ಮರಡೋನಾ ‘ಹ್ಯಾಂಡ್ ಆಫ್ ಗಾಡ್’ ಜೆರ್ಸಿ ಮಾರಾಟಕ್ಕೆ..!
ಇತ್ತೀಚೆಗಷ್ಟೇ ಕೊನೆಯುಸಿರೆಳೆದ ದಿಗ್ಗಜ ಫುಟ್ಬಾಲಿಗ ಡಿಯಾಗೋ ಮರಡೋನಾ ಅವರ ಹ್ಯಾಂಡ್ ಆಫ್ ಗಾಡ್’ ಜೆರ್ಸಿಯನ್ನು ಹರಾಜಿಗಿಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ವಾಷಿಂಗ್ಟನ್(ನ.29): ಫುಟ್ಬಾಲ್ ದೇವರು, ಅರ್ಜೆಂಟೀನಾದ ಡಿಯಾಗೋ ಮರಡೋನಾ, 1986ರ ವಿಶ್ವಕಪ್ ಫುಟ್ಬಾಲ್ ಕ್ವಾರ್ಟರ್‌ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಧರಿಸಿದ್ದ ಜೆರ್ಸಿ ಮಾರಾಟಕ್ಕೆ ಲಭ್ಯವಿದೆ ಎಂದು ಅಮೆರಿಕ ಕ್ರೀಡಾ ಸ್ಮರಣಾರ್ಥ ವಸ್ತುಗಳ ತಜ್ಞ ಡೇವಿಡ್ ಅಮರ್‌ಮನ್ ಹೇಳಿದ್ದಾರೆ.
1986ರ ಜೂನ್ 22ರಂದು ನಡೆದ ಫುಟ್ಬಾಲ್ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಡಿಯಾಗೋ ಮರಡೋನಾ ಬಾರಿಸಿದ 'ಹ್ಯಾಂಡ್ ಆಫ್ ಗಾಡ್' ಗೋಲು ಶತಮಾನ ಕಂಡ ಶ್ರೇಷ್ಠ ಗೋಲು ಎನಿಸಿದೆ.
ಸದ್ಯ ಈ ಜೆರ್ಸಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿರುವ ರಾಷ್ಟ್ರೀಯ ಫುಟ್ಬಾಲ್ ಮ್ಯೂಸಿಯಂನಲ್ಲಿದೆ. ಮಿಕ್ಸಿಕೋ ಸಿಟಿಯಲ್ಲಿ ನಡೆದಿದ್ದ ವಿಶ್ವಕಪ್ ಕ್ವಾರ್ಟರ್ ಪಂದ್ಯದಲ್ಲಿ ಆಡಿದ್ದ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಸ್ಟೀವ್ ಹಾಜ್, ಮರಡೋನಾ ಅವರಿಂದ ಆ ಜೆರ್ಸಿಯನ್ನು ಪಡೆದಿದ್ದರು.
ಈ ಜೆರ್ಸಿಯ ಬೆಲೆ 2 ಮಿಲಿಯನ್ ಅಮೆರಿಕನ್ ಡಾಲರ್ (14 ಕೋಟಿ 80 ಲಕ್ಷ) ಇದರ ಮಾಲೀಕ ಜೆರ್ಸಿಯನ್ನು ಖಾಸಗಿ ಹರಾಜಿಗಿಡಲು ಬಯಸಿದ್ದಾರೆ ಎನ್ನಲಾಗಿದೆ. ‘ಹ್ಯಾಂಡ್ ಆಫ್ ಗಾಡ್’ಜೆರ್ಸಿಗೆ ಬೆಲೆಕಟ್ಟುವುದು ಸುಲಭವಲ್ಲ. ಆದರೆ ಜೆರ್ಸಿ ಮಾಲೀಕ 2 ಮಿಲಿಯನ್ ಡಾಲರ್ ಪ್ರಾರಂಭಿಕ ಬೆಲೆಯನ್ನು ನಿಗದಿ ಮಾಡಿದ್ದಾರೆ ಎಂದು ಅಮೆರಿಕ ಕ್ರೀಡಾ ಸ್ಮರಣಾರ್ಥ ವಸ್ತುಗಳ ತಜ್ಞ ಡೇವಿಡ್ ಅಮರ್‌ಮನ್ ಹೇಳಿದ್ದಾರೆ.