿದರು. 

ಸಂಭ್ರಮಾಚರಣೆ ದಾಂಧಲೆಗೆ ತಿರುಗಿತು. ಕಾರು, ಅಂಗಡಿಗಳ ಗಾಜುಗಳನ್ನು ಒಡೆದು ಬೆಂಕಿ ಹಚ್ಚಿದರು. ಇಂಗ್ಲೆಂಡ್‌ ವಿರುದ್ಧ ಫ್ರಾನ್ಸ್‌ ಗೆದ್ದ ಬಳಿಕ ಫ್ರಾನ್ಸ್‌ ಅಭಿಮಾನಿಗಳೂ ರಸ್ತೆಗಿಳಿದು ಸಂಭ್ರಮಿಸಲು ಮುಂದಾದಾಗ ಮೊರಾಕ್ಕೊ ಅಭಿಮಾನಿಗಳು ಅವರನ್ನು ಕೆಣಕಿದರು. ಹೊಡೆದಾಟ ತಡೆದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು ಎಂದು ಮಾಧ್ಯಮಗಳು ವರದಿ ಮಾಡಿವೆ.