ಐಎಸ್‌ಎಲ್ ಎಲಿಮಿನೇಟರ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಎದುರು ಸೋಲುಂಡ ಕೇರಳ ಬ್ಲಾಸ್ಟರ್ಸ್‌ರೆಫ್ರಿ ತೀರ್ಪು ವಿರೋಧಿಸಿ ಮೈದಾನದಿಂದ ಹೊರನಡೆದಿದ್ದ ಕೇರಳ ಬ್ಲಾಸ್ಟರ್ಸ್ ಎಫ್‌ಸಿಭಾರೀ ದಂಡದ ಜತೆಗೆ ನಿಷೇಧದ ಭೀತಿ ಎದುರಿಸುತ್ತಿರುವ ಕೇರಳ ಬ್ಲಾಸ್ಟರ್ಸ್‌

ನವದೆಹಲಿ(ಮಾ.05): ಬೆಂಗಳೂರು ಎಫ್‌ಸಿ ವಿರುದ್ಧ ಶುಕ್ರವಾರ ನಡೆದ ಐಎಸ್‌ಎಲ್‌ ಎಲಿಮಿನೇಟರ್‌ ಪಂದ್ಯದಲ್ಲಿ ಫ್ರೀ ಕಿಕ್‌ಗೆ ತಗಾದೆ ತೆಗೆದು ಮೈದಾನ ತೊರೆದ ಪರಿಣಾಮ, ಕೇರಳ ಬ್ಲಾಸ್ಟ​ರ್ಸ್‌ಗೆ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಕನಿಷ್ಠ 2 ವರ್ಷಗಳ ನಿಷೇಧ ಹೇರುವ ಸಾಧ್ಯತೆ ಇದೆ. ಇದರ ಜೊತೆಗೆ ದುಬಾರಿ ದಂಡ ವಿಧಿಸಲೂಬಹುದು ಎಂದು ಮೂಲಗಳು ತಿಳಿಸಿವೆ. 

ನಿಯಮದ ಪ್ರಕಾರ ರೆಫ್ರಿ ತೀರ್ಪಿನ ಬಗ್ಗೆ ಆಕ್ಷೇಪವಿದ್ದರೂ ಯಾವುದೇ ಕಾರಣಕ್ಕೂ ಆಟ ಸ್ಥಗಿತಗೊಳಿಸಿ ಮೈದಾನ ತೊರೆಯುವಂತಿಲ್ಲ. ಐಎಸ್‌ಎಲ್‌ನಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದ್ದು, ಎಐಎಫ್‌ಎಫ್‌ ಕಠಿಣ ಕ್ರಮ ಕೈಗೊಳ್ಳಲು ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ನಡೆಯಿತು. ಕೇರಳ ಬ್ಲಾಸ್ಟ​ರ್ಸ್‌ ವಿರುದ್ಧ ಹೆಚ್ಚುವರಿ ಸಮಯದಲ್ಲಿ ಸುನಿಲ್‌ ಚೆಟ್ರಿ ಫ್ರೀ ಕಿಕ್‌ ಮೂಲಕ ಬಾರಿಸಿದ ಗೋಲು, ಬೆಂಗಳೂರು ಎಫ್‌ಸಿ ತಂಡವನ್ನು ಸೆಮಿಫೈನಲ್‌ಗೇರಿಸಿತು.

ವಿವಾದಕ್ಕೆ ಕಾರಣವೇನು?

ಫ್ರೀ ಕಿಕ್‌ ವೇಳೆ ಚೆಟ್ರಿ ಹಾಗೂ ಕೆಲ ಬಿಎಫ್‌ಸಿ ಆಟಗಾರರು ಕೇರಳ ಆಟಗಾರರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದರು. ಈ ನಡುವೆ ಚೆಟ್ರಿ ಬಾರಿಸಿದ ಚೆಂಡು ಗೋಲು ಪೆಟ್ಟಿಗೆ ಸೇರಿತು. ರೆಫ್ರಿ ಗೋಲು ದಾಖಲಾಯಿತು ಎಂದು ಘೋಷಿಸಿದರು. ಆದರೆ ಫ್ರೀ ಕಿಕ್‌ಗೂ ಮುನ್ನ ರೆಫ್ರಿ ಸೂಚನೆ ನೀಡಲಿಲ್ಲ. ತಾವು ಸಿದ್ಧರಿರಲಿಲ್ಲ ಎಂದು ಕೇರಳ ಆಟಗಾರರು ಪ್ರತಿಭಟಿಸಲು ಶುರು ಮಾಡಿದರು. 

Indian Super League: ಸೆಮೀಸ್‌ಗೆ ಬೆಂಗಳೂರು ಎಫ್‌ಸಿ ಲಗ್ಗೆ..! ವಿವಾದ ಮಾಡಿ ಮೈದಾನ ತೊರೆದ ಕೇರಳ

ಕೋಚ್‌ ವುಕೊಮನೊವಿಚ್‌ ಆಟಗಾರರನ್ನು ಮೈದಾನ ಬಿಟ್ಟು ಬರುವಂತೆ ಕರೆದರು. ನಾಯಕ ಏಡ್ರಿಯನ್‌ ಲುನಾ ರೆಫ್ರಿ ಕ್ರಿಸ್ಟಲ್‌ ಜಾನ್‌ ಜೊತೆ ಜಗಳಕ್ಕೇ ಇಳಿದರು. ಚೆಟ್ರಿ ಕೇರಳ ಆಟಗಾರರನ್ನು ಸಮಾಧನಪಡಿಸಿ ಆಟ ಮುಂದುವರಿಸುವಂತೆ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಕೇರಳ ಆಟಗಾರರು ಮೈದಾನಕ್ಕೆ ವಾಪಸಾಗದ ಕಾರಣ ಗೆಲುವನ್ನು ಬಿಎಫ್‌ಸಿಗೆ ನೀಡಲಾಯಿತು.

ಐಎಸ್‌ಎಲ್‌ ಸೆಮೀಸ್‌ಗೆ ಮೋಹನ್‌ ಬಗಾನ್‌ ತಂಡ

ಕೋಲ್ಕತಾ: 9ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಸೆಮಿಫೈನಲ್‌ಗೆ ಎಟಿಕೆ ಮೋಹನ್‌ ಬಗಾನ್‌ ತಂಡ ಪ್ರವೇಶಿಸಿದೆ. ಶನಿವಾರ ನಡೆದ 2ನೇ ಎಲಿಮಿನೇಟರ್‌ ಪಂದ್ಯದಲ್ಲಿ ಒಡಿಶಾ ಎಫ್‌ಸಿ ವಿರುದ್ಧ 2-0 ಗೋಲುಗಳ ಗೆಲುವು ಸಾಧಿಸಿತು. 36ನೇ ನಿಮಿಷದಲ್ಲಿ ಹ್ಯುಗೊ ಬೌಮಸ್‌, 58ನೇ ನಿಮಿಷದಲ್ಲಿ ಡಿಮಿಟ್ರಿ ಪೆಟ್ರಾಟೊಸ್‌ ಗೋಲು ಬಾರಿಸಿದರು. ಸೆಮೀಸ್‌ನಲ್ಲಿ ಮೋಹನ್‌ ಬಗಾನ್‌ಗೆ ಹೈದರಾಬಾದ್‌ ಎಫ್‌ಸಿ ಎದುರಾಗಲಿದೆ.

ಜೂನಿಯರ್ ಕಬಡ್ಡಿ: ಭಾರತಕ್ಕೆ ವಿಶ್ವ ಚಾಂಪಿಯನ್‌ಶಿಪ್‌

ಉರ್ಮಿ​ಯಾ​(​ಇ​ರಾ​ನ್‌​): 2ನೇ ಆವೃತ್ತಿಯ ಕಿರಿಯರ ಕಬಡ್ಡಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪ್ರಶಸ್ತಿ ಜಯಿಸಿದೆ. ಮೊದಲ ಬಾರಿಗೆ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಭಾರತ, ಶನಿವಾರ ಫೈನಲ್‌ನಲ್ಲಿ ಇರಾನ್‌ ವಿರುದ್ಧ 41-32 ಅಂಕಗಳ ರೋಚಕ ಗೆಲುವು ಸಾಧಿಸಿತು. 
ಮೊದಲಾರ್ಧದ ಅಂತ್ಯಕ್ಕೆ 18-19ರಿಂದ ಹಿಂದಿದ್ದ ಭಾರತ, ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿ ಗೆಲುವು ಸಂಪಾದಿಸಿತು. ಕಳೆದ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಮಿಂಚಿದ ನರೇಂದರ್‌, ಮಂಜೀತ್‌ ಭಾರತ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಟೂರ್ನಿಯಲ್ಲಿ ಒಟ್ಟು 12 ತಂಡಗಳು ಸ್ಪರ್ಧಿಸಿದ್ದವು.