ಗುವಾಹಟಿ(ಫೆ.10): ಆತಿಥೇಯ ನಾರ್ಥ್ ಈಸ್ಟ್ ತಂಡ 3 ಗೋಲು ಸಿಡಿಸಿದರೆ, ಇತ್ತ ಎದುರಾಳಿ ಜೆಮ್‌ಶೆಡ್‌ಫುರ ತಂಡ 3 ಗೋಲು ಸಿಡಿಸಿತು. ಹೀಗಾಗಿ ಪಂದ್ಯ 3-3 ಅಂತರದಿಂದ ಡ್ರಾಗೊಂಡಿತು. ಉಭಯ ತಂಡಗಳ ಪ್ಲೇ ಆಫ್ ಕನಸು ಈಗಾಗಲೇ ಭಗ್ನಗೊಂಡಿದೆ. ಕೇವಲ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಹೋರಾಟ ನಡೆಸಿತ್ತು. ಆದರೆ ಅದೂ ಕೂಡ ಕೈಗೂಡಲಿಲ್ಲ. 

ಇದನ್ನೂ ಓದಿ: ISL 2020: ಪಂದ್ಯ ಡ್ರಾ, ಕೇರಳ ಪ್ಲೇ ಆಫ್‌ ಕನಸು ಭಗ್ನ!

ಇತ್ತಂಡಗಳು ಸೋಲು ಗೆಲುವಿನ ಲೆಕ್ಕಾಚಾರವನ್ನು ಮರೆತು ತಮ್ಮ ನೈಜ ಸಾಮರ್ಥ್ಯವನ್ನು ತೋರಲು ಮುಂದಾಯಿತು. ಪರಿಣಾಮ ನಾರ್ಥ್ ಈಸ್ಟ್ ತಂಡ ಆರಂಭದಲ್ಲೇ ಗೋಲು ಗಳಿಸಿದರೆ ಪ್ರವಾಸಿ ಜೆಮ್ಷೆಡ್ಪುರ ತಂಡ ಪ್ರಥಮಾರ್ಧದ ಕೊನೆಯಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು. ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲಿ ಫೆಡ್ರಿಕೊ ಗಲ್ಲೆಗೊ ಗಳಿಸಿದ ಗೊಲು ಆತಿಥೇಯ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. 

ಇದಕ್ಕೂ ಮುನ್ನ ರಫೀಕ್ ಅಲಿ ಉತ್ತಮ ರೀತಿಯಲ್ಲಿ ತಡೆದ ಕಾರಣ ಮತ್ತೊಂದು ಗೋಲಿನ ಅವಕಾಶ ತಪ್ಪಿತ್ತು. ಬಿಕಾಶ್ ಜೈರುಗೆ ಸಮಬಲಗೊಳಿಸುವ ಅವಕಾಶ ಸಿಕ್ಕರೂ ಸದುಪಯೋಗಪಡಿಸಿಕೊಳ್ಳಲಿಲ್ಲ. ಪ್ರಥಮಾರ್ಧ ಮುಗಿಯುವುದಕ್ಕೆ ಕೆಲ ಕ್ಷಣಗಳು ಬಾಕಿ ಇರುವಾಗ ಡೇವಿಡ್ ಗ್ರಾಂಡೆ 45ನೇ ನಿಮಿಷದಲ್ಲಿ ಗಳಿಸಿದ ಗೋಲು ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿತು. 

ದ್ವಿತಿಯಾರ್ಧದಲ್ಲಿ ಉಭಯ ತಂಡ ತಲಾ 2 ಗೋಲು ಸಿಡಿಸಿತು. ಉಭಯ ತಂಡಗಳು ತಲಾ 3 ಗೋಲು ಸಿಡಿಸಿದರೂ ಗೆಲುವು ಸಿಗಲಿಲ್ಲ. ಆತಿಥೇಯ ನಾರ್ಥ್ ಈಸ್ಟ್ ಯುನೈಟೆಡ್ ಪರ ಫೆಡ್ರಿಕೊ ಗೆಲ್ಲೆಗೊ (5ನೇ ನಿಮಿಷ), ರೀಡಿಮ್ ತಾಂಗ್ (77ನೇ ನಿಮಿಷ) ಮತ್ತು ಜೋಸ್ ಡೇವಿಡ್ ಲ್ಯುಡೋ (88ನೇ ನಿಮಿಷ) ಗೋಲು ಸಿಡಿಸಿದರು. ಇತ್ತ ಜೆಮ್ಷೆಡ್ಪುರ ಎಫ್ ಸಿ ಪರ ಡೇವಿಡ್ ಗ್ರಾಂಡೆ (45ನೇ ನಿಮಿಷ), ನೋಯ್ ಅಕೋಸ್ಟಾ ರಿವೆರಾ (82ನೇ ನಿಮಿಷ) ಹಾಗೂ ಎಮರ್ಸನಗ ಗೊಮೆಸ್ ಮೆಮೊ (85ನೇ ನಿಮಿಷ) ಗೋಲು ಸಿಡಿಸಿದರು.  ಹೀಗಾಗಿ ಪಂದ್ಯ 3-3 ಅಂತರದಲ್ಲಿ ಡ್ರಾಗೊಂಡಿತು.