ಫುಟ್‌ಬಾಲ್ ದಂತಕಥೆ ಮೆಸ್ಸಿ ಮತ್ತು ಉದಯೋನ್ಮುಖ ತಾರೆ ಲ್ಯಾಮಿನ್ ಯಮಾಲ್ 2026ರ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. 19 ವರ್ಷಗಳ ಹಿಂದೆ, 2007ರಲ್ಲಿ ನಡೆದ ಒಂದು ಚಾರಿಟಿ ಫೋಟೋಶೂಟ್‌ನಲ್ಲಿ ಮೆಸ್ಸಿ, ಹಸುಗೂಸಾಗಿದ್ದ ಯಮಾಲ್‌ನನ್ನು ಎತ್ತಿಕೊಂಡಿದ್ದ ಅಪರೂಪದ ಚಿತ್ರ ವೈರಲ್ ಆಗಿದೆ.
ನ್ಯೂಜೆರ್ಸಿ (ಜು.16): ಪ್ರಪಂಚದ ಯಾವುದೇ ಸಿನಿಮೀಯ ಸ್ಟೋರಿ ರೈಟರ್‌ಗೂ ಹೊಳೆಯದಂತಹ, ನಂಬಲು ಅಸಾಧ್ಯವಾದ ಅದ್ಭುತ ಕಾಕತಾಳೀಯ ಘಟನೆ ಫುಟ್‌ಬಾಲ್ ಜಗತ್ತಿನಲ್ಲಿ ನಿಜವಾಗುತ್ತಿದೆ. ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತು ವಿಶ್ವ ಫುಟ್‌ಬಾಲ್‌ನ ಉದಯೋನ್ಮುಖ ತಾರೆ ಲ್ಯಾಮಿನ್ ಯಮಾಲ್ ನಡುವೆ ಫಿಫಾ ವಿಶ್ವಕಪ್ 2026ರ ಮಹಾಫೈನಲ್ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಾರ್ಸಿಲೋನಾದ ಪ್ರಸಿದ್ಧ 'ಲಾ ಮಾಸಿಯಾ' (La Masia) ಅಕಾಡೆಮಿಯ ಈ ಇಬ್ಬರು ಅಪ್ರತಿಮ ಆಟಗಾರರು ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಆದರೆ, ಈ ಐತಿಹಾಸಿಕ ಪಂದ್ಯದ ಹಿಂದಿರುವುದು 2007ರ ಒಂದು ಅಪರೂಪದ ಬಾತ್‌ಟಬ್ ಫೋಟೋಶೂಟ್‌ನ ರೋಚಕ ಕಥೆ!
2007ರ ಆ ದಿನ ನಡೆದಿದ್ದೇನು?
ಅದು ಡಿಸೆಂಬರ್ 2007. ಆಗಿನ್ನು 20 ವರ್ಷದ ಯುವ ಆಟಗಾರನಾಗಿದ್ದ, ವಿಪರೀತ ಸಂಕೋಚ ಸ್ವಭಾವದ ಲಿಯೋನೆಲ್ ಮೆಸ್ಸಿ ಪ್ಲಾಸ್ಟಿಕ್‌ನ ನೀಲಿ ಬಣ್ಣದ ಟಬ್ ಒಂದರ ಮುಂದೆ ನಿಂತಿದ್ದರು. ಆ ಟಬ್‌ನಲ್ಲಿ ಕೇವಲ ಐದು ತಿಂಗಳ ಹಸುಗೂಸೊಂದು ಇತ್ತು. ಕೈಯಲ್ಲಿ ಮಗುವನ್ನು ಹೇಗೆ ಹಿಡಿಯಬೇಕು ಎಂದು ತಿಳಿಯದೆ ಮೆಸ್ಸಿ ತಡಬಡಾಯಿಸುತ್ತಿದ್ದರೆ, ಆ ಮಗು ಮಾತ್ರ ತನ್ನನ್ನು ಹಿಡಿದಿರುವುದು ಮುಂದೊಂದು ದಿನ ಜಾಗತಿಕ ಫುಟ್‌ಬಾಲ್ ಇತಿಹಾಸವನ್ನೇ ಬದಲಾಯಿಸಲಿರುವ ಮಹಾಪುರುಷ ಎಂಬ ಅರಿವೇ ಇಲ್ಲದೆ ನೀರಿನಲ್ಲಿ ಆಟವಾಡುತ್ತಿತ್ತು.
'ಡಯಾರಿಯೋ ಸ್ಪೋರ್ಟ್' ಮತ್ತು ಯೂನಿಸೆಫ್ (UNICEF) ಸಂಸ್ಥೆಗಳು ಆಯೋಜಿಸಿದ್ದ ಚಾರಿಟಿ ಕ್ಯಾಲೆಂಡರ್ ಫೋಟೋಶೂಟ್‌ಗಾಗಿ ಛಾಯಾಗ್ರಾಹಕ ಜೋನ್ ಮಾನ್‌ಫೋರ್ಟ್ ಈ ಚಿತ್ರವನ್ನು ಕ್ಲಿಕ್ಕಿಸಿದ್ದರು. ಬಾರ್ಸಿಲೋನಾದ ಶ್ರಮಿಕರು ವಾಸಿಸುವ 'ರೊಕಾಫೊಂಡಾ' ನೆರೆಹೊರೆಯ ಈ ಮಗುವಿನ ಪೋಷಕರು ಲಕ್ಕಿ ಡ್ರಾ ಮೂಲಕ ಈ ಫೋಟೋಶೂಟ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದ್ದರು. ಅಂದು ಅದೊಂದು ಕೇವಲ ಸಾಮಾನ್ಯ ಚಾರಿಟಿ ಫೋಟೋಶೂಟ್ ಆಗಿತ್ತಷ್ಟೇ. ಆದರೆ 19 ವರ್ಷಗಳ ಬಳಿಕ, ಅಂದು ಟಬ್‌ನಲ್ಲಿದ್ದ ಅದೇ ಮಗು ಇಂದು ವಿಶ್ವಕಪ್ ಫೈನಲ್‌ನಲ್ಲಿ ಮೆಸ್ಸಿಗೆ ಎದುರಾಗಿ ನಿಲ್ಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ! ಯಮಾಲ್ ತಂದೆ ಈ ಹಳೆಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ ಇಂಟರ್ನೆಟ್ ಅಚ್ಚರಿಯಲ್ಲಿ ಮುಳುಗಿಹೋಗಿದೆ.
ಗುರು-ಶಿಷ್ಯರ ಮಹಾ ಸಂಗ್ರಾಮ ಮತ್ತು ಸೆಮಿಫೈನಲ್ ಹಾದಿ
ಕತಾರ್ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿರುವ ಲಿಯೋನೆಲ್ ಮೆಸ್ಸಿ, ಈ ಬಾರಿಯ ಟೂರ್ನಿಯಲ್ಲೂ ಅರ್ಜೆಂಟೀನಾ ತಂಡವನ್ನು ಅಧಿಪತಿಯಂತೆ ಮುನ್ನಡೆಸುತ್ತಿದ್ದಾರೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೆಸ್ಸಿ ನೀಡಿದ ಎರಡು ಅದ್ಭುತ ಅಸಿಸ್ಟ್‌ಗಳು (Assists) ಅರ್ಜೆಂಟೀನಾ ಭರ್ಜರಿ ಕಂಬ್ಯಾಕ್ ಮಾಡಲು ಕಾರಣವಾಗಿತ್ತು. ಈ ಟೂರ್ನಿಯಲ್ಲಿ ಮೆಸ್ಸಿ ಈಗಾಗಲೇ 8 ಗೋಲುಗಳನ್ನು ಬಾರಿಸಿ ಅಬ್ಬರಿಸಿದ್ದಾರೆ.
ಮತ್ತೊಂದೆಡೆ, ವಯಸ್ಸಿನ ಮಿತಿಗಳನ್ನು ಮೀರಿ ಬೆಳೆದಿರುವ 18 ವರ್ಷದ ಹದಿಹರೆಯದ ತಾರೆ ಲ್ಯಾಮಿನ್ ಯಮಾಲ್ ಸ್ಪೇನ್ ತಂಡದ ಆಶಾಕಿರಣವಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ 2-0 ಅಂತರದ ಗೆಲುವು ಸಾಧಿಸುವಲ್ಲಿ ಯಮಾಲ್ ಅವರ ಹೈ-ಪ್ರೆಸ್ಸಿಂಗ್ ಆಟವೇ ಕಾರಣವಾಗಿತ್ತು, ಇದು ಪಂದ್ಯದ ಆರಂಭದಲ್ಲೇ ಪೆನಾಲ್ಟಿ ತಂದುಕೊಟ್ಟಿತ್ತು. ಸ್ಪೇನ್ ಪರ ಪ್ರಮುಖ ಟೂರ್ನಿಗಳಲ್ಲಿ ಯಮಾಲ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಎಲ್ಲಾ 12 ಪಂದ್ಯಗಳಲ್ಲೂ ಸ್ಪೇನ್ ಜಯಭೇರಿ ಬಾರಿಸಿರುವುದರಿಂದ ಇವರು ತಂಡದ ಲಕ್ಕಿ ಚಾರ್ಮ್ ಕೂಡ ಆಗಿದ್ದಾರೆ.
'ಲಾ ಮಾಸಿಯಾ' ಅಕಾಡೆಮಿಯ ರಕ್ತ
ಈ ಫುಟ್‌ಬಾಲ್ ತಾರೆಗಳ ಹಿನ್ನೆಲೆ ಕೂಡ ಅಷ್ಟೇ ರೋಚಕವಾಗಿದೆ. ಮೆಸ್ಸಿ ಮತ್ತು ಯಮಾಲ್ ಇಬ್ಬರೂ ಬಾರ್ಸಿಲೋನಾದ ಪ್ರಸಿದ್ಧ 'ಲಾ ಮಾಸಿಯಾ' ಅಕಾಡೆಮಿಯಲ್ಲೇ ಪಳಗಿದವರು. ಮೆಸ್ಸಿ ಅಲ್ಲಿ ತನ್ನ ಶ್ರೇಷ್ಠತೆಯನ್ನು ರೂಪಿಸಿಕೊಂಡರೆ, ವರ್ಷಗಳ ನಂತರ ಅದೇ ಅಕಾಡೆಮಿ ಯಮಾಲ್ ಎಂಬ ಕಚ್ಚಾ ವಜ್ರವನ್ನು ನಯಗೊಳಿಸಿ ಜಗತ್ತಿಗೆ ಪರಿಚಯಿಸಿತು. ಹೀಗಾಗಿ ಈ ಫೈನಲ್ ಪಂದ್ಯ ಕೇವಲ ಎರಡು ದೇಶಗಳ ನಡುವಿನ ಹೋರಾಟವಲ್ಲ, ಇದು ಬ್ಲೌಗ್ರಾನಾ (ಬಾರ್ಸಿಲೋನಾ) ಅಕಾಡೆಮಿಯ ಪ್ರದರ್ಶನವಾಗಿದೆ. ಸ್ಪ್ಯಾನಿಷ್ ಮಾಧ್ಯಮಗಳು ಇದನ್ನು ತಮಾಷೆಯಾಗಿ "ಬಾತ್ ವಾಟರ್ ಬ್ಯಾಪ್ಟಿಸಮ್" (ಸ್ನಾನದ ನೀರಿನ ದೀಕ್ಷೆ) ಎಂದು ಕರೆಯುತ್ತಿದ್ದು, ಮೆಸ್ಸಿ ಯೂನಿಸೆಫ್ ಬಟ್ಟೆಯ ಮೂಲಕ ತನ್ನ ಫುಟ್‌ಬಾಲ್ ಜ್ಞಾನವನ್ನು ಮಗುವಿಗೆ ವರ್ಗಾಯಿಸಿದ್ದರು ಎಂದು ಬಣ್ಣಿಸುತ್ತಿವೆ.
ತಲೆಮಾರುಗಳ ಅಪರೂಪದ ಮುಖಾಮುಖಿ
ಫುಟ್‌ಬಾಲ್ ಇತಿಹಾಸದಲ್ಲಿ ಇಂತಹ ಅಪರೂಪದ ತಲೆಮಾರುಗಳ ಮುಖಾಮುಖಿ ಸಿಗುವುದು ತೀರಾ ವಿರಳ. ಪೀಲೆ ಎಂದಿಗೂ ಮರಡೋನಾ ವಿರುದ್ಧ ಆಡಲಿಲ್ಲ, ಮರಡೋನಾ ಎಂದಿಗೂ ಮೆಸ್ಸಿಯನ್ನು ಮೈದಾನದಲ್ಲಿ ಎದುರಿಸಲಿಲ್ಲ. ಸಾಮಾನ್ಯವಾಗಿ ಮಹಾನ್ ಆಟಗಾರರ ಕಾಲಘಟ್ಟಗಳು ಒಂದಕ್ಕೊಂದು ತಾಕದಂತೆ ಹಾದುಹೋಗುತ್ತವೆ. ಆದರೆ ಇಲ್ಲಿ, ಆಧುನಿಕ ಫುಟ್‌ಬಾಲ್ ಇತಿಹಾಸದ ಶ್ರೇಷ್ಠ ಆಟಗಾರನ ವೃತ್ತಿಜೀವನದ ಸಂಧ್ಯಾಕಾಲ ಮತ್ತು ಫುಟ್‌ಬಾಲ್‌ನ ಮುಂದಿನ ತಲೆಮಾರಿನ ಸೂಪರ್‌ಸ್ಟಾರ್‌ನ ಉದಯದ ಕಾಲಘಟ್ಟಗಳು ಫಿಫಾ ವಿಶ್ವಕಪ್‌ನ ಅತ್ಯುನ್ನತ ವೇದಿಕೆಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿವೆ.

2007ರಲ್ಲಿ ಲ್ಯಾಮಿನ್ ಯಮಾಲ್‌ರನ್ನು ಯುನಿಸೆಫ್ ಕಾರ್ಯಕ್ರಮದ ಭಾಗವಾಗಿ ಬಾತ್‌ಟಬ್‌ನಲ್ಲಿ ಸ್ನಾನ ಮಾಡಿದ್ದ ಲಿಯೋನೆಲ್ ಮೆಸ್ಸಿ
ಇತಿಹಾಸ ಸೃಷ್ಟಿಗೆ ಉಭಯ ಆಟಗಾರರ ಸಜ್ಜು
ತನ್ನ 20ರ ಹರೆಯಕ್ಕೆ ಕಾಲಿಡುವ ಮುನ್ನವೇ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸುವುದು ಮತ್ತು ತನ್ನ ಆರಾಧ್ಯ ದೈವ ಮೆಸ್ಸಿ ಜೊತೆ ಜರ್ಸಿ ಬದಲಾಯಿಸಿಕೊಳ್ಳುವುದು ಯಮಾಲ್ ಕನಸಾಗಿದೆ. ಇತ್ತ ಮೆಸ್ಸಿಗೆ, ತಾವು ಒಂದೊಮ್ಮೆ ಕೈಯಲ್ಲಿ ಮುದ್ದಾಡಿದ್ದ ಮಗುವಿನ ವಿರುದ್ಧವೇ ತಾವು ಗೆದ್ದ ವಿಶ್ವಕಪ್ ರಕ್ಷಿಸಿಕೊಳ್ಳುವ ಕೊನೆಯ ಸವಾಲು ಎದುರಾಗಿದೆ. ಆದರೆ ನ್ಯೂಜೆರ್ಸಿಯಲ್ಲಿ ಪಂದ್ಯದ ಆರಂಭಿಕ ವಿಸಿಲ್ ಮೊಳಗುತ್ತಿದ್ದಂತೆ ಈ ಎಲ್ಲಾ ಭಾವನಾತ್ಮಕ ಕಥೆಗಳು ಮರೆಯಾಗಲಿವೆ. ಅಲ್ಲಿ ಕೇವಲ ತಾಂತ್ರಿಕ ಹೋರಾಟ, ಉಸಿರುಗಟ್ಟಿಸುವಂಥ ಒತ್ತಡ ಮತ್ತು 90 ನಿಮಿಷಗಳ ಕಠಿಣ ವಾಸ್ತವ ಮಾತ್ರ ಉಳಿಯಲಿದೆ. ಆದರೆ, ಫಲಿತಾಂಶ ಏನೇ ಇರಲಿ, 19 ವರ್ಷಗಳ ಹಿಂದೆ ರೊಸಾರಿಯೊದ ನಾಚಿಕೆ ಸ್ವಭಾವದ ಯುವಕ ಪ್ಲಾಸ್ಟಿಕ್ ಟಬ್‌ನಲ್ಲಿದ್ದ ಮಗುವನ್ನು ಬಾತ್‌ಟಬ್‌ನಲ್ಲಿ ಸ್ನಾನ ಮಾಡಿದ ಕಥೆ ಮಾತ್ರ ಫುಟ್‌ಬಾಲ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿಯಲಿದೆ.
