ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಇಂಗ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿದೆ. ಪಂದ್ಯದ ಕೊನೆಯ ಕ್ಷಣಗಳವರೆಗೂ 1-0 ಅಂತರದಿಂದ ಹಿನ್ನಡೆಯಲ್ಲಿದ್ದ ಅರ್ಜೆಂಟೀನಾ, ಸತತ ಎರಡು ಗೋಲುಗಳನ್ನು ಬಾರಿಸಿ ಫೈನಲ್‌ಗೆ ಪ್ರವೇಶಿಸಿತು. ಈಗ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ.

ಅಟ್ಲಾಂಟಾ: ವಿಶ್ವಕಪ್‌ನ ಜಿದ್ದಾಜಿದ್ದಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಇಂಗ್ಲೆಂಡ್ ಅನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಅರ್ಜೆಂಟೀನಾ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದಂತಾಗಿದೆ. ಪಂದ್ಯದ 85ನೇ ನಿಮಿಷದವರೆಗೂ ಒಂದು ಗೋಲಿನಿಂದ ಹಿಂದಿದ್ದ ಅರ್ಜೆಂಟೀನಾ, ಕೊನೆಯ ಕ್ಷಣಗಳಲ್ಲಿ ಎರಡು ಗೋಲುಗಳನ್ನು ಬಾರಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಎರಡೂ ತಂಡಗಳು ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ಮೊದಲಾರ್ಧ ಗೋಲು ರಹಿತವಾಗಿತ್ತು. ಪಂದ್ಯ ಶುರುವಾದ ಮೊದಲ ಕೆಲ ನಿಮಿಷಗಳಲ್ಲೇ ಆಟ ಸ್ವಲ್ಪ ರಫ್ ಆಗಿತ್ತು. ಆದರೆ, ಎರಡನೇ ಅವಧಿ ಶುರುವಾಗಿ ಹತ್ತೇ ನಿಮಿಷದಲ್ಲಿ ಆ್ಯಂಥನಿ ಗೋರ್ಡನ್ ಮೂಲಕ ಇಂಗ್ಲೆಂಡ್ ಮುನ್ನಡೆ ಸಾಧಿಸಿತು. ಬಲಭಾಗದಿಂದ ಮೋರ್ಗನ್ ರೋಜರ್ಸ್ ನೀಡಿದ ಅದ್ಭುತ ಕ್ರಾಸ್ ಅನ್ನು ಗೋರ್ಡನ್, ಅರ್ಜೆಂಟೀನಾ ಗೋಲ್‌ಕೀಪರ್ ಎಮಿ ಮಾರ್ಟಿನೆಜ್‌ರನ್ನು ವಂಚಿಸಿ ಗೋಲು ಬಾರಿಸಿದರು.

ರಕ್ಷಣಾತ್ಮಕ ಆಟಕ್ಕೆ ಮೊರೆಹೋಗಿ ಕೈ ಸುಟ್ಟುಕೊಂಡ ಇಂಗ್ಲೆಂಡ್

ಗೋಲು ಗಳಿಸಿದ ನಂತರ ಇಂಗ್ಲೆಂಡ್ ತಂಡ ಸಂಪೂರ್ಣವಾಗಿ ಡಿಫೆನ್ಸ್‌ಗೆ ಇಳಿಯಿತು. ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಕೇನ್ ಕೂಡ ರಕ್ಷಣಾತ್ಮಕ ಆಟವಾಡುತ್ತಿದ್ದ ದೃಶ್ಯ ಅಟ್ಲಾಂಟಾ ಸ್ಟೇಡಿಯಂನಲ್ಲಿ ಕಂಡುಬಂತು. ಇತ್ತ, ಇಂಗ್ಲೆಂಡ್ ಗೋಲ್‌ಕೀಪರ್ ಜೋರ್ಡಾನ್ ಪಿಕ್‌ಫೋರ್ಡ್, ಅರ್ಜೆಂಟೀನಾದ ಎರಡು ಖಚಿತ ಗೋಲುಗಳನ್ನು ತಡೆದು ತಂಡಕ್ಕೆ ಆಸರೆಯಾದರು.

ಆದರೆ, ಆಟ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಎಂಜೊ ಫೆರ್ನಾಂಡೆಜ್ ಮೂಲಕ ಅರ್ಜೆಂಟೀನಾ ಸಮಬಲ ಸಾಧಿಸಿತು. ಇದಕ್ಕೂ ಮುನ್ನ ಎಂಜೊ ಬಾರಿಸಿದ ಒಂದು ಬಲವಾದ ಶಾಟ್ ಅನ್ನು ಪಿಕ್‌ಫೋರ್ಡ್ ತಡೆದಿದ್ದರು. ಆದರೆ, ಮೆಸ್ಸಿ ತೆಗೆದ ಕಾರ್ನರ್‌ನಿಂದ ಸಿಕ್ಕ ಅವಕಾಶದಲ್ಲಿ ಎಂಜೊ ಒಂದು ಅದ್ಭುತ ಲಾಂಗ್ ರೇಂಜರ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಪಂದ್ಯ ಮುಗಿಯಲು ಕ್ಷಣಗಣನೆ ಶುರುವಾಗಿದ್ದಾಗ, ಮೆಸ್ಸಿ ಕೊಟ್ಟ ಒಂದು ಭರ್ಜರಿ ಕ್ರಾಸ್ ಅನ್ನು ಲೌಟಾರೊ ಮಾರ್ಟಿನೆಜ್ ಗೋಲಾಗಿಸಿ ಅರ್ಜೆಂಟೀನಾಗೆ ರೋಚಕ ಗೆಲುವು ತಂದುಕೊಟ್ಟರು. ಇದೀಗ, ಜೂನ್ 19 ರಂದು ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಅರ್ಜೆಂಟೀನಾ, ಸ್ಪೇನ್ ತಂಡವನ್ನು ಎದುರಿಸಲಿದೆ.