ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಒಡಿಶಾ ವಿರುದ್ಧದ ಗೆಲುವಿನೊಂದಿಗೆ ಸುನಿಲ್ ಚೆಟ್ರಿ ಬಳಗ ಈ ಸಾಧನೆ ಮಾಡಿದೆ. 

ಬೆಂಗಳೂರು(ಜ.23): ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) 6ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ ಅಗ್ರಸ್ಥಾನಕ್ಕೇರಿದೆ. ಬುಧವಾರ ತನ್ನ ಭದ್ರಕೋಟೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಒಡಿಶಾ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 3-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು. 

ಇದನ್ನೂ ಓದಿ: ಐಎಸ್‌ಎಲ್‌: ಬಿಎಫ್‌ಸಿಗೆ 2-0 ಜಯ

14 ಪಂದ್ಯಗಳಿಂದ 25 ಅಂಕ ಗಳಿಸಿರುವ ಬಿಎಫ್‌ಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರೌಂಡ್‌ ರಾಬಿನ್‌ ಮಾದರಿಯಲ್ಲಿ ಇನ್ನು 4 ಪಂದ್ಯಗಳು ಬಾಕಿ ಇದ್ದು, ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿವೆ.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ಬಿಎಫ್‌ಸಿ ಆಟಗಾರರು ನಿರಾಸೆಗೊಳಿಸಲಿಲ್ಲ. 23ನೇ ನಿಮಿಷದಲ್ಲಿ ಡೆಶ್‌ಹಾರ್ನ್‌ ಬ್ರೌನ್‌ ಗೋಲು ಬಾರಿಸಿದರು. ಬಿಎಫ್‌ಸಿ ಪರ ದು ಬ್ರೌನ್‌ ಬಾರಿಸಿದ ಮೊದಲ ಗೋಲು. 25ನೇ ನಿಮಿಷದಲ್ಲಿ ಡಿಫೆಂಡರ್‌ ರಾಹುಲ್‌ ಭೇಕೆ ಅಂತರವನ್ನು 2-0ಗೇರಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ 2-0 ಮುನ್ನಡೆ ಸಾಧಿಸಿದ್ದ ಬಿಎಫ್‌ಸಿ ದ್ವಿತೀಯಾರ್ಧದಲ್ಲೂ ಆಕ್ರಮಣಕಾರಿ ಆಟ ಮುಂದುವರಿಸಿತು. 

ಇದನ್ನೂ ಓದಿ: ಸುನಿಲ್ ಚೆಟ್ರಿ ಆಬ್ಬರ, ಗೋವಾ ವಿರುದ್ಧ BFCಗೆ ಗೆಲುವು!.

61ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಅವಕಾಶದಲ್ಲಿ ಗೋಲು ಬಾರಿಸಿದ ನಾಯಕ ಸುನಿಲ್‌ ಚೆಟ್ರಿ, ತಂಡ 3-0 ಅಂತರದಲ್ಲಿ ಜಯ ಗಳಿಸಲು ಸಹಕಾರಿಯಾದರು. ಈ ಸೋಲಿನೊಂದಿಗೆ ಒಡಿಶಾ ಎಫ್‌ಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಉಳಿದುಕೊಂಡಿದೆ.