ಫಿಫಾ ಫುಟ್ಬಾಲ್: ಭಾರತಕ್ಕಿಂದು ಆಫ್ಘನ್ ಚಾಲೆಂಜ್
ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆಗಿಟ್ಟಿಸುವ ಕನವರಿಕೆಯಲ್ಲಿರುವ ಸುನಿಲ್ ಚೆಟ್ರಿ ನೇತೃತ್ವದ ಭಾರತ ತಂಡ ಇಂದು ಆಫ್ಘಾನಿಸ್ತಾನಕ್ಕೆ ಸೆಡ್ಡುಹೊಡೆಯಲು ರೆಡಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ತಜಿಕಿಸ್ತಾನ(ನ.14): ಫಿಫಾ ಫುಟ್ಬಾಲ್ ವಿಶ್ವಕಪ್ನ ಅರ್ಹತಾ ಸುತ್ತಿನ 2ನೇ ಹಂತದಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ, ಗುರುವಾರ ಆಫ್ಘಾನಿಸ್ತಾನವನ್ನು ಎದುರಿಸಲಿದೆ. 3 ಪಂದ್ಯಗಳಲ್ಲಿ 1 ಸೋಲು, 2 ಡ್ರಾ ಕಂಡಿರುವ ಭಾರತ, ಮುಂದಿನ ಹಂತಕ್ಕೇರುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ತನ್ನ ತವರಿನಲ್ಲಿ ಭದ್ರತೆ ಸಮಸ್ಯೆ ಕಾರಣ ಪಂದ್ಯವನ್ನು ಇಲ್ಲಿ ನಡೆಸಲು ಆಫ್ಘಾನಿಸ್ತಾನ ಫುಟ್ಬಾಲ್ ಮಂಡಳಿ ನಿರ್ಧರಿಸಿತು. ಕೃತಕ ಟರ್ಫ್ ಹಾಗೂ ಮೈಕೊರೆಯುವ ಚಳಿಯಲ್ಲಿ ಆಡುವುದು ಭಾರತೀಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ವಿಶ್ವಕಪ್ ಅರ್ಹತಾ ಪಂದ್ಯ; ಡ್ರಾಗೆ ತೃಪ್ತಿಪಟ್ಟ ಭಾರತ!
‘ಇ’ ಗುಂಪಿನ ಮೊದಲ ಪಂದ್ಯದಲ್ಲಿ ಒಮಾನ್ ವಿರುದ್ಧ 1-2 ಗೋಲುಗಳಲ್ಲಿ ಸೋತಿದ್ದ ಭಾರತ, ಏಷ್ಯನ್ ಚಾಂಪಿಯನ್ ಕತಾರ್ ವಿರುದ್ಧ ಗೋಲು ರಹಿತ ಡ್ರಾಗೆ ಸಮಾಧಾನಪಟ್ಟಿತ್ತು. ಆದರೆ ಕಳೆದ ತಿಂಗಳು ಕೋಲ್ಕತಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 1-1ರಲ್ಲಿ ಡ್ರಾ ಮಾಡಿಕೊಂಡಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಗುಂಪಿನಲ್ಲಿ ಭಾರತ 4ನೇ ಸ್ಥಾನದಲ್ಲಿದ್ದರೆ, 1 ಗೆಲುವು ಕಂಡಿರುವ ಆಫ್ಘನ್ 3ನೇ ಸ್ಥಾನದಲ್ಲಿದೆ.
U 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಲೋಗೋ ಬಿಡುಗಡೆ
ಸುನಿಲ್ ಚೆಟ್ರಿ ನೇತೃತ್ವದ ತಂಡಕ್ಕೆ ಮೂವರು ತಾರಾ ಆಟಗಾರರಾದ ಸಂದೇಶ್ ಜಿಂಗಾನ್, ಅನಾಸ್ ಎಡಥೋಡಿಕಾ ಹಾಗೂ ರೊವ್ಲಿನ್ ಬೊರ್ಜಸ್ ಅನುಪಸ್ಥಿತಿ ಕಾಡಲಿದೆ. ಉದಾಂತ ಸಿಂಗ್, ಆದಿಲ್ ಖಾನ್, ಗೋಲ್ ಕೀಪರ್ ಗುರ್‌ಪ್ರೀತ್, ಸುನಿಲ್ ಚೆಟ್ರಿ ಮೇಲೆ ತಂಡ ಹೆಚ್ಚು ನಿರೀಕ್ಷೆ ಇರಿಸಿದೆ. ಆಫ್ಘಾನಿಸ್ತಾನ ವಿರುದ್ಧ ಭಾರತ ಈ ವರೆಗೂ 8 ಪಂದ್ಯಗಳನ್ನು ಆಡಿದ್ದು, 6ರಲ್ಲಿ ಗೆದ್ದರೆ 1ರಲ್ಲಿ ಸೋಲು, ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ