ವಿನೀತ್ ಫುಟ್ಬಾಲ್‌ ಕೌಶಲ್ಯಗಳನ್ನು ಗುರುತಿಸಿದ್ದ ಬಿಎಫ್‌ಸಿ ತನ್ನ ಅಂಡರ್‌-10 ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಅಲ್ಲಿಂದ ಶುರುವಾದ ವಿನೀತ್‌ ಪಯಣ ಮತ್ತಷ್ಟು ಮಜಲುಗಳನ್ನು ದಾಟಿದ್ದು, ಇದೀಗ ಬೆಂಗಳೂರು ಜಿಲ್ಲಾ ಫುಟ್ಬಾಲ್‌ ಸಂಸ್ಥೆ ಆಯೋಜಿಸಿದ್ದ ಸೂಪರ್‌ ಡಿವಿಶನ್‌ ಫುಟ್ಬಾಲ್‌ ಲೀಗ್‌ನಲ್ಲಿ ಬಿಎಫ್‌ಸಿ ತಂಡವನ್ನು ತಮ್ಮದೇ ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ.

- ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು(ನ.25): ಬದುಕೇ ಫುಟ್ಬಾಲ್ ಎಂದು ಬಾಲ್ಯದಿಂದಲೇ ನಂಬಿಕೊಂಡು ಬಂದು, ಸದ್ಯ ಬೆಂಗಳೂರು ಎಫ್‌ಸಿ ಮೀಸಲು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕದ ಯುವ ಫುಟ್ಬಾಲ್ ತೆರೆ ವಿನೀತ್ ವೆಂಕಟೇಶ್ ಅವಕಾಶಕ್ಕಾಗಿ ಈಗ ಕರ್ನಾಟಕ ಹಾಗೂ ಬಿಎಫ್‌ಸಿ ಮುಖ್ಯ ತಂಡದ ಕದ ತಟ್ಟುತ್ತಿದ್ದಾರೆ.

ಬೆಂಗಳೂರಿನಲ್ಲಿ ಫೈನಾನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ವೆಂಕಟೇಶ್ ಹಾಗೂ ಆಕೌಂಟೆಂಟ್ ಸೆಲ್ವಿ ದಂಪತಿಯ ಪುತ್ರನಾಗಿರುವ ವಿನೀತ್ 7ನೇ ವಯಸ್ಸಿನಲ್ಲೇ ಕಾಲ್ಚೆಂಡಿನ ಆಟಕ್ಕೆ ಮರುಳಾಗಿ ಮೈದಾನಕ್ಕೆ ಇಳಿದಿದ್ದರು. ಅವರ ಫುಟ್ಬಾಲ್‌ ಕೌಶಲ್ಯಗಳನ್ನು ಗುರುತಿಸಿದ್ದ ಬಿಎಫ್‌ಸಿ ತನ್ನ ಅಂಡರ್‌-10 ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಅಲ್ಲಿಂದ ಶುರುವಾದ ವಿನೀತ್‌ ಪಯಣ ಮತ್ತಷ್ಟು ಮಜಲುಗಳನ್ನು ದಾಟಿದ್ದು, ಇದೀಗ ಬೆಂಗಳೂರು ಜಿಲ್ಲಾ ಫುಟ್ಬಾಲ್‌ ಸಂಸ್ಥೆ ಆಯೋಜಿಸಿದ್ದ ಸೂಪರ್‌ ಡಿವಿಶನ್‌ ಫುಟ್ಬಾಲ್‌ ಲೀಗ್‌ನಲ್ಲಿ ಬಿಎಫ್‌ಸಿ ತಂಡವನ್ನು ತಮ್ಮದೇ ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಮಿಡ್‌ಫೀಲ್ಡರ್‌ ಆಗಿರುವ ವಿನೀತ್‌ ಟೂರ್ನಿಯಲ್ಲಿ 1 ಗೋಲು, 6 ಅಸಿಸ್ಟ್‌ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸೆಲೆಬ್ರಿಟಿಗಳಿಗೆ ವೈಯಕ್ತಿಕ ಬದುಕೆನ್ನುವುದೇ ಸತ್ತು ಹೋಗಿರುತ್ತೆ: ಬೆಕಮ್ ಜೊತೆ ಸಾರಾ ಆಲಿ ಖಾನ್ ಮಾತುಕತೆ!

10 ವರ್ಷ ಒಂದೇ ಕ್ಲಬ್‌: 2013ರಲ್ಲೇ ಬಿಎಫ್‌ಸಿ ಸೇರಿದ್ದ ವಿನೀತ್‌ 10 ವರ್ಷಗಳಲ್ಲಿ ಕ್ಲಬ್‌ನ ವಿವಿಧ ವಯೋ ವಿಭಾಗಗಳ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2020-21ರಲ್ಲಿ ಬೆಂಗಳೂರು ಸೂಪರ್‌ ಡಿವಿಶನ್‌ನಲ್ಲಿ ರನ್ನರ್‌-ಅಪ್‌, ಕಳೆದ ವರ್ಷ ರಿಲಯನ್ಸ್‌ ಡೆವಲಪ್‌ಮೆಂಟ್‌ ಡಿವಿಶನ್‌ನಲ್ಲಿ ಚಾಂಪಿಯನ್‌ ಆದ ತಂಡದಲ್ಲೂ ವಿನೀತ್ ಕೊಡುಗೆ ಅಪಾರ. ಕರ್ನಾಟಕ ಸಬ್‌-ಜೂನಿಯರ್‌ ತಂಡ ಪ್ರತಿನಿಧಿಸಿರುವ ವಿನೀತ್‌, ಮುಂದೆ ಕರ್ನಾಟಕ, ಬಿಎಫ್‌ಸಿ ಮುಖ್ಯ ತಂಡದಲ್ಲಿ ಆಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ನಾಯಕತ್ವದ ಮೊದಲ ಪ್ರಯತ್ನದಲ್ಲೇ ಯಶಸ್ಸು

ವಿನೀತ್‌ ಇದೇ ಮೊದಲ ಬಾರಿ 2023ರ ಸೂಪರ್‌ ಡಿವಿಶನ್‌ನಲ್ಲಿ ಬಿಎಫ್‌ಸಿ ತಂಡಕ್ಕೆ ನಾಯಕತ್ವ ವಹಿಸಿದರು. ಆಡಿದ 18 ಪಂದ್ಯಗಳಲ್ಲಿ 16ರಲ್ಲಿ ಗೆದ್ದ ಬಿಎಫ್‌ಸಿ ಅಜೇಯವಾಗಿಯೇ ಕಿರೀಟ ತನ್ನದಾಗಿಸಿಕೊಂಡಿತು. ಈ ಮೂಲಕ ನಾಯಕತ್ವದ ಮೊದಲ ಪ್ರಯತ್ನದಲ್ಲೇ ಸೈ ಎನಿಸಿಕೊಂಡರು. ವಿನೀತ್‌ ನಾಯಕತ್ವದ ಕೌಶಲ್ಯದ ಬಗ್ಗೆ ಬಿಎಫ್‌ಸಿ ಆಡಳಿತ ಕೂಡಾ ಮೆಚ್ಚುಗೆ ಸೂಚಿಸಿದೆ.

ಕಷ್ಟ ನುಂಗಿ ಸಾಧನೆಯ ಮೆಟ್ಟಿಲೇರಿದ ವಿನೀತ್‌

ಕುಟುಂಬ ಆರ್ಥಿಕವಾಗಿ ಬಲಿಷ್ಠವಲ್ಲದಿದ್ದರೂ ವಿನೀತ್‌ನ ಫುಟ್ಬಾಲ್‌ ಪಯಣಕ್ಕೆ ಯಾವುದೇ ಅಡ್ಡಿಯಾಗದಂತೆ ಪೋಷಕರು ನೋಡಿಕೊಂಡರು. ಹಲವು ಸಂಕಷ್ಟಗಳಿದ್ದರೂ ವಿನೀತ್‌ ಶಾಲಾ ದಿನಗಳಿಂದಲೇ ಫುಟ್ಬಾಲ್‌ನಲ್ಲಿ ಮಿಂಚುತ್ತಿರುವುದನ್ನು ಗಮನಿಸಿದ್ದ ತಂದೆ ವೆಂಕಟೇಶ್‌ರ ಸ್ನೇಹಿತ ಶಂಕರ್‌, ವಿನೀತ್‌ರ ಆಟದ ಹೊಣೆ ಹೊತ್ತರು. ಅಂದಿನಿಂದ ಇಂದಿನವರೆಗೂ ಪ್ರಾಕ್ಟೀಸ್‌, ಟೂರ್ನಿ, ಫಿಟ್ನೆಸ್‌ ಎಲ್ಲದರಲ್ಲೂ ಪೋಷಕರ ಜೊತೆ ಶಂಕರ್‌ ಪಾತ್ರ ದೊಡ್ಡದು ಎನ್ನುತ್ತಾರೆ ಪಿಯುಸಿ ಕಲಿಕೆ ಪೂರ್ಣಗೊಳಿಸಿರುವ 18ರ ವಿನೀತ್‌.

ಭಾರತ ವಿಶ್ವಕಪ್ ಸೋತಿದ್ದು ಒಳ್ಳೆಯದ್ದೇ ಆಯ್ತು:ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪಾಕಿ ಅಬ್ದುಲ್ ರಜಾಕ್..!

ಫುಟ್ಬಾಲ್ ಎಂದರೆ ನನಗೆ ಹುಚ್ಚು. ರೊನಾಲ್ಡೋ ನನ್ನ ರೋಲ್‌ಮಾಡೆಲ್. ಸುನಿಲ್ ಚೆಟ್ರಿ ಜೊತೆಗೂ ಕ್ಯಾಂಪ್‌ಗಳಲ್ಲಿ ಅಭ್ಯಾಸ ನಡೆಸುವ ಅವಕಾಶ ಸಿಗುವುದು ಖುಷಿಯ ವಿಚಾರ. ಮುಂದೆ ಅವರ ಜೊತೆಗೆ ಬಿಎಫ್‌ಸಿ ತಂಡದಲ್ಲಿ ಆಡುವ ಅವಕಾಶ ಸಿಗುವ ನಿರೀಕ್ಷೆಯಿದೆ - ವಿನೀತ್ ವೆಂಕಟೇಶ್