FIFA World Cup ಮೆಸ್ಸಿ ಮಿಂಚಿನಾಟಕ್ಕೆ ಶರಣಾದ ಕ್ರೊವೇಷಿಯಾ; ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ..!
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ
ಕ್ರೊವೇಷಿಯಾ ಎದುರು 3-0 ಅಂತರದ ಗೆಲುವು ದಾಖಲಿಸಿದ ಲಿಯೋನೆಲ್ ಮೆಸ್ಸಿ ಪಡೆ
ಚೊಚ್ಚಲ ಬಾರಿಗೆ ಫಿಫಾ ವಿಶ್ವಕಪ್‌ಗೆ ಮುತ್ತಿಕ್ಕುವ ತವಕದಲ್ಲಿ ಲಿಯೋನೆಲ್ ಮೆಸ್ಸಿ
ಲುಸೈಲ್(ಡಿ.14): ನಾಯಕ ಲಿಯೋನೆಲ್ ಮೆಸ್ಸಿ ಬಾರಿಸಿದ ಪೆನಾಲ್ಟಿ ಗೋಲ್ ಹಾಗೂ ಜೂಲಿಯನ್ ಅಲ್ವರೆಜ್ ಬಾರಿಸಿದ ಎರಡು ಆಕರ್ಷಕ ಗೋಲುಗಳ ನೆರವಿನಿಂದ ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ತಂಡವು ಕ್ರೊವೇಷಿಯಾ ಎದುರು 3-0 ಗೋಲುಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2022ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.
ಎರಡು ಬಾರಿಯ ಫಿಫಾ ವಿಶ್ವಕಪ್ ಚಾಂಪಿಯನ್ ಅರ್ಜೆಂಟೀನಾ ತಂಡವು ಇದೀಗ ಕಳೆದ ಎಂಟು ವರ್ಷದ ಅವಧಿಯಲ್ಲಿ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಲುಸೈಲ್ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಅರ್ಜೆಂಟೀನಾ ಅಭಿಮಾನಿಗಳ ದಂಡೇ ಕಂಡುಬಂದಿತ್ತು. ಆರಂಭದಿಂದಲೇ ಅದ್ಭುತ ಕಾಲ್ಚಳಕದಾಟ ತೋರಿದ ಅರ್ಜೆಂಟೀನಾ ತಂಡವು ಇದೀಗ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. 2014ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜರ್ಮನಿಗೆ ಶರಣಾಗುವ ಮೂಲಕ ನಿರಾಸೆ ಅನುಭವಿಸಿತ್ತು. ಇದೀಗ 35 ವರ್ಷದ ಲಿಯೋನೆಲ್ ಮೆಸ್ಸಿ, ಫಿಫಾ ವಿಶ್ವಕಪ್ ಗೆದ್ದು, ಫುಟ್ಬಾಲ್ ವೃತ್ತಿಬದುಕನ್ನು ಸ್ಮರಣೀಯಗೊಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅರ್ಜೇಂಟೀನಾ ತಂಡವು 1978 ಹಾಗೂ 1986ರಲ್ಲಿ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಮೂರನೇ ಬಾರಿಗೆ ಕಪ್ ಎತ್ತಿಹಿಡಿಯುವ ಕನವರಿಕೆಯಲ್ಲಿದೆ.
ಕಳೆದ ವರ್ಷದ ರನ್ನರ್ ಅಪ್ ಕ್ರೊವೇಷಿಯಾ ತಂಡವು ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ಭಗ್ನವಾಗಿದೆ. ಮೊದಲಿಗೆ ಪೆನಾಲ್ಟಿ ಶೂಟ್ ಅವಕಾಶ ಬಳಸಿಕೊಂಡ ಅರ್ಜೆಂಟೀನಾ ತಂಡಕ್ಕೆ ನಾಯಕ ಲಿಯೋನೆಲ್ ಮೆಸ್ಸಿ ಪಂದ್ಯದ 34ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ಇನ್ನು ಇದರ ಬೆನ್ನಲ್ಲೇ ಐದು ನಿಮಿಷಗಳ ಅಂತರದಲ್ಲಿ ಜೂಲಿಯನ್ ಅಲ್ವರೆಜ್ ಆಕರ್ಷಕ ಗೋಲು ಬಾರಿಸುವ ಕ್ರೊವೇಷಿಯಾಗೆ ಡಬಲ್ ಶಾಕ್ ನೀಡಿದರು. ಮೊದಲಾರ್ಧದ ಅಂತ್ಯದ ವೇಳೆಗೆ ಅರ್ಜೆಂಟೀನಾ ತಂಡವು 2-0 ಮುನ್ನಡೆ ಸಾಧಿಸಿತ್ತು. ಇನ್ನು ದ್ವಿತಿಯಾರ್ಧದಲ್ಲಿ ಜೂಲಿಯನ್ ಅಲ್ವರೆಜ್ ಮತ್ತೊಂದ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ತಂಡವು 3-0 ಮುನ್ನಡೆ ಸಾಧಿಸುವಂತೆ ಮಾಡಿದರು. ಕ್ರೊವೇಷಿಯಾ ತಂಡವು ಗೋಲು ಬಾರಿಸಲು ಪ್ರಯತ್ನಿಸಿತಾದರೂ, ಅರ್ಜೆಂಟೀನಾ ತಂಡದ ರಕ್ಷಣಾ ಪಡೆ ಭೇದಿಸಲು ಯಶಸ್ವಿಯಾಗಲಿಲ್ಲ.
FIFA World Cup ಮೊರಾಕ್ಕೊ ಓಟಕ್ಕೆ ಬ್ರೇಕ್ ಹಾಕುತ್ತಾ ಫ್ರಾನ್ಸ್?
ಅರ್ಜೆಂಟೀನಾ ಪರ ಹೊಸ ಇತಿಹಾಸ ಬರೆದ ಮೆಸ್ಸಿ: ಅರ್ಜೆಂಟೀನಾ ಫುಟ್ಬಾಲ್ ತಂಡದ ದಂತಕಥೆ ಲಿಯೋನೆಲ್ ಮೆಸ್ಸಿ, ಕ್ರೊವೇಷಿಯಾ ಎದುರು ಆಕರ್ಷಕ ಗೋಲು ಬಾರಿಸುವ ಮೂಲಕ, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಪರ ಗರಿಷ್ಠ ಗೋಲು ಬಾರಿಸಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಅರ್ಜೆಂಟೀನಾದ ಗೇಬ್ರಿಯಲ್ ಬಟಿಸ್ಟುಟ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 10 ಗೋಲು ಬಾರಿಸಿದ್ದರು, ಆದರೆ ಇದೀಗ ಮೆಸ್ಸಿ 11ನೇ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ಪರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಗೋಲು ಬಾರಿಸಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಇನ್ನು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಗೋಲು ಬಾರಿಸಿದ ದಾಖಲೆ ಜರ್ಮನಿಯ ಮಿರೊಸ್ಲಾಸ್ ಕ್ಲೋಸ್ ಹೆಸರಿನಲ್ಲಿದೆ. ಕ್ಲೂಸ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 16 ಗೋಲು ಬಾರಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಬ್ರೆಜಿಲ್ ದಂತಕಥೆ ರೊನಾಲ್ಡೋ(15), ಗೆರ್ಡ್ ಮುಲ್ಲರ್(13) ಹಾಗೂ ಪೀಲೆ(12) ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
ಸದ್ಯ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ಫ್ರಾನ್ಸ್‌ನ ಕಿಲಿಯಾನ್ ಎಂಬಾಪೆ ತಲಾ 5 ಗೋಲು ಬಾರಿಸುವ ಮೂಲಕ ಗೋಲ್ಡನ್ ಬೂಟ್ ಗೆಲ್ಲುವ ರೇಸ್‌ನಲ್ಲಿದ್ದು, ಟೂರ್ನಿ ಮುಕ್ತಾಯದ ಬಳಿಕ ಗೋಲ್ಡನ್ ಬೂಟ್ ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.