ಯುವತಾರೆ ಲಾಮಿನೆ ಯಮಾಲ್ ಗೋಲಿನ ನೆರವಿನಿಂದ ಸ್ಪೇನ್ ಸೌದಿ ಅರೇಬಿಯಾ ವಿರುದ್ಧ 4-0 ಅಂತರದ ಭರ್ಜರಿ ಜಯ ಸಾಧಿಸಿತು. ಮತ್ತೊಂದೆಡೆ, ಈಜಿಪ್ಟ್ ನ್ಯೂಜಿಲೆಂಡ್ ವಿರುದ್ಧ 3-1 ಗೋಲುಗಳಿಂದ ಗೆದ್ದು, 92 ವರ್ಷಗಳ ನಂತರ ತನ್ನ ಚೊಚ್ಚಲ ವಿಶ್ವಕಪ್ ಜಯವನ್ನು ದಾಖಲಿಸಿ ಇತಿಹಾಸ ಬರೆಯಿತು. ಬೆಲ್ಜಿಯಂ-ಇರಾನ್ ಮತ್ತು ಕೇಪ್ ವರ್ಡೆ-ಉರುಗ್ವೆ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡವು.

ಅಟ್ಲಾಂಟಾ: ಯುವ ಸೂಪರ್‌ಸ್ಟಾರ್‌ ಲಾಮಿನೆ ಯಮಾಲ್‌ ಫಿಫಾ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಗೋಲು ದಾಖಲಿಸಿದ್ದಾರೆ. ಮೆಸ್ಸಿ, ರೊನಾಲ್ಡೋ ನಂತರ ಫುಟ್ಬಾಲ್‌ ಲೋಕವನ್ನು ಆಳುವ ಆಟಗಾರ ಎಂದೇ ಬಿಂಬಿತಗೊಂಡಿರುವ 18 ವರ್ಷದ ಯಮಾಲ್‌, ಸೌದಿ ಅರೇಬಿಯಾ ವಿರುದ್ಧದ ಪಂದ್ಯದಲ್ಲಿ ಮಿಂಚಿನ ಆಟವಾಡಿದರು. ಇದರೊಂದಿಗೆ ಸ್ಪೇನ್‌ 4-0 ಗೋಲುಗಳ ಅಮೋಘ ಗೆಲುವು ಸಾಧಿಸಿ, ಈ ವಿಶ್ವಕಪ್‌ನಲ್ಲಿ ಜಯದ ಖಾತೆ ತೆರೆಯಿತು.

ಯಮಾಲ್‌ ಪಂದ್ಯದ 10ನೇ ನಿಮಿಷದಲ್ಲಿ ಗೋಲು ದಾಖಲಿಸಿ, ವಿಶ್ವಕಪ್‌ನಲ್ಲಿ ಗೋಲು ಹೊಡೆದ 8ನೇ ಅತಿಕಿರಿಯ ಆಟಗಾರ ಎನಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಮೊದಲ ಪಂದ್ಯದಲ್ಲಿ ಕೇಪ್‌ ವರ್ಡಿ ವಿರುದ್ಧ ಗೋಲುರಹಿತ ಡ್ರಾನಿಂದ ಕಂಗಾಲಾಗಿದ್ದ ತಂಡ ನಿಟ್ಟುಸಿರುವ ಬಿಡುವಂತೆ ಮಾಡಿದರು.

21, 24ನೇ ನಿಮಿಷದಲ್ಲಿ ಮಿಕೆಲ್‌ ಓಯರ್‌ಜಬಾಲ್‌ ಬಾರಿಸಿದ ಗೋಲುಗಳು, ಸ್ಪೇನ್‌ಗೆ 3-0 ಮುನ್ನಡೆ ತಂದುಕೊಟ್ಟವು. ದ್ವಿತೀಯಾರ್ಧದ ಆರಂಭದಲ್ಲೇ (49ನೇ ನಿಮಿಷ) ಸೌದಿಯ ಹಸ್ಸನ್‌ ಸ್ವಂತ ಗೋಲು ಬಾರಿಸಿ, ಸ್ಪೇನ್‌ಗೆ ಉಡುಗೊರೆ ನೀಡಿದರು.

ಬೆಲ್ಜಿಯಂಗೆ ಇರಾನ್‌ ಶಾಕ್‌!

ಲಾಸ್‌ ಏಂಜಲೀಸ್‌: ಇರಾನ್‌ನ ಗೋಲ್‌ಕೀಪರ್‌ ಅಲಿಜಾ ಬೀರನ್ವಾಂಡ್‌ ಬೆಲ್ಜಿಯಂನ 7 ಗೋಲು ಯತ್ನಗಳನ್ನು ತಡೆದು, ತಮ್ಮ ತಂಡ ವಿಶ್ವ ನಂ.10 ವಿರುದ್ಧ ಗೋಲು ರಹಿತ ಡ್ರಾ ಸಾಧಿಸಲು ಸಹಕಾರಿಯಾದರು. ಆದರೆ, ತನಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಇರಾನ್‌ ಸಹ ವಿಫಲವಾಯಿತು.

ಬೆಲ್ಜಿಯಂ ಈ ವಿಶ್ವಕಪ್‌ನಲ್ಲಿ ಇನ್ನೂ ಒಂದೂ ಗೋಲು ಗಳಿಸಿಲ್ಲ. ಮೊದಲ ಪಂದ್ಯದಲ್ಲಿ ಈಜಿಪ್ಟ್‌ ಸ್ವಂತ ಗೋಲು ಬಾರಿಸಿದ್ದರಿಂದ ಬೆಲ್ಜಿಯಂ ಸೋಲಿನಿಂದ ಪಾರಾಗಿತ್ತು.

ಸೋಮವಾರದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು, ಇರಾನ್‌ ಆಟಗಾರರನ್ನು ಕೆರಳಿಸುವ ಪ್ರಯತ್ನ ಮಾಡಿದರು. ಪಂದ್ಯವಾಡಲಷ್ಟೇ ತನ್ನ ದೇಶದೊಳಗೆ ಪ್ರವೇಶಿಸಲು ಅಮೆರಿಕ ಅವಕಾಶ ನೀಡಿರುವ ಕಾರಣ, ಪಂದ್ಯದ ಹಿಂದಿನ ದಿನ ಇರಾನ್‌, ಅಮೆರಿಕಕ್ಕೆ ಕಾಲಿಡಲಿದೆ. ಪಂದ್ಯ ಮುಗಿದ ಕೂಡಲೇ ಅಮೆರಿಕದಿಂದ ಹೊರ ನಡೆಯಲಿದೆ.

ಫಿಫಾ ವಿಶ್ವಕಪ್‌ನಲ್ಲಿ ಮೊದಲ ಗೆಲುವು ಸಾಧಿಸಿದ ಈಜಿಪ್ಟ್‌!

ವ್ಯಾಂಕೋವರ್‌: 1934ರಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಆಡಿದ್ದ ಈಜಿಪ್ಟ್‌, ತನ್ನ ಮೊದಲ ಗೆಲುವಿಗಾಗಿ 2026ರ ವರೆಗೂ ಕಾಯಬೇಕಾಯಿತು. 1990, 2018ರಲ್ಲೂ ಜಾಗತಿಕ ಫುಟ್ಬಾಲ್‌ ಹಬ್ಬಕ್ಕೆ ಪ್ರವೇಶ ಪಡೆದರೂ ಆಗಲೂ ಗೆಲುವು ಸಿಕ್ಕಿರಲಿಲ್ಲ. ಸೋಮವಾರ ನ್ಯೂಜಿಲೆಂಡ್‌ ವಿರುದ್ಧ 3-1 ಅಂತರದಲ್ಲಿ ಗೆದ್ದು, 92 ವರ್ಷಗಳಲ್ಲಿ ಮೊದಲ ಜಯ ದಾಖಲಿಸಿ ಸಂಭ್ರಮಿಸಿತು.

ಪಂದ್ಯದ 15ನೇ ನಿಮಿಷದಲ್ಲಿ ಫಿನ್‌ ಸುರ್ಮನ್‌ ಬಾರಿಸಿದ ಗೋಲು ನ್ಯೂಜಿಲೆಂಡ್‌ಗೆ ಆರಂಭಿಕ ಮುನ್ನಡೆ ಒದಗಿಸಿತು. ಆದರೆ, ದ್ವಿತೀಯಾರ್ಧದಲ್ಲಿ ಈಜಿಪ್ಟ್‌ ಪ್ರಾಬಲ್ಯ ಮೆರೆಯಿತು. 58ನೇ ನಿಮಿಷದಲ್ಲಿ ಮುಸ್ತಾಫಾ ಜಿಕೊ, 67ನೇ ನಿಮಿಷದಲ್ಲಿ ಮೊಹಮದ್‌ ಸಲಾಹ್‌, 82ನೇ ನಿಮಿಷದಲ್ಲಿ ಟ್ರೆಜಿಗ್ಯೂಟ್‌ ಗೋಲು ಬಾರಿಸಿದರು.

ಈಜಿಪ್ಟ್‌ಗೆ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಇರಾನ್‌ ಎದುರಾಗಲಿದ್ದು, ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಿದರೆ ನಾಕೌಟ್‌ ಹಂತಕ್ಕೇರಲಿದೆ.

ಮತ್ತೆ ಕೇಪ್‌ ವರ್ಡೆ ಮಿಂಚು: ಉರುಗ್ವೆ ವಿರುದ್ಧ 2-2 ಡ್ರಾ!

ಮಯಾಮಿ: ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಕೇಪ್‌ ವರ್ಡೆಯ ಅಜೇಯ ಓಟ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿದ್ದ ಕೇಪ್‌ ವರ್ಡೆ, ಸೋಮವಾರ ತನ್ನ 2ನೇ ಪಂದ್ಯದಲ್ಲಿ ಬಲಿಷ್ಠ ಉರುಗ್ವೆ ವಿರುದ್ಧ 2-2 ಗೋಲುಗಳಲ್ಲಿ ಡ್ರಾ ಸಾಧಿಸಿ ನಾಕೌಟ್‌ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು ಎದುರಿಸಲಿರುವ ಕೇಪ್‌ ವರ್ಡೆ, ಆ ಪಂದ್ಯವನ್ನು ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಅಂತಿಮ 32ರ ಸುತ್ತಿಗೆ ಪ್ರವೇಶ ಸಿಗುವ ಸಾಧ್ಯತೆ ಇದೆ.

ಪಂದ್ಯದ 21ನೇ ನಿಮಿಷದಲ್ಲಿ ಕೆವಿನ್‌ ಪಿನಾ, ಕೇಪ್‌ ವರ್ಡೆ ಪರ ಚೊಚ್ಚಲ ಗೋಲು ದಾಖಲಿಸಿದರು. ಆದರೆ ಮುನ್ನಡೆ ಸಾಧಿಸಲು ಉರುಗ್ವೆಗೆ ಹೆಚ್ಚು ಸಮಯ ಬೇಕಾಗಲಿಲ್ಲ. 44ನೇ ನಿಮಿಷದಲ್ಲಿ ಅರೌಜಿಯೊ, 45+6ನೇ ನಿಮಿಷದಲ್ಲಿ ಕ್ಯಾನೊಬ್ಬಿಯೊ ಗೋಲು ಗಳಿಸಿ, ಉರುಗ್ವೆಗೆ ಮುನ್ನಡೆ ಒದಗಿಸಿದರು. ಆದರೆ, 61ನೇ ನಿಮಿಷದಲ್ಲಿ ಗೋಲು ಗಳಿಸಿದ ಹೇಲಿಯೊ ವರೆಲಾ, ಕೇಪ್‌ ವರ್ಡೆಯನ್ನು ಸೋಲಿನಿಂದ ಪಾರು ಮಾಡಿದರು.