FIFA World Cup ನೆದರ್‌ಲೆಂಡ್ಸ್ ಬಗ್ಗುಬಡಿದು ಸೆಮೀಸ್‌ಗೆ ಲಗ್ಗೆಯಿಟ್ಟ ಮೆಸ್ಸಿ ನೇತೃತ್ವದ ಅರ್ಜೆಂಟೀನಾ..!
ನೆದರ್‌ಲೆಂಡ್ಸ್ ಎದುರು ಗೆದ್ದು ಸೆಮೀಸ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ
ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾಗೆ 4-3 ಅಂತರದ ಗೆಲುವು
ಸೆಮೀಸ್‌ನಲ್ಲಿ ಅರ್ಜೆಂಟೀನಾಗೆ ಕ್ರೊವೇಷಿಯಾ ಎದುರಾಳಿ
ದೋಹಾ(ಡಿ.10): ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ನೆದರ್‌ಲೆಂಡ್ಸ್ ಎದುರು 4-3 ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಇದೀಗ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ತಂಡವು ಕ್ರೊವೇಷಿಯಾ ಎದುರು ಕಾದಾಡಲಿದೆ.
ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಉಭಯ ತಂಡಗಳು ತಲಾ 2-2 ಗೋಲುಗಳು ದಾಖಲಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾದ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅದ್ಭುತ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.
ಲುಸೈಲ್ ಸ್ಟೇಡಿಯಂನಲ್ಲಿ ನೆರೆದಿದ್ದ 88,235 ಪ್ರೇಕ್ಷಕರ ಸಮ್ಮುಖದಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದವು. ಆದರೆ ನೆರೆದಿದ್ದ ಪ್ರೇಕ್ಷಕರ ಪೈಕಿ ಮೂರನೇ ಎರಡರಷ್ಟು ಪ್ರೇಕ್ಷಕರು ಅರ್ಜೆಂಟೀನಾ ತಂಡವನ್ನು ಬೆಂಬಲಿಸಿದರು. ಲುಸೈಲ್ ಸ್ಟೇಡಿಯಂ ಒಂದು ರೀತಿ ಅರ್ಜೆಂಟೀನಾದ ತವರು ಮೈದಾನ ಎನ್ನುವಷ್ಟರ ಮಟ್ಟಿಗೆ ಭಾಸವಾಗುತ್ತಿತ್ತು.
FIFA World Cup ಮೊರಾಕ್ಕೊ ಕನಸಿನ ಓಟವನ್ನು ನಿಲ್ಲಿಸುತ್ತಾ ಪೋರ್ಚುಗಲ್?
ಮೊದಲಾರ್ಧದಲ್ಲಿ ಲಿಯೋನೆಲ್ ಮೆಸ್ಸಿ ನೀಡಿದ ಪಾಸ್ ಅನ್ನು ಬಳಸಿಕೊಂಡ ಮೋಲಿನಾ ಭರ್ಜರಿ ಗೋಲು ಬಾರಿಸುವ ಮೂಲಕ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಇನ್ನು ದ್ವಿತಿಯಾರ್ಧದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡ ಲಿಯೋನೆಲ್ ಮೆಸ್ಸಿ ಆಕರ್ಷಕ ಗೋಲು ಬಾರಿಸುವ ಮೂಲಕ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲುವಂತೆ ಮಾಡಿದರು. ಆದರೆ ಕೊನೆಯಲ್ಲಿ ನೆದರ್‌ಲೆಂಡ್ಸ್ ಪರ ವೋಟ್ ವೆಗ್‌ಹಾರ್ಟ್ ಆಕರ್ಷಕ ಗೋಲು ಬಾರಿಸುವ ಮೂಲಕ 2-2ರ ಸಮಬಲವಾಗುವಂತೆ ಮಾಡಿದರು.
ಇನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ನೆದರ್‌ಲೆಂಡ್ ತಂಡವು ಮೊದಲೆರಡು ಅವಕಾಶದಲ್ಲಿ ಗೋಲು ಬಾರಿಸದಂತೆ ತಡೆಯುವಲ್ಲಿ ಅರ್ಜೆಂಟೀನಾದ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಯಶಸ್ವಿಯಾದರು. ಆ ಬಳಿಕ ನೆದರ್‌ಲೆಂಡ್ಸ್ ತಂಡವು ಮೂರು ಗೋಲು ಬಾರಿಸಿತಾದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇನ್ನು ಅರ್ಜೆಂಟೀನಾ ತಂಡವು 5 ಪ್ರಯತ್ನಗಳ ಪೈಕಿ 4 ಗೋಲು ಬಾರಿಸಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಬ್ರೆಜಿಲ್‌ಗೆ ಗೇಟ್‌ಪಾಸ್ ಕೊಟ್ಟ ಕ್ರೊವೇಷಿಯಾ!
ಅಲ್ ರಯ್ಯನ್: ದಾಖಲೆಯ 6ನೇ ಬಾರಿ ಚಾಂಪಿಯನ್ ಆಗುವ ಬ್ರೆಜಿಲ್ ಕನಸು ಭಗ್ನಗೊಂಡಿದೆ. ಸತತ 2ನೇ ಪಂದ್ಯದಲ್ಲಿ ಪೆನಾಲ್ಟಿಶೂಟೌಟ್‌ನಲ್ಲಿ ಗೆದ್ದ ಕ್ರೊವೇಷಿಯಾ ಸೆಮಿಫೈನಲ್ ಪ್ರವೇಶಿಸಿದೆ. ಜಪಾನ್ ವಿರುದ್ಧ ಪ್ರಿ ಕ್ವಾರ್ಟರ್‌ನಲ್ಲೂ ಶೂಟೌಟ್‌ನಲ್ಲಿ ಜಯಿಸಿದ್ದ ಲೂಕಾ ಮೊಡ್ರಿಚ್ ಪಡೆ ಕೈಮೀರಿದ್ದ ಈ ಪಂದ್ಯವನ್ನೂ ಗೆಲ್ಲುವಲ್ಲಿ ಯಶಸ್ವಿಯಾಯಿತು. ಶೂಟೌಟ್‌ನಲ್ಲಿ ಕ್ರೊವೇಷಿಯಾ 4 ಗೋಲು ಬಾರಿಸಿದರೆ, ಬ್ರೆಜಿಲ್ ಕೇವಲ 2 ಗೋಲು ಗಳಿಸಲಷ್ಟೇ ಶಕ್ತವಾಯಿತು. 2006ರಿಂದ 2022ರ ನಡುವೆ 5 ವಿಶ್ವಕಪ್‌ಗಳಲ್ಲಿ 4 ಬಾರಿ ಬ್ರೆಜಿಲ್ ಕ್ವಾರ್ಟರ್ ಫೈನಲ್‌ನಲ್ಲೇ ಸೋತು ಹೊರಬಿದ್ದಿದೆ.
ನಿಗದಿತ ಸಮಯದಲ್ಲಿ ಗೋಲು ದಾಖಲಾಗದಿದ್ದಾಗ 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. 102ನೇ ನಿಮಿಷದಲ್ಲಿ ಸುಲಭ ಅವಕಾಶ ಕೈಚೆಲ್ಲಿದ ಆಘಾತದಿಂದ ಹೊರಬರುವ ಮೊದಲೇ ಕ್ರೊವೇಷಿಯಾಗೆ ಮತ್ತೊಂದು ಭಾರೀ ಆಘಾತ ಎದುರಾಯಿತು. 105+1ನೇ ನಿಮಿಷದಲ್ಲಿ ನೇಯ್ಮರ್ ಅದ್ಭುತ ಕಾಲ್ಚಳಕ ಪ್ರದರ್ಶಿಸಿ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಸೇರಿಸುತ್ತಿದ್ದಂತೆ ಬ್ರೆಜಿಲ್ ತಂಡದಲ್ಲಿ ಸಂಭ್ರಮ ಮನೆ ಮಾಡಿತು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಬಾಳಲಿಲ್ಲ. 116ನೇ ನಿಮಿಷದಲ್ಲಿ ಬ್ರುನೊ ಪೆಟ್ಕೊವಿಚ್ ಕ್ರೊವೇಷಿಯಾ ಸಮಬಲ ಸಾಧಿಸಲು ನೆರವಾದರು.
ವಿಶ್ವಕಪ್: 4ನೇ ಬಾರಿಗೆ ಶೂಟೌಟ್ ಗೆದ್ದ ಕ್ರೊವೇಷಿಯಾ!
ಪೆನಾಲ್ಟಿಶೂಟೌಟ್‌ನಲ್ಲಿ ಕ್ರೊವೇಷಿಯಾ ತನ್ನ ಶೇ.100ರಷ್ಟುದಾಖಲೆ ಮುಂದುವರಿಸಿದೆ. ವಿಶ್ವಕಪ್‌ನಲ್ಲಿ ಆಡಿರುವ ನಾಲ್ಕೂ ಪೆನಾಲ್ಟಿಶೂಟೌಟ್‌ಗಳಲ್ಲಿ ಕ್ರೊವೇಷಿಯಾ ಗೆದ್ದಿದೆ. ಬ್ರೆಜಿಲ್ ವಿರುದ್ಧದ ಪಂದ್ಯಕ್ಕೂ ಮುನ್ನ 2018ರ ಪ್ರಿ ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್ ವಿರುದ್ಧ 3-2ರಲ್ಲಿ ಗೆದ್ದಿದ್ದ ತಂಡ, ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾ ವಿರುದ್ಧ 4-3ರಲ್ಲಿ ಜಯಿಸಿತ್ತು. ಈ ವಿಶ್ವಕಪ್‌ನ ಪ್ರಿ ಕ್ವಾರ್ಟರ್‌ನಲ್ಲಿ ಜಪಾನ್ ವಿರುದ್ಧ 3-1ರಲ್ಲಿ ಗೆಲುವು ಪಡೆದಿತ್ತು.