ಗೋವಾ(ಡಿ.01):  ಗ್ಲೆನ್ವಿಲ್ಲೆ ಲೀ ಫೊಂಡ್ರೆ (20 ಮತ್ತು 48ನೇ ನಿಮಿಷ) ಮತ್ತು ಹೆರ್ನಾನ್ ಡೇನಿಯಲ್ ಸಾಂಟನಾ (58ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಈಸ್ಟ್ ಬೆಂಗಾಲ್ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಮುಂಬೈ ಸಿಟಿ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ  ಅಗ್ರ ಸ್ಥಾನಕ್ಕೇರಿತು. ಸತತ ಎರಡು ಸೋಲಿನಿಂದ ಕಂಗೆಟ್ಟ ಈಸ್ಟ್ ಬೆಂಗಾಲ್ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಡಿಫೆನ್ಸ್ ವಿಭಾಗದಲ್ಲಿನ ವೈಫಲ್ಯ, ಅನುಭವದ ಕೊರತೆ ಪಾಸ್ ನಲ್ಲಿ ನಿಖರತೆ ಇಲ್ಲದ ಕಾರಣ ಈಸ್ಟ್ ಬೆಂಗಾಲ್ ಸೋಲಿಗೆ ಪ್ರಮುಖ ಕಾರಣವಾಯಿತು.

ISL 2020: ಗೋವಾ, ನಾರ್ತ್ ಈಸ್ಟ್‌ ಪಂದ್ಯ ಡ್ರಾ

ಮುನ್ನಡೆದ ಮುಂಬೈ ಸಿಟಿ: 
20ನೇ ನಿಮಿಷದಲ್ಲಿ ಲೀ ಫೊಂಡ್ರೆ ಗಳಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ವಿರುದ್ಧದ ಪ್ರಥಮಾರ್ಧದಲ್ಲಿ 1-0 ಗೋಲಿನ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯ ಆತ್ಯಂತ ಆಕ್ರಮಣಕಾರಿಯಾಗಿತ್ತು. ಹ್ಯೂಗೊ ಬೌಮಾಸ್ ಸುಮಾರು ಮಧ್ಯ ಪಿಚ್ ನಲ್ಲಿ ದೊರೆತ ಚೆಂಡನ್ನು ಒಂಟಿಯಾಗಿಯೇ  ಮುನ್ನಡೆಸಿ ಪೆನಾಲ್ಟಿ ವಲಯದಲ್ಲಿ ಫೊಂಡ್ರೆಗೆ ಹಸ್ತಾಂತರಿಸಿದರು.
 
ಈ ನಡುವೆ ಈಸ್ಟ್ ಬೆಂಗಾಲ್ ಗೋಲ್ ಕೀಪರ್ ದೇಬಜಿತ್ ಮಜುಂದರ್ ಮುನ್ನಡೆದು ಚೆಂಡನ್ನು ತಡೆಯಲು ಯತ್ನಿಸಿದರೂ ಬೌಮಾಸ್ ಜಾಣ್ಮೆಯಿಂದ ಚೆಂಡನ್ನು ಫೊಂಡ್ರೆಗೆ ನೀಡಿದರು. ಈಸ್ಟ್ ಬೆಂಗಾಲ್ ತಂಡದ ನಾಯಕ ಡೇನಿಯಲ್ ಫಾಕ್ಸ್ ಆರಂಭದಲ್ಲೇ ಗಾಯಗೊಂಡು ನಿರ್ಗಮಿಸಿದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.