ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ಫೈನಲ್‌ನಲ್ಲಿ ಮೇಘಾಲಯ ಎದುರು 3-2 ಗೋಲುಗಳ ಅಂತರದ ಜಯಭೇರಿಮೈಸೂರು ಸಂಸ್ಥಾನವಿದ್ದಾಗ 4 ಟ್ರೋಫಿ ಜಯಿಸಿದ್ದ ರಾಜ್ಯ ತಂಡ
ರಿಯಾದ್(ಮಾ.05): ಬರೋಬ್ಬರಿ 54 ವರ್ಷಗಳ ಬಳಿಕ ಕರ್ನಾಟಕ ತಂಡ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಪಟ್ಟಅಲಂಕರಿಸಿದೆ. 76ನೇ ಆವೃತ್ತಿಯ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಶನಿವಾರ ಮೇಘಾಲಯ ವಿರುದ್ಧ 3-2 ಗೋಲುಗಳ ರೋಚಕ ಗೆಲುವು ಸಾಧಿಸಿ ಪ್ರಶಸ್ತಿ ಎತ್ತಿಹಿಡಿಯಿತು.
46 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ್ದ ರಾಜ್ಯ ತಂಡ, ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿತು. ಫೈನಲ್‌ನಲ್ಲೂ ಕರ್ನಾಟಕ 2ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಸೆಮೀಸ್‌ನಲ್ಲಿ ಗೋಲು ಬಾರಿಸಿದ್ದ ಸುನಿಲ್ ಕುಮಾರ್ ರಾಜ್ಯಕ್ಕೆ ಮೊದಲ ಗೋಲು ತಂದುಕೊಟ್ಟರು. ಆದರೆ ಸಮಬಲ ಸಾಧಿಸಲು ಮೇಘಾಲಯ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. 8ನೇ ನಿಮಿಷದಲ್ಲಿ ಕರ್ನಾಟಕದ ಆಟಗಾರ ಪೌಲ್ ಮಾಡಿದ ಕಾರಣ, ಮೇಘಾಲಯಕ್ಕೆ ಪೆನಾಲ್ಟಿ ದೊರೆಯಿತು. 9ನೇ ನಿಮಿಷದಲ್ಲಿ ಬ್ರೊಲಿಂಗ್ಟನ್ ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರು.
19ನೇ ನಿಮಿಷದಲ್ಲಿ ಬೀಕೆ ಓರಮ್ ರಾಜ್ಯಕ್ಕೆ ಮತ್ತೆ ಮುನ್ನಡೆ ಒದಗಿಸಿದರೆ, 44ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಮೂಲಕ ರಾಬಿನ್ ಯಾದವ್ ಅತ್ಯಾಕರ್ಷಕ ಗೋಲು ದಾಖಲಿಸಿದರು. ಮೊದಲಾರ್ಧದ ಅಂತ್ಯಕ್ಕೆ ಕರ್ನಾಟಕ 3-1ರ ಮುನ್ನಡೆ ಪಡೆಯಿತು.
ದ್ವಿತೀಯಾರ್ಧದಲ್ಲಿ ಮೇಘಾಲಯ ಮತ್ತಷ್ಟು ಆಕ್ರಮಣಕಾರಿ ಆಟವಾಡಿತು. 60ನೇ ನಿಮಿಷದಲ್ಲಿ ಶೀನ್ ಸ್ಟೀವನ್ಸನ್ ಅಂತರವನ್ನು 2-3ಕ್ಕೆ ಇಳಿಸಿದರು. ಕೊನೆ 20 ನಿಮಿಷ ಭಾರೀ ಪೈಪೋಟಿಯಿಂಡ ಕೂಡಿತ್ತು. ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಎರಡೂ ತಂಡಗಳು ಸೆಣಸಾಡಿದವು. ಆದರೆ ಗೋಲು ದಾಖಲಾಗಲಿಲ್ಲ. ಚೊಚ್ಚಲ ಬಾರಿಗೆ ಫೈನಲ್‌ಗೇರಿದ್ದ ಮೇಘಾಲಯದ ಪ್ರಶಸ್ತಿ ಕನಸು ಭಗ್ನಗೊಂಡರೆ, ರಾಜ್ಯದ ಆಟಗಾರರು ಕುಣಿದು ಸಂಭ್ರಮಿಸಿದರು.
Santosh Trophy: ಇಂದು ಕರ್ನಾಟಕ-ಮೇಘಾಲಯ ಫೈನಲ್ ಹಣಾಹಣಿ, ಇತಿಹಾಸ ಬರೆಯುತ್ತಾ ರಾಜ್ಯ ತಂಡ?
ಮೈಸೂರು ಸಂಸ್ಥಾನವಿದ್ದಾಗ 4 ಟ್ರೋಫಿ ಗೆಲುವು!
ಕರ್ನಾಟಕಕ್ಕೆ ಇದು ಒಟ್ಟಾರೆ 5ನೇ ಟ್ರೋಫಿ. ಈ ಹಿಂದೆ ಮೈಸೂರು ಸಂಸ್ಥಾನವಿದ್ದಾಗ ರಾಜ್ಯ 4 ಬಾರಿ ಟ್ರೋಫಿ ಎತ್ತಿಹಿಡಿದಿತ್ತು. 1946-47ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದ ಮೈಸೂರು ತಂಡ, 1952-53, 1967-68, 1968-69ರಲ್ಲಿ ಪ್ರಶಸ್ತಿ ಜಯಿಸಿತ್ತು. ಇದಕ್ಕೂ ಮುನ್ನ 1975-76ರಲ್ಲಿ ಫೈನಲ್ ಪ್ರವೇಶಿಸಿದ್ದ ಕರ್ನಾಟಕ, ಬಂಗಾಳ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ರಾಜ್ಯ ತಂಡಕ್ಕೆ ಕನ್ನಡಿಗ ಅಭಿಮಾನಿಗಳ ಬೆಂಬಲ!
ಮೊದಲ ಬಾರಿಗೆ ಟೂರ್ನಿಯ ನಾಕೌಟ್ ಪಂದ್ಯಗಳನ್ನು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆಸಲಾಯಿತು. ಫೈನಲ್ ಪಂದ್ಯವನ್ನು ವೀಕ್ಷಿಸಲು ರಿಯಾದ್‌ನಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಆಗಮಿಸಿದ್ದರು. ಕನ್ನಡ ಬಾವುಟಗಳನ್ನು ಹಾರಿಸುತ್ತಾ, ರಾಜ್ಯ ತಂಡವನ್ನು ಹುರಿದುಂಬಿಸಿದರು.
