ಬಹುಮಾನ ಮೊತ್ತವಾಗಿ ಸಿಕ್ಕ ಹಣದ ಪಾಲನ್ನು ಕೋರಮಂಡಲ್ ದುರಂತದ ಸಂತ್ರಸ್ಥರಿಗೆ ನೀಡಿದ ಬ್ಲ್ಯೂ ಟೈಗರ್ಸ್!
ಭುವನೇಶ್ವರದಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಫುಟ್‌ಬಾಲ್ ಟೂರ್ನಿ ಚಾಂಪಿಯನ್ ಆದ ಭಾರತ ಫುಟ್‌ಬಾಲ್ ತಂಡಕ್ಕೆ ಒಡಿಶಾ ಸರ್ಕಾರ 1 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಈ ಹಣದಲ್ಲಿ 20 ಲಕ್ಷ ರೂಪಾಯಿಯನ್ನು ಫುಟ್‌ಬಾಲ್ ಟೀಮ್, ಬಾಲಸೋರ್ ರೈಲು ದುರಂತದ ಕುಟುಂಬಕ್ಕೆ ನೀಡಿದೆ.
ನವದೆಹಲಿ (ಜೂ.19): ಈ ತಿಂಗಳ ಆರಂಭದಲ್ಲಿ ಒಡಿಶಾದಲ್ಲಿ ಬಾಲಸೋರ್‌ನಲ್ಲಿ ನಡೆದ ಮೂರು ರೈಲುಗಳ ಅಪಘಾತದಲ್ಲಿ ಬರೋಬ್ಬರಿ 291 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ನೋವಿನ ನಡುವೆಯೂ ಒಡಿಶಾ ರಾಜ್ಯ ಭುವನೇಶ್ವರದಲ್ಲಿ ಅತ್ಯಂತ ಯಶಸ್ವಿಯಾಗಿ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್‌ಬಾಲ್ ಟೂರ್ನಿಯನ್ನು ಆಯೋಜನೆ ಮಾಡಿದೆ. ಭಾನುವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ ಭಾರತ ಫುಟ್‌ಬಾಲ್ ತಂಡ ಚಾಂಪಿಯನ್ ಆಗಿದೆ. ಲೆಬನಾನ್ ತಂಡವನ್ನು ಫೈನಲ್‌ನಲ್ಲಿ 2-0 ಗೋಲುಗಳಿಂದ ಮಣಿಸುವ ಮೂಲಕ ಇಗೋರ್ ಸ್ಟೀಮ್ಯಾಕ್ ತರಬೇತಿಯ ಭಾರತ ತಂಡ ಟ್ರೋಫಿಯನ್ನು ಜಯಿಸಿದೆ. ಮೂರು ಬಾರಿ ಈ ಟೂರ್ನಿಯ ಫೈನಲ್‌ಗೇರಿದ್ದ ಭಾರತ ತಂಡ 2ನೇ ಬಾರಿಗೆ ಚಾಂಪಿಯನ್ ಆಗಿದೆ. ತಂಡ ಟ್ರೋಫಿ ಗೆದ್ದ ಬೆನ್ನಲ್ಲಿಯೇ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರ ಭಾರತ ತಂಡಕ್ಕೆ 1 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಇಡೀ ತಂಡಕ್ಕೆ ಘೋಷಣೆ ಮಾಡಿದ್ದರು. ಸರ್ಕಾರ ಬಹುಮಾನ ಹಣ ಘೋಷಣೆ ಮಾಡಿದ ಬೆನ್ನಲ್ಲಿಯೇ ಈ ಮೊತ್ತದಲ್ಲಿ 20 ಲಕ್ಷ ರೂಪಾಯಿಯನ್ನು ಬಾಲಸೋರ್ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡುವಂತೆ ಫುಟ್‌ಬಾಲ್ ಟೀಮ್ ಮನವಿ ಮಾಡಿದೆ. ಫುಟ್‌ಬಾಲ್ ತಂಡದ ಈ ನಿರ್ಧಾರ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಫುಟ್‌ಬಾಲ್ ತಂಡದ ಮೆಚ್ಚುಗೆಯ ನಿರ್ಧಾರದಲ್ಲಿ 20 ಲಕ್ಷ ರೂಪಾಯಿ ಹಣವನ್ನು ರೈಲು ದುರಂತದಲ್ಲಿ ಮೃತಪಟ್ಟದ ಕುಟುಂಬದ ಪರಿಹಾರ ಹಾಗೂ ಪುನರ್ವಸತಿಗಾಗಿ ಬಳಸಿಕೊಳ್ಳುವಂತೆ ಫುಟ್‌ಬಾಲ್ ಟೀಮ್ ತಿಳಿಸಿದೆ. ಒಡಿಶಾ ಸರ್ಕಾರ 1 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿದ ಬೆನ್ನಲ್ಲಿಯೇ ಭಾರತೀಯ ಫುಟ್‌ಬಾಲ್ ಟೀಮ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡನ್‌ನಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದೆ. ಇದು ವಿಜೇತ ತಂಡದ ಸಂಪೂರ್ಣ ಆಟಗಾರರು ಹಾಗೂ ಸಿಬ್ಬಂದಿ ನಿರ್ಧಾರವಾಗಿದ್ದು, ತಂಡದ ಡ್ರೆಸಿಂಗ್ ರೂಮ್‌ನಲ್ಲಿಯೇ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದೆ.
"ನಮ್ಮ ಗೆಲುವಿಗಾಗಿ ಒಡಿಶಾ ಸರ್ಕಾರವು ತಂಡಕ್ಕೆ ನಗದು ಬೋನಸ್ ನೀಡುವ ಘೋಷಣೆ ಮಾಡಿದ್ದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಡ್ರೆಸ್ಸಿಂಗ್ ರೂಮ್‌ನ ತ್ವರಿತ ಮತ್ತು ಸಾಮೂಹಿಕ ನಿರ್ಧಾರದಲ್ಲಿ, ನಾವು ಅದರಲ್ಲಿ 20 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಲು ನಿರ್ಧರಿಸಿದ್ದೇವೆ. ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಸಂಭವಿಸಿದ ದುರದೃಷ್ಟಕರ ರೈಲು ಅಪಘಾತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಈ ಹಣ ಬಳಸಿಕೊಳ್ಳಬೇಕು' ಎಂದು ತಿಳಿಸಿದೆ.
ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಹಣ ನೀಡಿ ಅವರ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಆದರೆ, ಕುಟುಂಬದ ಖುಷಿಗೆ ಈ ಹಣ ಸಣ್ಣ ಪ್ರಮಾಣದ ಪಾತ್ರವನ್ನು ವಹಿಸಬಹುದು ಎಂದು ಭಾವಿಸುತ್ತೇವೆ ಎಂದು ಟ್ವಿಟರ್‌ನಲ್ಲಿ ತಿಳಿಸಲಾಗಿದೆ. ರೈಲು ಅಪಘಾತದಲ್ಲಿ ಒಟಟು 291 ಮಂದಿ ಅಧಿಕೃತವಾಗಿ ಮೃತಪಟ್ಟಿದ್ದರೆ 1 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಲೆಬನಾನ್ ತಂಡವನ್ನು ಸೋಲಿಸಿ ಇಂಟರ್‌ಕಾಂಟಿನೆಂಟಲ್ ಕಪ್ ಗೆದ್ದ ಭಾರತ
ಇನ್ನು ಟೀಮ್‌ನ ವಿಚಾರಕ್ಕೆ ಬರುವುದಾದರೆ, ಟೂರ್ನಿಯಲ್ಲಿ ಭಾರತ ಎದುರಾಳಿ ತಂಡಕ್ಕೆ ಒಂದೇ ಒಂದು ಗೋಲು ಬಿಟ್ಟುಕೊಟ್ಟಿಲ್ಲ. ಮಂಗೋಲಿ ಹಾಗೂ ವನೌಟು ವಿರುದ್ಧ ತಂಡ ಗೆಲುವು ಸಾಧಿಸಿದ್ದರೆ, ಲೆಬನಾನ್ ವಿರುದ್ಧ ಲೀಗ್ ಪಂದ್ಯದಲ್ಲಿ ಗೋಲು ರಹಿತ ಡ್ರಾ ಸಾಧಿಸಿತ್ತು. ಫೈನಲ್ ಪಂದ್ಯದಲ್ಲಿ ಲೆಬನಾನ್ ವಿರುದ್ಧ ಎರಡು ಗೋಲು ಸಿಡಿಸಿಸ ಟ್ರೋಫಿಯನ್ನು ಗೆದ್ದಿದೆ.
ರಿಲೀಸ್‌ಗೆ ರೆಡಿಯಾದ ಎಂಎಸ್ ಧೋನಿ ನಿರ್ಮಾಣದ ಮೊದಲ ಸಿನಿಮಾ!