ಸತತ 2 ಬಾರಿ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆದ ಭಾರತ !
ಏಷ್ಯನ್ ಫುಟ್ ಬಾಲ್ ಸಂಸ್ಥೆಗಳ ಒಕ್ಕೂಟ (ಎಎಫ್ ಸಿ) ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಫಿಲಿಪ್ಪಿನ್ಸ್ ವಿರುದ್ಧ ಪ್ಯಾಲೆಸ್ತೇನ್ ಗೆಲುವು ಸಾಧಿಸಿ ಬೆನ್ನಲ್ಲಿಯೇ ಭಾರತ ತಂಡ 2023 ಎಎಫ್ ಸಿ ಏಷ್ಯನ್ ಕಪ್ ಗೆ ಅರ್ಹತೆ ಸಂಪಾದನೆ ಮಾಡಿದೆ. 2019ರಲ್ಲೂ ಭಾರತ ತಂಡ ಈ ಪ್ರಧಾನ ಟೂರ್ನಿಯಲ್ಲಿ ಆಡಿತ್ತು. ಆ ಮೂಲಕ ಸತತ 2 ಬಾರಿಗೆ ಎಎಫ್ ಸಿ ಏಷ್ಯನ್ ಕಪ್ ಗೆ ಭಾರತ ಅರ್ಹತೆ ಸಾಧಿಸಿರುವುದು ಇದೇ ಮೊದಲಾಗಿದೆ.
ನವದೆಹಲಿ (ಜೂನ್ 14): ಫಿಲಿಪ್ಪಿನ್ಸ್ (Philippines ) ತಂಡದ ವಿರುದ್ಧ ಪ್ಯಾಲೆಸ್ತೇನ್ (Palestine ) ಗೆಲುವು ಸಾಧಿಸಿದ ಬೆನ್ನಲ್ಲಿಯೇ ಭಾರತ ತಂಡ 2023ರ ಎಎಫ್ ಸಿ ಏಷ್ಯನ್ ಕಪ್ ಗೆ ( 2023 Asian Cup Finals ) ಅರ್ಹತೆ ಸಂಪಾದನೆ ಮಾಡಿದೆ. ಆ ಮೂಲಕ ಭಾರತ ತಂಡ ಸತತ 2ನೇ ಬಾರಿಗೆ ಎಎಫ್ ಸಿ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ. 2019ರ ಎಎಫ್ ಸಿ ಏಷ್ಯನ್ ಕಪ್ ನಲ್ಲೂ ಭಾರತ ಆಡಿತ್ತು.
ಮಂಗೋಲಿಯಾದ ಎಂಎಫ್ಎಫ್ ಫುಟ್ ಬಾಲ್ ಸೆಂಟರ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪ್ಯಾಲೆಸ್ತೇನ್ ತಂಡ 4-0 ಗೋಲುಗಳಿಂದ ಫಿಲಿಪ್ಪಿನ್ಸ್ ತಂಡವನ್ನು ಸೋಲಿಸಿತು. ಇದರೊಂದಿಗೆ ಬಿ ಗುಂಪಿನಲ್ಲಿ ಪ್ಯಾಲೆಸ್ತೇನ್ ತಂಡ ಅಗ್ರಸ್ಥಾನ ಸಂಪಾದನ ಮಾಡುವ ಮೂಲಕ 24 ತಂಡಗಳ ಎಎಫ್ ಸಿ ಕಪ್ ಫೈನಲ್ಸ್ ಗೆ ಅರ್ಹತೆ ಪಡೆದುಕೊಂಡರೆ, 4 ಅಂಕ ಸಂಪಾದನೆ ಮಾಡಿದ ಫಿಲಿಪ್ಪಿನ್ಸ್ ತಂಡ ಗುಂಪಿನಲ್ಲಿ 2ನೇ ಸ್ಥಾನ ಪಡೆದುಕೊಂಡರೂ, ಮುಂದಿನ ಹಂತಕ್ಕೇರುವಲ್ಲಿ ವಿಫಲವಾಯಿತು.
ಮೆನ್ ಇನ್ ಬ್ಲ್ಯೂ (Men In Blue) ಟೀಮ್ ಇತಿಹಾಸದಲ್ಲಿ ಮೊದಲ ಬಾರಿಗೆ ಸತತ ಎರಡು ಬಾರಿ ಎಎಫ್ ಸಿ ಏಷ್ಯನ್ ಕಪ್ ಅರ್ಹತೆಗಳನ್ನು ಪಡೆದುಕೊಂಡಿದೆ. ಗೋಲು ವ್ಯತ್ಯಾಸದಲ್ಲಿ ಹಾಂಕಾಂಗ್‌ಗಿಂತ ಎರಡನೇ ಸ್ಥಾನದಲ್ಲಿರುವ ಭಾರತ, ತನ್ನ ಅಂತಿಮ ಸುತ್ತಿನ ಡಿ ಗುಂಪಿನ ಹಣಾಹಣಿಗೆ ಮುನ್ನವೇ ಅರ್ಹತೆ ಪಡೆದುಕೊಂಡಿದೆ. ಒಟ್ಟಾರೆಯಾಗಿ ಭಾರತ ಐದನೇ ಬಾರಿಗೆ ಕಾಂಟಿನೆಂಟಲ್ ಶೋಪೀಸ್‌ಗೆ ಅರ್ಹತೆ ಪಡೆದಿದೆ.
ಡಿ ಗುಂಪಿನಲ್ಲಿ ಭಾರತ ತಂಡ ಎಎಫ್ ಸಿ ಏಷ್ಯನ್ ಕಪ್ ಅಹರ್ತಾ ಟೂರ್ನಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಜೂನ್ 17 ರಂದು ಹಾಂಕಾಂಗ್ ತಂಡವನ್ನು ಕೋಲ್ಕತದಲ್ಲಿ ಎದುರಿಸಲಿದೆ. ಇದರಲ್ಲಿ ಫಲಿತಾಂಶ ಏನೇ ಆದರೂ ಭಾರತ ಮುಂದಿನ ಹಂತಕ್ಕೇರುವುದು ಖಚಿತ.
ಭಾರತ ತಂಡ ಡಿ ಗುಂಪಿನಲ್ಲಿ 6 ಅಂಕ ಸಂಪಾದನೆ ಮಾಡಿದೆ. ಟೇಬಲ್ ಟಾಪರ್ ಆಗಿರುವ ಹಾಂಕಾಂಗ್ ಕೂಡ ಇಷ್ಟೇ ಅಂಕ ಸಂಪಾದನೆ ಮಾಡಿದೆ. 3ನೇ ಸುತ್ತಿನ ಅರ್ಹತಾ ಟೂರ್ನಿಯ ಬಳಿಕ, 6 ಬೆಸ್ಟ್ ಸೆಕೆಂಡ್ ಪ್ಲೇಸ್ಡ್ ಟೀಮ್ ಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನ ಪಡೆದುಕೊಂಡಿದೆ. ಅದರೊಂದಿಗೆ ಮುಂದಿನ ವರ್ಷ ನಡೆಯಲಿರುವ ಏಷ್ಯಾ ಫುಟ್ ಬಾಲ್ ನ ಪ್ರತಿಷ್ಠಿತ ಟೂರ್ನಿಗೆ ಅರ್ಹತೆ ಗಿಟ್ಟಿಸಿದೆ.
12 ವರ್ಷಗಳ ಬಳಿಕ ಬೇರ್ಪಟ್ಟ ಪಾಪ್ ಗಾಯಕಿ ಶಕಿರಾ - ಫುಟ್ ಬಾಲ್ ಸ್ಟಾರ್ ಜೆರಾರ್ಡ್ ಪಿಕ್!
ಭಾರತ ತಂಡ ಕಳೆದ ವಾರ ಕೋಲ್ಕತದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಾಂಬೋಡಿಯಾ ತಂಡವನ್ನು 2-0ಯಿಂದ ಮಣಿಸಿದ ಸುನೀಲ್ ಛೇಟ್ರಿ ಟೀಮ್, ಬಳಿಕ ಬಲಿಷ್ಠ ಅಫ್ಘಾನಿಸ್ತಾನ ತಂಡವನ್ನು ಥ್ರಿಲ್ಲಿಂಗ್ ಪಂದ್ಯದಲ್ಲಿ 2-1 ರಿಂದ ಸೋಲಿಸಿತ್ತು. ಭಾರತ ತಂಡ ಅರ್ಹತಾ ಟೂರ್ನಿಯಲ್ಲಿ ಬಾರಿಸಿರುವ 4 ಗೋಲುಗಳ ಪೈಕಿ ಮೂರು ಗೋಲುಗಳನ್ನು ನಾಯಕ ಸುನೀಲ್ ಛೇಟ್ರಿ ಬಾರಿಸಿದ್ದು, ಪ್ರಸ್ತುತ ಅದ್ಭುತ ಲಯದಲ್ಲಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಂದ್ಯದ 84ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ನಲ್ಲಿ ಅದ್ಭುತವಾಗಿ ಗೋಲು ಸಿಡಿಸುವ ಮೂಲಕ ತಂಡದ ಜಯಕ್ಕೆ ಕಾರಣರಾಗಿದ್ದರು.
Cristiano Ronaldo Statue In Goa : ವಿವಾದಕ್ಕೆ ಕಾರಣವಾದ ಫುಟ್ ಬಾಲ್ ದಿಗ್ಗಜನ ಪ್ರತಿಮೆ!
ಸುನಿಲ್ ಛೆಟ್ರಿ ಅವರು ಏಷ್ಯಾದ ಅತ್ಯುತ್ತಮ ಆಟಗಾರರೊಂದಿಗೆ ಸ್ಥಿರವಾಗಿ ಸ್ಪರ್ಧಿಸಲು ಮತ್ತು ಸ್ಥಿರವಾಗಿ ಸುಧಾರಿಸಲು ಭಾರತಕ್ಕೆ ಏಷ್ಯನ್ ಕಪ್ ಫೈನಲ್‌ಗೆ ಅರ್ಹತೆ ಕನಿಷ್ಠವಾಗಿರಬೇಕು ಎಂದು ಈಗಾಗಲೇ ಹಲವು ಬಾರಿ ಹೇಳಿದ್ದಾರೆ. 2023ರ ಎಎಫ್ ಸಿ ಏಷ್ಯನ್ ಕಪ್ ಟೂರ್ನಿ ಚೀನಾದಲ್ಲಿ ಜೂನ್ 16 ರಿಂದ ಜುಲೈ 16ರವರೆಗೆ 10 ನಗರದಲ್ಲಿ ನಡೆಯಬೇಕಾಗಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕದ ಕಾರಣ ಟೂರ್ನಿಯ ಆತಿಥ್ಯವನ್ನು ಚೀನಾ ಕೈಬಿಟ್ಟಿತ್ತು. ಮುಂಬರುವ ತಿಂಗಳಲ್ಲಿ ಎಎಫ್ ಸಿ ಹೊಸ ಆತಿಥ್ಯ ದೇಶವನ್ನು ಪ್ರಕಟ ಮಾಡಲಿದೆ. ಹಾಂಕಾಂಗ್ ತಂಡವನ್ನು ಸೋಲಿಸಿ ಡಿ ಗುಂಪಿನ ಅಗ್ರಸ್ಥಾನ ಪಡೆಯುವ ಇರಾದೆಯಲ್ಲಿ ಭಾರತ ತಂಡವಿದ್ದು, ಕೋಲ್ಕತದ ಸಾಲ್ಟ್ ಲೇಕ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.