FIFA World Cup:1000ನೇ ಪಂದ್ಯದಲ್ಲಿ ಗೋಲು ಸಿಡಿಸಿ ಅರ್ಜೆಂಟೀನಾವನ್ನು ಕ್ವಾರ್ಟರ್ ಫೈನಲ್‌ಗೆ ಕೊಂಡೊಯ್ದ ಮೆಸ್ಸಿ..!
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ
ಆಸ್ಟ್ರೇಲಿಯಾ ಎದುರು ಭರ್ಜರಿ ಗೆಲುವು ಸಾಧಿಸಿದ ಲಿಯೋನೆಲ್ ಮೆಸ್ಸಿ ಪಡೆ
ಫಿಫಾ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಮೊದಲ ಬಾರಿಗೆ ಗೋಲು ಬಾರಿಸಿದ ಮೆಸ್ಸಿ
ದೋಹಾ(ಡಿ.04): ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಆಸ್ಟ್ರೇಲಿಯಾ ಎದುರು 2-1 ಅಂತರದ ಗೆಲುವು ಸಾಧಿಸುವ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ವೃತ್ತಿಜೀವನದ 1000ನೇ ಪಂದ್ಯವನ್ನಾಡಿದ ಲಿಯೋನೆಲ್ ಮೆಸ್ಸಿ, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಗೋಲು ಬಾರಿಸುವ ಮೂಲಕ ತಂಡವನ್ನು ಕ್ವಾರ್ಟರ್‌ಫೈನಲ್‌ಗೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡವು ನೆದರ್‌ಲೆಂಡ್ಸ್ ಎದುರು ಕಾದಾಡಲಿದೆ.
ಇಲ್ಲಿನ ಅಹಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೆಸ್ಸಿ ಬಾರಿಸಿದ ಗೋಲು, ಅರ್ಜೆಂಟೀನಾ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿತು. ವೃತ್ತಿಜೀವನದ 1000ನೇ ಫುಟ್ಬಾಲ್ ಪಂದ್ಯವನ್ನಾಡಿದ ಲಿಯೋನೆಲ್ ಮೆಸ್ಸಿ 789ನೇ ಗೋಲು ಬಾರಿಸಿ ಸಂಭ್ರಮಿಸಿದರು. 35 ವರ್ಷದ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿಜೀವನದ 5ನೇ ಫಿಫಾ ವಿಶ್ವಕಪ್ ಪಂದ್ಯವನ್ನಾಡುತ್ತಿದ್ದು, ಐದು ವಿಶ್ವಕಪ್ ಟೂರ್ನಿಗಳ ಪೈಕಿ ಮೆಸ್ಸಿ ಇದೇ ಮೊದಲ ಬಾರಿಗೆ ನಾಕೌಟ್ ಪಂದ್ಯದಲ್ಲಿ ಗೋಲು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
FIFA World Cup: ಕ್ವಾರ್ಟರ್ ಫೈನಲ್‌ಗೆ ನೆದರ್‌ಲೆಂಡ್ಸ್; ಬೈ ಬೈ ಅಮೆರಿಕ..!
ಇನ್ನು ಆಸ್ಟ್ರೇಲಿಯಾ ಫುಟ್ಬಾಲ್ ತಂಡದ ಗೋಲು ಕೀಪರ್ ಮಾಡಿದ ಎಡವಟ್ಟಿನ ಲಾಭ ಪಡೆದ ಜೂಲಿಯನ್ ಅಲ್ವರೆಜ್ ಚಾಣಾಕ್ಷವಾಗಿ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ತಂಡಕ್ಕೆ 2-1 ಗೋಲುಗಳ ಗೆಲುವು ತಂದಿತ್ತರು. ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಚ್ಚರಿಯ ರೀತಿಯಲ್ಲಿ ಅಂತಿಮ 16ರ ಘಟ್ಟ ಪ್ರವೇಶಿಸಿದ್ದ ಆಸ್ಟ್ರೇಲಿಯಾ ತಂಡವು, ನಾಕೌಟ್ ಹಂತದ ಮೊದಲ ಪಂದ್ಯದಲ್ಲೇ ಸೋತು ತನ್ನ ಅಭಿಯಾನ ಮುಗಿಸಿದೆ.
ಇನ್ನು ಪಂದ್ಯ ಮುಕ್ತಾಯದ ಬಳಿಕ ಅರ್ಜೆಂಟೀನಾದ ಟಿವಿಯೊಂದರ ಜತೆಗೆ ಮಾತನಾಡಿದ ಲಿಯೋನೆಲ್ ಮೆಸ್ಸಿ, ಇದು ಒಂದು ದೈಹಿಕವಾದ ಆಟವಾಗಿದ್ದು, ನಮ್ಮ ತಂಡದ ಪ್ರದರ್ಶನದ ಬಗ್ಗೆ ನನಗೆ ಖುಷಿಯಿದೆ. ನಾವು ಈ ಗೆಲುವಿನೊಂದಿಗೆ ಮತ್ತಷ್ಟು ಎತ್ತರಕ್ಕೆ ಹೋಗಲು ಎದುರು ನೋಡುತ್ತಿದ್ದೇವೆ ಎಂದು ಅರ್ಜೆಂಟೀನಾ ತಂಡದ ನಾಯಕ ಹೇಳಿದ್ದಾರೆ.
ಫ್ರಾನ್ಸ್, ಇಂಗ್ಲೆಂಡ್ ಫೇವರಿಟ್ಸ್!
ದೋಹಾ: ಗುಂಪು ಹಂತವನ್ನು ಸೋಲಿನೊಂದಿಗೆ ಕೊನೆಗೊಳಿಸಿದ ಫ್ರಾನ್ಸ್ ಹಾಗೂ ಪೋಲೆಂಡ್, ಭಾನುವಾರ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಲಿವೆ. ಟ್ಯುನೀಶಿಯಾ ವಿರುದ್ಧ ಎಂಬಾಪೆ, ದೆಂಬೇಲೆ, ಗ್ರೀಜ್‌ಮನ್‌ರನ್ನು ಮೀಸಲು ಪಡೆಯಲ್ಲಿಟ್ಟು ದ್ವಿತೀಯ ದರ್ಜೆ ತಂಡವನ್ನು ಕಣಕ್ಕಿಳಿಸಿದ ಕೋಚ್ ಡೆಸ್‌ಚ್ಯಾಂಫ್ಸ್ ಲೆಕ್ಕಾಚಾರ ನಿರೀಕ್ಷಿತ ಫಲ ನೀಡದಿದ್ದರೂ, ಹಾಲಿ ಚಾಂಪಿಯನ್ ಫ್ರಾನ್ಸ್ ಪಡೆಯಲ್ಲಿ ಆತ್ಮವಿಶ್ವಾಸ ಕಡಿಮೆಯಾಗಿಲ್ಲ.
ಮೊದಲ ಬಾರಿಗೆ ಸತತ 3 ವಿಶ್ವಕಪ್‌ಗಳಲ್ಲಿ ನಾಕೌಟ್ ಪ್ರವೇಶಿಸಿರುವ ಫ್ರಾನ್ಸ್, 2006ರ ಬಳಿಕ ನಾಕೌಟ್‌ಗೇರಿದ ಮೊದಲ ಹಾಲಿ ಚಾಂಪಿಯನ್ ತಂಡ ಎನ್ನುವ ಹಿರಿಮೆಗೂ ಪಾತ್ರವಾಗಿದೆ. ಮೆಸ್ಸಿಯ ಪೆನಾಲ್ಟಿತಡೆದರೂ ಪೋಲೆಂಡ್‌ಗೆ ಅರ್ಜೆಂಟೀನಾ ವಿರುದ್ಧ ಸೋಲಿನಿಂದ ಪಾರಾಗಲು ಆಗಿರಲಿಲ್ಲ. ಮೆಸ್ಸಿ ಪಡೆ ನೀಡಿದ ಪೈಪೋಟಿಗಿಂತ ಹೆಚ್ಚು ಫ್ರಾನ್ಸ್‌ನಿಂದ ಎದುರಾಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಪೋಲೆಂಡ್ ವಿರುದ್ಧ ಫ್ರಾನ್ಸ್ ಕೊನೆ ಬಾರಿಗೆ ಸೋತಿದ್ದು 40 ವರ್ಷಗಳ ಹಿಂದೆ. ಈ ಪಂದ್ಯದಲ್ಲೂ ಫ್ರಾನ್ಸ್ ಗೆಲ್ಲುವ ಫೇವರಿಟ್ ಎನಿಸಿದೆ.
ಇಂಗ್ಲೆಂಡ್‌ಗೆ ಸುಲಭ ತುತ್ತಾಗುತ್ತಾ ಸೆನೆಗಲ್?
ಅಲ್-ಖೋರ್: ಗುಂಪು ಹಂತದಲ್ಲಿ ಅಮೆರಿಕ ವಿರುದ್ಧ ಅಚ್ಚರಿಯ ಗೋಲು ರಹಿತ ಡ್ರಾ ಹೊರತುಪಡಿಸಿ, ಮತ್ತೆರಡು ಪಂದ್ಯಗಳಲ್ಲಿ ಒಟ್ಟು 9 ಗೋಲು ಬಾರಿಸಿದ ಇಂಗ್ಲೆಂಡ್, ತನ್ನ ಆಕ್ರಮಣಕಾರಿ ಆಟದ ಮೂಲಕ ಈ ವಿಶ್ವಕಪ್‌ನಲ್ಲಿ ಸದ್ದು ಮಾಡಿದೆ. ಸೆನೆಗಲ್ ವಿರುದ್ಧ ಪ್ರಿ ಕ್ವಾರ್ಟರ್‌ನಲ್ಲೂ ತನ್ನ ಬಲಿಷ್ಠ ತಾಂತ್ರಿಕ ಆಟದ ಮೂಲಕ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿ ಸೌಥ್‌ಗೇಟ್ ಮಾರ್ಗದರ್ಶನದ ತಂಡ ಇದೆ. ನಾಯಕ ಹ್ಯಾರಿ ಕೇನ್ ಇನ್ನೂ ಗೋಲಿನ ಖಾತೆ ತೆರೆಯದಿದ್ದರೂ, ಇಂಗ್ಲೆಂಡ್‌ಗೆ ಯಾವುದೇ ತಲೆಬಿಸಿ ಎದುರಾಗಿಲ್ಲ. ಮತ್ತೊಂದೆಡೆ 3ನೇ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಸೆನೆಗಲ್ 2002ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್‌ಗೇರಲು ಕಾತರಿಸುತ್ತಿದೆ.
ಇಂದಿನ ಪಂದ್ಯಗಳು
ಫ್ರಾನ್ಸ್-ಪೋಲೆಂಡ್, ರಾತ್ರಿ 8.30ಕ್ಕೆ
ಇಂಗ್ಲೆಂಡ್-ಸೆನೆಗಲ್, ರಾತ್ರಿ 12.30ಕ್ಕೆ