FIFA World Cup ಮೊರಾಕ್ಕೊ ಓಟಕ್ಕೆ ಬ್ರೇಕ್‌ ಹಾಕುತ್ತಾ ಫ್ರಾನ್ಸ್‌?

ಇಂದು 2ನೇ ಸೆಮಿಫೈನಲ್‌ ಕಾದಾಟ
ದೈತ್ಯ ತಂಡಗಳನ್ನು ಹೊರಗಟ್ಟಿದ ಮೊರಾಕ್ಕೊಗೆ ಚೊಚ್ಚಲ ಬಾರಿ ಫೈನಲ್‌ ಪ್ರವೇಶಿಸುವ ತವಕ
ಸತತ 2ನೇ, ಒಟ್ಟಾರೆ 4ನೇ ಫೈನಲ್‌ ಮೇಲೆ ಫ್ರಾನ್ಸ್‌ ಕಣ್ಣು
ಮೊರಾಕ್ಕೊ ರಕ್ಷಣಾ ಪಡೆ ಭೇದಿಸ್ತಾರಾ ಎಂಬಾಪೆ, ಓಲಿವಿಯರ್‌ ಗಿರೌಡ್‌

FIFA World Cup France take on Morocco in 2nd Semi Final kvn

ದೋಹಾ(ಡಿ.14): ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಹಲವು ಆಘಾತಕಾರಿ ಫಲಿತಾಂಶಗಳನ್ನು ನೀಡಿ ಬಲಿಷ್ಠ ತಂಡಗಳನ್ನು ಮಣ್ಣು ಮುಕ್ಕಿಸಿದ ಮೊರಾಕ್ಕೊ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಲು ಎದುರು ನೋಡುತ್ತಿದ್ದು, ಬುಧವಾರ 2ನೇ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ ವಿರುದ್ಧ ಸೆಣಸಾಡಲಿದೆ. ಆದರೆ ಹಾಲಿ ಚಾಂಪಿಯನ್‌ ಫ್ರಾನ್ಸ್‌ ಟೂರ್ನಿಯುದ್ದಕ್ಕೂ ಅಭೂತಪೂರ್ವ ಲಯದಲ್ಲಿದ್ದು, ಮೊರಾಕ್ಕೊ ಕನಸಿನ ಓಟಕ್ಕೆ ಬ್ರೇಕ್‌ ಹಾಕಲು ಕಾತರಿಸುತ್ತಿದೆ.

ಗುಂಪು ಹಂತದಲ್ಲಿ ಕ್ರೊವೇಷಿಯಾ ವಿರುದ್ಧ ಡ್ರಾ ಸಾಧಿಸಿ, ಬಳಿಕ ಬೆಲ್ಜಿಯಂ ವಿರುದ್ಧ ಅಚ್ಚರಿಯ ಗೆಲುವು ಪಡೆದಿದ್ದ ಮೊರಾಕ್ಕೊ ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಸ್ಪೇನ್‌ಗೆ ಸೋಲಿನ ರುಚಿ ಕಾಣಿಸಿತ್ತು. ಬಳಿಕ ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಪೋರ್ಚುಗಲ್‌ಗೆ ಸೋಲುಣಿಸಿ ಎಲ್ಲರ ಹುಬ್ಬೇರಿಸಿದ್ದು, ಸೆಮಿಫೈನಲ್‌ ಪ್ರವೇಶಿಸಿದ ಆಫ್ರಿಕಾ ಖಂಡದ ಮೊದಲ ತಂಡ ಎಂನಿಸಿಕೊಂಡಿದೆ. ತಂಡದ ರಕ್ಷಣಾ ಪಡೆ ಬಲಿಷ್ಠವಾಗಿ ತೋರುತ್ತಿದ್ದು, ಗೋಲ್‌ಕೀಪರ್‌ ಯಾಸಿನ್‌ ಬೋನೊ ಎದುರಾಳಿ ತಂಡದ ಗೋಲುಗಳಿಗೆ ತಡೆಗೋಡೆಯಾಗಿ ನಿಂತಿದ್ದಾರೆ. ಆದರೆ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಫ್ರಾನ್ಸ್‌ ಆಟಗಾರರನ್ನು ನಿರ್ಣಾಯಕ ಪಂದ್ಯದಲ್ಲಿ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕಾದುನೋಡಬೇಕಿದೆ.

FIFA World Cup: ಇಂದು ಅರ್ಜೆಂಟೀನಾ vs ಕ್ರೊವೇಷಿಯಾ ಸೆಮೀಸ್ ಕದನ

ಮತ್ತೊಂದೆಡೆ ಸತತ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಫ್ರಾನ್ಸ್‌ ಟ್ಯುನೀಶಿಯಾ ವಿರುದ್ಧದ ಆಘಾತಕಾರಿ ಸೋಲಿನ ಹೊರತಾಗಿಯೂ ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದು, ಯುವ ತಾರೆ ಕೀಲಿಯನ್‌ ಎಂಬಾಪೆ, ಓಲಿವಿಯರ್‌ ಗಿರೌಡ್‌ ಅಬ್ಬರದ ಪ್ರದರ್ಶನದ ಮೂಲಕ ನೆರವಾಗುತ್ತಿದ್ದಾರೆ. ಇವರಿಬ್ಬರೂ ಮೊರಾಕ್ಕೊ ರಕ್ಷಣಾ ಪಡೆಯನ್ನು ಭೇದಿಸಲು ಎದುರು ನೋಡುತ್ತಿದ್ದಾರೆ. ಟೂರ್ನಿಯಲ್ಲಿ ಎಂಬಾಬೆ 5, ಗಿರೌಡ್‌ 4 ಗೋಲುಗಳನ್ನು ಬಾರಿಸಿದ್ದು, ಇವರಿಬ್ಬರನ್ನು ನಿಯಂತ್ರಿಸಿದರೆ ಮಾತ್ರ ಮೊರಾಕ್ಕೊಗೆ ಗೆಲುವು ದಕ್ಕಬಹುದು.

ಪಂದ್ಯ ಅರಂಭ: ರಾತ್ರಿ 12.30ಕ್ಕೆ

ನೇರಪ್ರಸಾರ: ಜಿಯೋ ಸಿನಿಮಾ/ಸ್ಪೋರ್ಟ್ಸ್ 18.

ಫ್ರಾನ್ಸ್‌ಗೆ 4ನೇ, ಮೊರಾಕ್ಕೊಗೆ ಚೊಚ್ಚಲ ಫೈನಲ್‌ ಕನಸು

ಫ್ರಾನ್ಸ್‌ ಈವರೆಗೆ 3 ಬಾರಿ ಫೈನಲ್‌ ಆಡಿದ್ದು, 1998, 2018ರಲ್ಲಿ ಪ್ರಶಸ್ತಿ ಗೆದ್ದಿದೆ. 2006ರಲ್ಲಿ ರನ್ನರ್‌-ಅಪ್‌ ಆಗಿದ್ದು, 1958, 1982, 1986ರಲ್ಲಿ ಸೆಮಿಫೈನಲ್‌ನಲ್ಲಿ ಸೋತಿತ್ತು. ಇನ್ನು, ಮೊರಾಕ್ಕೊ ಮೊದಲ ಬಾರಿ ಸೆಮೀಸ್‌ಗೇರಿದ್ದು, ಚೊಚ್ಚಲ ಬಾರಿ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿದೆ.

ಎದುರಾಳಿಗೆ ಒಂದೂ ಗೋಲು ಬಿಟ್ಟುಕೊಡದ ಮೊರಾಕ್ಕೊ!

ಟೂರ್ನಿಯಲ್ಲಿ ಮೊರಾಕ್ಕೊ 5 ಪಂದ್ಯಗಳನ್ನಾಡಿದ್ದು, ಎದುರಾಳಿ ಆಟಗಾರನಿಗೆ ಒಂದೂ ಗೋಲು ಬಾರಿಸಲು ಅವಕಾಶ ನೀಡಿಲ್ಲ. ಕೆನಡಾ ವಿರುದ್ಧದ ಪಂದ್ಯದಲ್ಲಿ ಮೊರಾಕ್ಕೊ ಒಂದು ಗೋಲು ಬಿಟ್ಟುಕೊಟ್ಟಿದ್ದರೂ ಅದನ್ನು ಸ್ವತಃ ಮೊರಾಕ್ಕೊ ಆಟಗಾರ ನಾಯೆಫ್‌ ಅಗ್ವರ್ಡ್‌ ಬಾರಿಸಿದ್ದರು. ಸ್ಪೇನ್‌ ವಿರುದ್ಧದ ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲೂ ಮೊರಾಕ್ಕೊ ಒಂದೂ ಗೋಲು ಬಿಟ್ಟುಕೊಡಲಿಲ್ಲ ಎನ್ನುವುದು ವಿಶೇಷ.

ಫ್ರಾನ್ಸ್‌ ಸೆಮೀಸ್‌ ಹಾದಿ

ಗುಂಪು ಹಂತ

ಆಸ್ಪ್ರೇಲಿಯಾ ವಿರುದ್ಧ 4-1 ಜಯ

ಡೆನ್ಮಾರ್ಕ್ ವಿರುದ್ಧ 2-1 ಗೆಲುವು

ಟ್ಯುನೀಶಿಯಾ ವಿರುದ್ಧ 0-1 ಸೋಲು

ಪ್ರಿ ಕ್ವಾರ್ಟರ್‌

ಪೋಲೆಂಡ್‌ ವಿರುದ್ಧ 3-1 ಗೆಲುವು

ಕ್ವಾರ್ಟರ್‌ ಫೈನಲ್‌

ಇಂಗ್ಲೆಂಡ್‌ ವಿರುದ್ಧ 2-1 ಜಯ

ಮೊರಾಕ್ಕೊ ಸೆಮೀಸ್‌ ಹಾದಿ

ಗುಂಪು ಹಂತ

ಕ್ರೊವೇಷಿಯಾ ವಿರುದ್ಧ 0-0 ಡ್ರಾ

ಬೆಲ್ಜಿಯಂ ವಿರುದ್ಧ 2-0 ಗೆಲುವು

ಕೆನಡಾ ವಿರುದ್ಧ 2-1 ಗೆಲುವು

ಪ್ರಿ ಕ್ವಾರ್ಟರ್‌

ಸ್ಪೇನ್‌ ವಿರುದ್ಧ ಶೂಟೌಟಲ್ಲಿ 3-0 ಜಯ

ಕ್ವಾರ್ಟರ್‌ ಫೈನಲ್‌

ಪೋರ್ಚುಗಲ್‌ ವಿರುದ್ಧ 1-0 ಗೆಲುವು

Latest Videos
Follow Us:
Download App:
  • android
  • ios