Indian Super League: ಇಂದು ಬಿಎಫ್‌ಸಿ vs ಮುಂಬೈ ಸೆಮಿಫೈನಲ್‌ ಫೈಟ್

9ನೇ ಆವೃತ್ತಿಯ ಐಎಸ್‌ಎಲ್‌ ಟೂರ್ನಿಯ ಮೊದಲ ಸೆಮಿಫೈನಲ್‌ಗೆ ಕ್ಷಣಗಣನೆ
ಮೊದಲ ಸೆಮೀಸ್‌ನಲ್ಲಿ ಬೆಂಗಳೂರು ಎಫ್‌ಸಿ-ಮುಂಬೈ ಸಿಟಿ ಎಫ್‌ಸಿ ಫೈಟ್
ಸೆಮೀಸ್‌ನಲ್ಲಿ ತಂಡಗಳು ಎರಡು ಬಾರಿ ಮುಖಾಮುಖಿಯಾಗಲಿವೆ

Indian Super League Semi Final Bengaluru FC take on Mumbai City FC kvn

ಮುಂಬೈ(ಮಾ.07): 9ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಮೊದಲ ಸೆಮಿಫೈನಲ್‌ನ ಮೊದಲ ಚರಣದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿಗೆ ಬಲಿಷ್ಠ ಮುಂಬೈ ಸಿಟಿ ಎಫ್‌ಸಿ ಸವಾಲು ಎದುರಾಗಲಿದೆ. ಸೆಮೀಸ್‌ನಲ್ಲಿ ತಂಡಗಳು ಎರಡು ಬಾರಿ ಮುಖಾಮುಖಿಯಾಗಲಿದ್ದು, ಎರಡೂ ಪಂದ್ಯಗಳಲ್ಲಿ ಗರಿಷ್ಠ ಗೋಲು ಬಾರಿಸುವ ತಂಡ ಫೈನಲ್‌ಗೇರಲಿದೆ. ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಮುಂಬೈ ನೇರವಾಗಿ ಸೆಮೀಸ್‌ಗೇರಿತ್ತು. ಬಿಎಫ್‌ಸಿ ಎಲಿಮಿನೇಟರ್‌ ಪಂದ್ಯದಲ್ಲಿ ಕೇರಳ ವಿರುದ್ಧ ಜಯ ಸಾಧಿಸಿ ಅಂತಿಮ 4ರ ಸುತ್ತಿಗೆ ಪ್ರವೇಶ ಪಡೆಯಿತು.

ಲೀಗ್‌ನಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದವು. ಮೊದಲ ಪಂದ್ಯದಲ್ಲಿ ಮುಂಬೈ ಜಯಿಸಿದ್ದರೆ, 2ನೇ ಪಂದ್ಯವನ್ನು ಬಿಎಫ್‌ಸಿ ಗೆದ್ದುಕೊಂಡಿತ್ತು. ಬಿಎಫ್‌ಸಿ ತಂಡ ಸುಮಾರು ಒಂದು ತಿಂಗಳ ಬಳಿಕ ತವರಿನಾಚೆ ಪಂದ್ಯವಾಡಲಿದೆ. ಮತ್ತೊಂದೆಡೆ ಮುಂಬೈ ಸತತ 2 ಸೋಲುಗಳ ಬಳಿಕ ಜಯದ ಲಯಕ್ಕೆ ಮರಳಲು ಕಾತರಿಸುತ್ತಿದೆ.

ಬಿಎಫ್‌ಸಿ ತನ್ನ ತಾರಾ ಸ್ಟ್ರೈಕರ್‌ಗಳಾದ ಸುನಿಲ್‌ ಚೆಟ್ರಿ, ಶಿವಶಕ್ತಿ ಹಾಗೂ ರಾಯ್‌ ಕೃಷ್ಣ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. 2ನೇ ಚರಣದ ಪಂದ್ಯ ಮಾರ್ಚ್‌ 12ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಕೇರಳ ಮನವಿ ತಿರಸ್ಕಾರ!

ನವದೆಹಲಿ: ಬಿಎಫ್‌ಸಿ ವಿರುದ್ಧ ಐಎಸ್‌ಎಲ್‌ ಎಲಿಮಿನೇಟರ್‌ ಪಂದ್ಯವನ್ನು ಮತ್ತೆ ನಡೆಸಬೇಕು, ಸುನಿಲ್‌ ಚೆಟ್ರಿ ಅವರ ವಿವಾದಿತ ಫ್ರೀ ಕಿಕ್‌ ಮಾನ್ಯಗೊಳಿಸಿದ ರೆಫ್ರಿ ಕ್ರಿಸ್ಟಲ್‌ ಜಾನ್‌ ಅವರನ್ನು ಬ್ಯಾನ್‌ ಮಾಡಬೇಕು ಎನ್ನುವ ಕೇರಳ ಬ್ಲಾಸ್ಟ​ರ್ಸ್‌ ಮನವಿಯನ್ನು ಅಖಿಲ ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಸೋಮವಾರ ತಿರಸ್ಕರಿಸಿದೆ. 

Indian Super League: ಸೆಮೀಸ್‌ಗೆ ಬೆಂಗಳೂರು ಎಫ್‌ಸಿ ಲಗ್ಗೆ..! ವಿವಾದ ಮಾಡಿ ಮೈದಾನ ತೊರೆದ ಕೇರಳ

ತಂಡದ ವಿರುದ್ಧ ಯಾವ ಕ್ರಮಕೈಗೊಳ್ಳಲಿದೆ ಎನ್ನುವುದನ್ನು ಎಐಎಫ್‌ಎಫ್‌ ಮಂಗಳವಾರ ತಿಳಿಸುವ ನಿರೀಕ್ಷೆ ಇದ್ದು, ಭಾರೀ ಮೊತ್ತದ ದಂಡ ವಿಧಿಸುವ ಸಾಧ್ಯತೆ ಎನ್ನಲಾಗುತ್ತಿದೆ. ತಂಡವನ್ನು 2 ವರ್ಷ ನಿಷೇಧಗೊಳಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಫುಟ್ಬಾಲ್‌ ವಲಯದಲ್ಲಿ ಚರ್ಚೆಯಾಗುತ್ತಿದೆ.

ವಿವಾದಕ್ಕೆ ಕಾರಣವೇನು?

ಫ್ರೀ ಕಿಕ್‌ ವೇಳೆ ಚೆಟ್ರಿ ಹಾಗೂ ಕೆಲ ಬಿಎಫ್‌ಸಿ ಆಟಗಾರರು ಕೇರಳ ಆಟಗಾರರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದರು. ಈ ನಡುವೆ ಚೆಟ್ರಿ ಬಾರಿಸಿದ ಚೆಂಡು ಗೋಲು ಪೆಟ್ಟಿಗೆ ಸೇರಿತು. ರೆಫ್ರಿ ಗೋಲು ದಾಖಲಾಯಿತು ಎಂದು ಘೋಷಿಸಿದರು. ಆದರೆ ಫ್ರೀ ಕಿಕ್‌ಗೂ ಮುನ್ನ ರೆಫ್ರಿ ಸೂಚನೆ ನೀಡಲಿಲ್ಲ. ತಾವು ಸಿದ್ಧರಿರಲಿಲ್ಲ ಎಂದು ಕೇರಳ ಆಟಗಾರರು ಪ್ರತಿಭಟಿಸಲು ಶುರು ಮಾಡಿದರು. ಕೋಚ್‌ ವುಕೊಮನೊವಿಚ್‌ ಆಟಗಾರರನ್ನು ಮೈದಾನ ಬಿಟ್ಟು ಬರುವಂತೆ ಕರೆದರು. 

ನಾಯಕ ಏಡ್ರಿಯನ್‌ ಲುನಾ ರೆಫ್ರಿ ಕ್ರಿಸ್ಟಲ್‌ ಜಾನ್‌ ಜೊತೆ ಜಗಳಕ್ಕೇ ಇಳಿದರು. ಚೆಟ್ರಿ ಕೇರಳ ಆಟಗಾರರನ್ನು ಸಮಾಧಾನಪಡಿಸಿ ಆಟ ಮುಂದುವರಿಸುವಂತೆ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಕೇರಳ ಆಟಗಾರರು ಮೈದಾನಕ್ಕೆ ವಾಪಸಾಗದ ಕಾರಣ ಗೆಲುವನ್ನು ಬಿಎಫ್‌ಸಿಗೆ ನೀಡಲಾಯಿತು.

Latest Videos
Follow Us:
Download App:
  • android
  • ios