ಕ್ರಿಸ್ಟಿಯಾನೋ ರೊನಾಲ್ಡೋ ಬಳಿಕ ಲಿಯೋನೆಲ್ ಮೆಸ್ಸಿ ಸೌದಿ ಲೀಗ್‌ಗೆ ಸೇರ್ಪಡೆ?
ಲಿಯೋನೆಲ್ ಮೆಸ್ಸಿ ಫ್ರಾನ್ಸ್‌ನ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡ ತೊರೆಯುವ ಸಾಧ್ಯತೆ
ಕ್ರಿಸ್ಟಿಯಾನೋ ರೊನಾಲ್ಡೋ ಹಾದಿಯಲ್ಲೇ ಅರ್ಜೆಂಟೀನಾ ನಾಯಕ ಮೆಸ್ಸಿ?
ಸೌದಿಯ ಅಲ್-ಹಿಲಾಲ್ ಕ್ಲಬ್ ಮಾತುಕತೆ?
ರಿಯಾದ್(ಏ.07): ಪೋರ್ಚುಗಲ್ನ ಕ್ರಿಸ್ಟಿಯಾನೋ ರೊನಾಲ್ಡೋ ಬಳಿಕ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಕೂಡಾ ಸೌದಿ ಅರೇಬಿಯಾದ ಫುಟ್ಬಾಲ್ ಲೀಗ್ನಲ್ಲಿ ಆಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 35 ವರ್ಷದ ಮೆಸ್ಸಿ ಜೊತೆ ಸೌದಿಯ ಅಲ್-ಹಿಲಾಲ್ ಕ್ಲಬ್ ಮಾತುಕತೆ ನಡೆಸುತ್ತಿದ್ದು, ವಾರ್ಷಿಕ 400 ಮಿಲಿಯನ್ ಯುರೋ (ಸುಮಾರು 3573 ಕೋಟಿ ರು.) ಆಫರ್ ನೀಡಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಮೆಸ್ಸಿ ಫ್ರಾನ್ಸ್‌ನ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡದ ಪರ ಆಡುತ್ತಿದ್ದು, ಈ ಋುತುವಿನಲ್ಲಿ ಅವರ ಒಪ್ಪಂದ ಅಂತ್ಯಗೊಳ್ಳಲಿದೆ. ಬಳಿಕ ಅಲ್ ಹಿಲಾಲ್ ಪರ ಆಡಬಹುದು ಎಂದು ವರದಿಯಾಗಿದೆ. ಈಗಾಗಲೇ ರೊನಾಲ್ಡೋ ಸೌದಿಯ ಅಲ್-ನಸ್ರ್ ತಂಡದ ಪರ ಆಡುತ್ತಿದ್ದು, ವಾರ್ಷಿಕ 1767 ಕೋಟಿ ರುಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಫುಟ್ಬಾಲ್: 5 ಸ್ಥಾನ ಜಿಗಿತ ಕಂಡ ಭಾರತ
ಜ್ಯುರಿಚ್: ಇತ್ತೀಚೆಗೆ ಮ್ಯಾನ್ಮಾರ್ ಹಾಗೂ ಕಿರ್ಗಿಸ್ತಾನ ವಿರುದ್ಧದ 3 ದೇಶಗಳ ನಡುವಿನ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ಫಿಫಾ ಫುಟ್ಬಾಲ್ ಪುರುಷರ ವಿಶ್ವ ರ‍್ಯಾಂಕಿಂಗ್‌ನಲ್ಲಿ 101ನೇ ಸ್ಥಾನಕ್ಕೆ ಜಿಗಿದಿದೆ. ಗುರುವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 8.57 ರೇಟಿಂಗ್ ಅಂಕ ಏರಿಕೆಯೊಂದಿಗೆ 5 ಸ್ಥಾನ ಪ್ರಗತಿ ಸಾಧಿಸಿದೆ. ತಂಡ ಸದ್ಯ 1200.66 ಅಂಕ ಹೊಂದಿದೆ. 1996ರಲ್ಲಿ 94ನೇ ಸ್ಥಾನ ಪಡೆದಿದ್ದು ಭಾರತದ ಈವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. ಇದೇ ವೇಳೆ 46 ದೇಶಗಳ ಏಷ್ಯಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 19ನೇ ಸ್ಥಾನದಲ್ಲಿದೆ.
ಆರ್ಲಿನ್ಸ್ ಮಾಸ್ಟರ್ಸ್: ಸೈನಾ ನೆಹ್ವಾಲ್‌ಗೆ ಮೊದಲ ಸುತ್ತಲ್ಲೇ ಸೋಲು
ಅರ್ಜೆಂಟೀನಾ ನಂ.1: ಇದೇ ವೇಳೆ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ 6 ವರ್ಷಗಳಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದೆ. ಕಳೆದ 1 ವರ್ಷದಿಂದ ನಂ.1 ಸ್ಥಾನದಲ್ಲಿದ್ದ ಬ್ರೆಜಿಲ್ 3ನೇ ಸ್ಥಾನಕ್ಕೆ ಕುಸಿದರೆ, 3ನೇ ಸ್ಥಾನದಲ್ಲಿದ್ದ ಫ್ರಾನ್ಸ್ 2ನೇ ಸ್ಥಾನಕ್ಕೇರಿತು.
ವನಿತಾ ಫುಟ್ಬಾಲ್: ರಾಜ್ಯ ತಂಡ ಪ್ರಧಾನ ಸುತ್ತಿಗೆ
ಬೆಂಗಳೂರು: 27ನೇ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಗುಂಪು ಹಂತದ ಕೊನೆ ಪಂದ್ಯದಲ್ಲಿ ಸೋಲನುಭವಿಸಿದರೂ ಕರ್ನಾಟಕ ತಂಡ ಪ್ರಧಾನ ಸುತ್ತಿಗೇರಿದೆ. ರಾಜ್ಯ ತಂಡ ಗುರುವಾರ ಬೆಂಗಳೂರಿನಲ್ಲಿ ನಡೆದ ಗುಂಪು-6ರ ಕೊನೆ ಪಂದ್ಯದಲ್ಲಿ 21 ಬಾರಿಯ ಚಾಂಪಿಯನ್ ಮಣಿಪುರ ವಿರುದ್ಧ 2-4 ಗೋಲುಗಳಿಂದ ಪರಾಭವಗೊಂಡಿತು.
ಇದರೊಂದಿಗೆ ಮಣಿಪುರ 12 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನಿಯಾದರೆ, 9 ಅಂಕ ಸಂಪಾದಿಸಿದ ಕರ್ನಾಟಕ 2ನೇ ಸ್ಥಾನ ಪಡೆಯಿತು. 6 ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ ತಂಡಗಳ ಜೊತೆ ಉತ್ತಮ ಪ್ರದರ್ಶನ ತೋರಿದ 3 ತಂಡಗಳು ಫೈನಲ್ ಸುತ್ತಿಗೇರಿದವು. ರೈಲ್ವೇಸ್ ತಂಡಕ್ಕೆ ಫೈನಲ್ ಸುತ್ತಿಗೆ ನೇರ ಅರ್ಹತೆ ದೊರೆತಿದೆ. ಅಂತಿಮ ಸುತ್ತಿನ ವೇಳಾಪಟ್ಟಿಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.