ಬೆಂಗಳೂರು(ಜ.04): ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ, 6ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ನಲ್ಲಿ ಗೆಲುವಿನ ಲಯ ಮುಂದುವರಿಸಿದೆ. ಶುಕ್ರವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ವರ್ಷದ ಮೊದಲ ಪಂದ್ಯದಲ್ಲಿ, ಬಿಎಫ್‌ಸಿ ತಂಡ ಗೋವಾ ಎಫ್‌ಸಿ ವಿರುದ್ಧ 2-1 ಗೋಲುಗಳ ರೋಚಕ ಗೆಲುವು ಸಾಧಿಸಿತು. ನಾಯಕ ಸುನಿಲ್‌ ಚೆಟ್ರಿ 2 ಗೋಲು ಬಾರಿಸಿ, ತನ್ನ ಭದ್ರಕೋಟೆಯಲ್ಲಿ ಬಿಎಫ್‌ಸಿ ಗೆಲುವಿನ ಕೇಕೆ ಹಾಕಲು ನೆರವಾದರು.

 

ಇದನ್ನೂ ಓದಿ: ಪಂದ್ಯ ಆಡುತ್ತಲೇ ಕುಸಿದು ಬಿದ್ದು ಫುಟ್ಬಾಲ್ ಪಟು ಸಾವು!..

ಈ ಗೆಲುವಿನೊಂದಿಗೆ ಬಿಎಫ್‌ಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. 11 ಪಂದ್ಯಗಳಿಂದ ತಂಡ 19 ಅಂಕ ಹೊಂದಿದೆ. 11 ಪಂದ್ಯಗಳಿಂದ 21 ಅಂಕ ಗಳಿಸಿರುವ ಗೋವಾ, ಅಗ್ರಸ್ಥಾನ ಕಾಯ್ದುಕೊಂಡಿದೆ.

ಪಂದ್ಯದ ಮೊದಲಾರ್ಧ ಗೋಲು ರಹಿತ ಮುಕ್ತಾಯಗೊಂಡ ಬಳಿಕ ದ್ವಿತೀಯಾರ್ಧದಲ್ಲಿ ಚೆಟ್ರಿ, ಗೋಲಿನ ಖಾತೆ ತೆರೆದರು. 59ನೇ ನಿಮಿಷದಲ್ಲಿ 1-0 ಮುನ್ನಡೆ ಪಡೆದ ಬಿಎಫ್‌ಸಿಗೆ ಎರಡೇ ನಿಮಿಷದಲ್ಲಿ ಆಘಾತ ಎದುರಾಯಿತು. 61ನೇ ನಿಮಿಷದಲ್ಲಿ ಬೌಮೊಸ್‌ ಗೋಲು ಬಾರಿಸಿ ಗೋವಾ 1-1ರಲ್ಲಿ ಸಮಬಲ ಸಾಧಿಸಲು ಕಾರಣರಾದರು. 

 

ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಗಿಫ್ಟ್ ನೀಡಿದ ಮುಂಬೈ FC

ಬಳಿಕ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಉಭಯ ತಂಡಗಳ ನಡುವೆ ಪೈಪೋಟಿ ಜೋರಾಯಿತು. 84ನೇ ನಿಮಿಷದಲ್ಲಿ ಚೆಟ್ರಿ, ಆಕರ್ಷಕ ಗೋಲು ಬಾರಿಸಿ ಬೆಂಗಳೂರು ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡಿದರು. ಬಿಎಫ್‌ಸಿ ರೋಚಕ ಜಯದೊಂದಿಗೆ ಹೊಸ ವರ್ಷಕ್ಕೆ ಕಾಲಿಟ್ಟಿತು.