ಅಬ್ಬಬ್ಬಾ..ವರ್ಷಕ್ಕೆ 3620 ಕೋಟಿ ರೂಪಾಯಿಗೆ ಸೌದಿ ಅರೇಬಿಯಾ ಕ್ಲಬ್‌ಗೆ ಮೆಸ್ಸಿ ಟ್ರಾನ್ಸ್‌ಫರ್?
ಒಂದಲ್ಲ.. ಎರಡಲ್ಲ.. ವರ್ಷಕ್ಕೆ ಬರೋಬ್ಬರಿ 3620 ಕೋಟಿ ರೂಪಾಯಿಗಳ ಡೀಲ್. ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡದ ಲಿಯೋನೆಲ್ ಮೆಸ್ಸಿಗೆ ಸೌದಿ ಅರೇಬಿಯಾದ ಕ್ಲಬ್ ಆಫರ್ ಮಾಡಿರುವ ಮೊತ್ತ. ಈ ಡೀಲ್ ಏನಾದರೂ ಖಚಿತವಾದಲ್ಲಿ ವಿಶ್ವದ ಅತ್ಯಂತ ದುಬಾರಿ ಅಥ್ಲೀಟ್ ಎನ್ನುವ ಗೌರವಕ್ಕೆ ಪಾತ್ರರಾಗಲಿದ್ದಾರೆ.
ನವದೆಹಲಿ (ಮೇ.4): ವಿಶ್ವದ ದಿಗ್ಗಜ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ವಿಚಾರವಾಗಿ ದೊಡ್ಡ ನ್ಯೂಸ್ ಫ್ರಾನ್ಸ್‌ನಿಂದ ಬಂದಿದೆ. ಮೂಲಗಳ ವರದಿಯನ್ನು ನಂಬುವುದಾದರೆ, ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಲಿಯೋನೆಲ್ ಮೆಸ್ಸಿನ ಒಪ್ಪಂದವನ್ನು ನವೀಕರಣ ಮಾಡುವ ಪ್ರಸ್ತಾಪ ಮಾಡುತ್ತಿಲ್ಲ. ಅದಕ್ಕೆ ಕಾರಣ, ಮುಂದಿನ ಋತುವಿನಲ್ಲಿ ಲಿಯೋನೆಲ್ ಮೆಸ್ಸಿ ಸೌದಿ ಅರೇಬಿಯಾದ ಕ್ಲಬ್ ಪರವಾಗಿ ಆಡುತ್ತಾರೆ ಎನ್ನುವ ಊಹಾಪೋಹಗಳಿಗೆ ಬಲ ಸಿಕ್ಕಿರುವುದು. ಲಿಯೋನೆಲ್ ಮೆಸ್ಸಿ ಇಡೀ ಕುಟುಂಬದೊಂದಿಗೆ ಸೌದಿ ಅರೇಬಿಯಾಕ್ಕೆ ಅನಧಿಕೃತ ಪ್ರವಾಸವನ್ನು ಮಾಡಿದ ನಂತರ, ಪಿಎಸ್‌ಜಿ ಅವರನ್ನು ಎರಡು ವಾರಗಳವರೆಗೆ ಅಮಾನತುಗೊಳಿಸಿದೆ ಮತ್ತು ಮೂರನೇ ಋತುವಿಗಾಗಿ ತನ್ನ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಿದೆ ಎಂದು ಫ್ರೆಂಚ್ ಕ್ರೀಡಾ ಪತ್ರಿಕೆ ಎಲ್'ಇಕ್ವಿಪ್ ವರದಿ ಮಾಡಿದೆ. ಸೌದಿ ಅರೇಬಿಯಾದ ಪ್ರವಾಸೋದ್ಯಮದ ರಾಯಭಾರಿಯಾಗಿರುವ ಲಿಯೋನೆಲ್ ಮೆಸ್ಸಿ, ತಮ್ಮ ಬಹುಕಾಲದ ಪ್ರತಿಸ್ಪರ್ಧಿ ಕ್ರಿಶ್ಚಿಯಾನೋ ರೊನಾಲ್ಡೋ ಅವರ ದಾರಿಯಲ್ಲಿಯೇ ಸಾಗಲು ಬಯಸಿದ್ದಾರೆ. ಈಗಾಗಲೇ ಸೌದಿ ಅರೇಬಿಯಾ ಕ್ಲಬ್ ಪರ ಆಡುತ್ತಿರುವ ರೊನಾಲ್ಡೋ ರೀತಿಯಲ್ಲಿಯೇ ಸೌದಿ ಕ್ಲಬ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಇದೆ. 2022ರ ಡಿಸೆಂಬರ್‌ನಲ್ಲಿ ಅಲ್ ನಾಸ್ರ್ ತಂಡದ ಜೊತೆ ರೊನಾಲ್ಡೋ ಸಹಿ ಹಾಕಿದ್ದು, ಇದರಿದಾಗಿ ಅವರ ವಾರ್ಷಿಕ ವೇತನ ಕೂಡ ದ್ವಿಗುಣಗೊಂಡಿದೆ. ಇದರಿಂದಾಗಿ ಪ್ರಸ್ತುತ ವಿಶ್ವದ ಅತ್ಯಂತ ದುಬಾರಿ ಆಟಗಾರ ಶ್ರೇಯ ಇವರ ಮುಡಿಗೇರಿದೆ.
ಈ ನಡುವೆ ಲಿಯೋನೆಲ್ ಮೆಸ್ಸಿ ಅವರ ಒಪ್ಪಂದ ರೊನಾಲ್ಡೋ ಅವರ ಒಪ್ಪಂದವನ್ನೂ ಮೀರಿಸಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸೌದಿಯ ಅಲ್-ಹಿಲಾಲ್ ಪರ ಮೆಸ್ಸಿ ಆಡುವ ಸಾಧ್ಯತೆ ಇದೆ.ಅಲ್-ನಾಸ್ರ್ ವಿರುದ್ಧದ ಇತ್ತೀಚಿನ ಪಂದ್ಯದ ವೇಳೆ, ಅಲ್-ಹಿಲಾಲ್ ಅಭಿಮಾನಿಗಳು ಮೆಸ್ಸಿಯ ಹೆಸರನ್ನು ಜೋರಾಗಿ ಕೂಗಿದ್ದು ಮಾತ್ರವಲ್ಲದೆ ಅವರ ಶರ್ಟ್‌ಗಳನ್ನೂ ಕೂಡ ಬೀಸಿದ್ದಾರೆ. ಬುಧವಾರ, ದಿ ಡೈಲಿ ಟೆಲಿಗ್ರಾಫ್, ಲಿಯೋನೆಲ್ ಮೆಸ್ಸಿಯ ಪ್ರತಿನಿಧಿಗಳು ಅಲ್-ಹಿಲಾಲ್ ಅವರೊಂದಿಗೆ ಸುಮಾರು 400 ಮಿಲಿಯನ್ ಯುರೋಗಳಷ್ಟು (ರೂ. 3,620 ಕೋಟಿ) ವಾರ್ಷಿಕ ಒಪ್ಪಂದಕ್ಕೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಿದೆ.
ಅನುಮತಿ ಇಲ್ಲದೇ ಸೌದಿಗೆ ತೆರಳಿದ ಲಿಯೋನೆಲ್ ಮೆಸ್ಸಿ ಅಮಾನತು!
ಆದರೆ, ಅಲ್ ಹಿಲಾಲ್ ಕ್ಲಬ್ ಆಗಲಿ, ಪಿಎಸ್‌ಜಿಯಾಗಲಿ ಈ ವರದಿಯನ್ನು ದೃಢೀಕರಿಸಿಲ್ಲ. ಸೌದಿ ಪ್ರವಾಸೋದ್ಯಮ ಸಚಿವ ಅಹ್ಮದ್ ಅಲ್-ಖತೀಬ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೆಸ್ಸಿ ಅವರ ರಾಜ್ಯ ಭೇಟಿಯನ್ನು ಖಚಿತಪಡಿಸಿದ್ದಾರೆ: "ಸೌದಿ ಪ್ರವಾಸೋದ್ಯಮ ರಾಯಭಾರಿ ಲಿಯೋನೆಲ್ ಮೆಸ್ಸಿ ಮತ್ತು ಅವರ ಕುಟುಂಬವನ್ನು ಸೌದಿಯಲ್ಲಿ ಅವರ ಎರಡನೇ ಪ್ರವಾಸಕ್ಕೆ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಮೆಸ್ಸಿಯನ್ನು ದಿರಿಯಾಹ್‌ಗೆ ಸ್ವಾಗತಿಸಿ, ಸಂಪ್ರದಾಯಗಳು, ಪರಂಪರೆ ಮತ್ತು ಇತಿಹಾಸ, ಲಿಯೋ ಮೆಸ್ಸಿ, ಅವರ ಪತ್ನಿ ಆಂಟೋನೆಲ್ಲಾ ಮತ್ತು ಅವರ ಪುತ್ರರಾದ ಮಾಟಿಯೊ ಮತ್ತು ಸಿರೊ ಅವರು ಸೌದಿಯ ಇತಿಹಾಸದ ಬಗ್ಗೆ ಕಲಿತು ಆಹ್ಲಾದಿಸಬಹುದಾದ ಪ್ರವಾಸವನ್ನು ಹೊಂದಿದ್ದರು ಮತ್ತು ಅಟ್-ಟುರೈಫ್‌ನಲ್ಲಿ ಸಾಕಷ್ಟು ಜನರನ್ನೂ ಇವರು ಭೇಟಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಎಲಾನ್ ಮಸ್ಕ್, ಮೆಸ್ಸಿಯನ್ನೂ ಹಿಂದಿಕ್ಕಿ 100 ಪ್ರಭಾವಿ ವ್ಯಕ್ತಿಗಳಲ್ಲಿ ನಂ.1 ಆದ ಶಾರುಖ್ ಖಾನ್