* ಇಂಡಿಯನ್‌ ಸೂಪರ್‌ ಲೀಗ್‌ ಟೂರ್ನಿಯಲ್ಲಿಂದು ಬಿಎಫ್‌ಸಿ ತಂಡಕ್ಕಿಂದು ಚೆನ್ನೈಯಿನ್‌ ಎಫ್‌ಸಿ* ಆರಂಭಿಕ ಪಂದ್ಯದಲ್ಲಿ ಬಿಎಫ್‌ಸಿ ನಾರ್ಥ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ ಜಯಿಸಿದ್ದ ಬಿಎಫ್‌ಸಿ* ಗೆಲುವಿನ ಓಟ ಮುಂದುವರಿಸುವ ತವಕದಲ್ಲಿರುವ ಸುನಿಲ್‌ ಚೆಟ್ರಿ ಪಡೆ

ಚೆನ್ನೈ(ಅ.14): ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ತವರಿನಲ್ಲಿ ಶುಭಾರಂಭ ಮಾಡಿದ್ದ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ ಶುಕ್ರವಾರ ಚೆನ್ನೈಯಿನ್‌ ಎಫ್‌ಸಿ ವಿರುದ್ಧ ಸೆಣಸಾಡಲಿದ್ದು, ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಬಿಎಫ್‌ಸಿ ನಾಥ್‌ರ್‍ ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ 1-0 ಅಂತರದ ಜಯ ಸಾಧಿಸಿತ್ತು. 

ಗೆಲುವಿನ ಓಟ ಮುಂದುವರಿಸುವ ತವಕದಲ್ಲಿರುವ ಸುನಿಲ್‌ ಚೆಟ್ರಿ ಪಡೆಗೆ ಚೆನ್ನೈಯಿನ್‌ ತಂಡದಿಂದ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ. ಚೆನ್ನೈಯಿನ್‌ ಮೊದಲ ಪಂದ್ಯದಲ್ಲಿ ಎಟಿಕೆ ಮೋಹನ್‌ ಬಗಾನ್‌ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿತ್ತು.

ಐಎಸ್‌ಎಲ್‌: ಗೋವಾಗೆ ಜಯ

ಕೋಲ್ಕತಾ: 9ನೇ ಆವೃತ್ತಿಯ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿಯಲ್ಲಿ ಎಫ್‌ಸಿ ಗೋವಾ ಗೆಲುವಿನ ಆರಂಭ ಪಡೆದಿದೆ. ಬುಧವಾರ ಈಸ್ಟ್‌ ಬೆಂಗಾಲ್‌ ವಿರುದ್ಧ 2-1 ಗೋಲುಗಳಲ್ಲಿ ಜಯಿಸಿತು. ಗೋವಾ ಪರ ಫೆರ್ನಾಂಡೆಸ್‌(7ನೇ ನಿಮಿಷ), ಎಡು ಬೆಡಿಯಾ(94ನೇ ನಿಮಿಷ) ಗೋಲು ಬಾರಿಸಿದರು. ಈಸ್ಟ್‌ ಬೆಂಗಾಲ್‌ ಪರ ಕ್ಲೆಯೆಟನ್‌(64ನೇ ನಿ.,) ಗೋಲು ಗಳಿಸಿದರು. ಈಸ್ಟ್‌ ಬೆಂಗಾಲ್‌ ಸತತ 2ನೇ ಸೋಲು ಕಂಡಿತು.

ಫಿಫಾ ಯು-17: ಭಾರತಕ್ಕೆ ಇಂದು ಮೊರೊಕ್ಕೊ ಸವಾಲು

ಭುವನೇಶ್ವರ್‌: ಹೀನಾಯ ಸೋಲಿನೊಂದಿಗೆ ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ವಿಶ್ವಕಪ್‌ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದ ಆತಿಥ್ಯ ಭಾರತ ಮೊದಲ ಗೆಲುವಿನ ಕಾತರದಲ್ಲಿದ್ದು, ಶುಕ್ರವಾರ ‘ಎ’ ಗುಂಪಿನ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಸೆಣಸಾಡಲಿದೆ. 

ಸ್ವತಃ ನೀರಜ್ ಚೋಪ್ರಾ ಬಂದ್ರೂ ಅಭ್ಯಾಸಕ್ಕೆ ಅವಕಾಶ ಇಲ್ಲ, ಏನಿದು ಕಂಠೀರವ ಕ್ರೀಡಾಂಗಣದ ವಿವಾದ!

ಮಂಗಳವಾರ ಭುವನೇಶ್ವರ್‌ದಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ನಂ.58 ಭಾರತ ಬಲಿಷ್ಠ ಅಮೆರಿಕ ವಿರುದ್ಧ 0-8 ಗೋಲುಗಳಿಂದ ಪರಾಭವಗೊಂಡಿತ್ತು. ಸದ್ಯ ಕ್ವಾರ್ಟರ್‌ಫೈನಲ್‌ ಕನಸು ಜೀವಂತವಾಗಿರಿಸಲು ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ವಿಶ್ವ ರ‍್ಯಾಂಕಿಂಗ್‌‌ನಲ್ಲಿ 76ನೇ ಸ್ಥಾನದಲ್ಲಿರುವ ಮೊರೊಕ್ಕೊ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲಿ ಬ್ರೆಜಿಲ್‌ ವಿರುದ್ಧ ಸೋಲನುಭವಿಸಿದ್ದ ಮೊರೊಕ್ಕೊ ತಂಡಕ್ಕೂ ಕೂಡಾ ಗೆಲುವು ಅನಿವಾರ್ಯವಾಗಿದೆ.

ಪಂದ್ಯ: ರಾತ್ರಿ 8ಕ್ಕೆ

ಶೂಟಿಂಗ್ ವಿಶ್ವಕಪ್‌: ಕಂಚು ಗೆದ್ದ ಭಾರತ ಮಹಿಳೆಯರು

ಕೈರೋ: ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಕಂಚಿನ ಪದಕದೊಂದಿಗೆ ಅಭಿಯಾನ ಆರಂಭಿಸಿದೆ. ಕೈರೋದಲ್ಲಿ ನಡೆಯುತ್ತಿರುವ ಕೂಟದಲ್ಲಿ ಗುರುವಾರ ಕಿರಿಯರ 25 ಮೀಟರ್ ಪಿಸ್ತೂಲ್‌ ಮಹಿಳಾ ತಂಡ ವಿಭಾಗದಲ್ಲಿ ಈಶ ಸಿಂಗ್, ನಾಮ್ಯ ಕಪೂರ್ ಹಾಗೂ ವಿಭುತಿ ಭಾಟಿಯಾ ಅವರನ್ನೊಳಗೊಂಡ ತಂಡ17-1 ಅಂತರದಲ್ಲಿ ಕಂಚು ಗೆದ್ದುಕೊಂಡಿತು. ಚೀನಾ ಚಿನ್ನ, ಕೊರಿಯಾ ಬೆಳ್ಳಿ ಪಡೆಯಿತು.