ಫಿಫಾ ವಿಶ್ವಕಪ್ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಮೊರಾಕ್ಕೊ-ಪೋರ್ಚುಗಲ್ ಮುಖಾಮುಖಿಈಗಾಗಲೇ ಸ್ಪೇನ್‌ಗೆ ಆಘಾತ ನೀಡಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿರುವ ಮೊರಾಕ್ಕೊಪೋರ್ಚುಗಲ್‌ನ ಆಕ್ರಮಣಕಾರಿ ಆಟಕ್ಕೆ ಪ್ರತಿತಂತ್ರ ಹೆಣೆದಿರುವ ಮೊರಾಕ್ಕೊ

ದೋಹಾ(ಡಿ.10): ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡವೆಂದು ಎನಿಸಿಕೊಂಡು ಕಾಲಿಟ್ಟ ಸ್ಪೇನ್‌ಗೆ ಗೇಟ್‌ ಪಾಸ್‌ ನೀಡಿರುವ ಮೊರಾಕ್ಕೊ ಈಗ ಮತ್ತೊಂದು ಫೇವರಿಟ್‌ ತಂಡವಾದ ಪೋರ್ಚುಗಲ್‌ಗೂ ಶಾಕ್‌ ನೀಡಲು ಕಾತರಿಸುತ್ತಿದೆ. ಉಭಯ ತಂಡಗಳು ಶನಿವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಸ್ಪೇನ್‌ನ ‘ಟಿಕಿ-ಟಾಕ’ ತಂತ್ರವನ್ನು ಭೇದಿಸಿದ ಮೊರಾಕ್ಕೊ, ಪೋರ್ಚುಗಲ್‌ನ ಆಕ್ರಮಣಕಾರಿ ಆಟಕ್ಕೂ ಸೂಕ್ತ ಉತ್ತರಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಆಫ್ರಿಕಾದ ಮೊದಲ ರಾಷ್ಟ್ರ ಎನ್ನುವ ಹಿರಿಮೆಗೆ ಪಾತ್ರವಾಗಿರುವ ಮೊರಾಕ್ಕೊ, ಸೆಮೀಸ್‌ಗೇರಿದ ಆಫ್ರಿಕಾದ ಮೊದಲ ತಂಡ ಎನ್ನುವ ದಾಖಲೆ ಬರೆಯಲು ಕಾತರಿಸುತ್ತಿದೆ.

ಮತ್ತೊಂದಡೆ ಪೋರ್ಚುಗಲ್‌ 1986ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಆಡುತ್ತಿದೆ. ಪ್ರಿ ಕ್ವಾರ್ಟರ್‌ನಲ್ಲಿ ಸ್ವಿಜರ್‌ಲೆಂಡ್‌ ವಿರುದ್ಧ ಕ್ರಿಸ್ಟಿಯಾನೋ ರೊನಾಲ್ಡೋರನ್ನು ಹೊರಕೂರಿಸಿ 21ರ ಗೊನ್ಸಾಲೋ ರಾಮೋಸ್‌ರನ್ನು ಆಡಿಸುವ ಕೋಚ್‌ ಫರ್ನಾಂಡೋ ಸ್ಯಾಂಟೋಸ್‌ರ ತಂತ್ರ ಕೈಹಿಡಿದಿತ್ತು. ಪೋರ್ಚುಗಲ್‌ ಪರ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್‌ ಗೋಲು ಬಾರಿಸಿ ರಾಮೋಸ್‌ ಮಿಂಚಿದ್ದರು. ಅವರಿಂದ ಮತ್ತೊಂದು ಭರ್ಜರಿ ಪ್ರದರ್ಶನವನ್ನು ತಂಡ ನಿರೀಕ್ಷೆ ಮಾಡುತ್ತಿದೆ.

ರೊನಾಲ್ಡೋ ಮುನಿಸಿಕೊಂಡಿಲ್ಲ: ಕೋಚ್‌ ಸ್ಯಾಂಟೋಸ್‌ ಸ್ಪಷ್ಟನೆ!

ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋರನ್ನು ಹೊರಗಿಟ್ಟಿದ್ದ ಕೋಚ್‌ ಫರ್ನಾಂಡೋ ಸ್ಯಾಂಟೋಸ್‌ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದರು. ಈ ಘಟನೆಯ ಬಳಿಕ ರೊನಾಲ್ಡೋ ಮುನಿಸಿಕೊಂಡಿದ್ದಾರೆ. ತಂಡ ತೊರೆಯುವ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿಗಳು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಸಾಮಾಜಿಕ ತಾಣಗಳಲ್ಲೂ ಈ ಬಗ್ಗೆ ಚರ್ಚೆ ಆಗಿತ್ತು. ಆದರೆ ಆ ಸುದ್ದಿಗಳೆಲ್ಲಾ ಸುಳ್ಳು, ರೊನಾಲ್ಡೋ ತಂಡದೊಂದಿಗೇ ಇದ್ದಾರೆ ಎಂದು ಕೋಚ್‌ ಹೇಳಿದ್ದಾರೆ. 

FIFA World Cup: ಕ್ರೊವೇಷಿಯಾ ಸವಾಲು ಗೆಲ್ಲುತ್ತಾ ಬಲಿಷ್ಠ ಬ್ರೆಜಿಲ್?

‘ತಂಡದ ಒಳಿತಿಗಾಗಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ಅವರ ಬೆಂಬಲವಿರಲಿದೆ. ಅವರೊಂದಿಗೆ ಚರ್ಚಿಸಿದ ಬಳಿಕವೇ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಸ್ಯಾಂಟೋಸ್‌ ಸ್ಪಷ್ಟಪಡಿಸಿದ್ದಾರೆ. ರೊನಾಲ್ಡೋ ಈ ಪಂದ್ಯದಲ್ಲಿ ಆಡಲಿದ್ದಾರಾ ಇಲ್ಲವಾ ಎನ್ನುವ ಗುಟ್ಟನ್ನು ಸ್ಯಾಂಟೋಸ್‌ ಬಿಟ್ಟುಕೊಟ್ಟಿಲ್ಲ.

ರೊನಾಲ್ಡೋ ಆಡದಿದ್ದರೂ 6-1ರಲ್ಲಿ ಸ್ವಿಜರ್‌ಲೆಂಡ್‌ಗೆ ಸೋಲುಣಿಸಿದ ಪೋರ್ಚುಗಲ್‌ಗೆ ಮೊರಾಕ್ಕೊ ಎದುರಾಗಿದೆ. ಸ್ಪೇನ್‌ ವಿರುದ್ಧ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿ ಶೂಟೌಟ್‌ನಲ್ಲಿ ಅಚ್ಚರಿ ಗೆಲುವು ಸಾಧಿಸಿದ ಮೊರಾಕ್ಕೊ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಲು ಹಪಹಪಿಸುತ್ತಿದೆ.

ಪಂದ್ಯ: ರಾತ್ರಿ 8.30ಕ್ಕೆ, 
ನೇರ ಪ್ರಸಾರ: ಸ್ಪೋರ್ಟ್ಸ್ 18/ಜಿಯೋ ಸಿನಿಮಾ