ಫುಟ್ಬಾಲ್ ವೃತ್ತಿ ಬದುಕಿನ ಕೊನೆ ಹಂತದಲ್ಲಿದ್ದೇನೆ: ಲಿಯೋನೆಲ್ ಮೆಸ್ಸಿ ನಿವೃತ್ತಿ ಸುಳಿವು
ನಿವೃತ್ತಿಯ ಸುಳಿವು ಬಿಟ್ಟುಕೊಟ್ಟ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ
ಫುಟ್ಬಾಲ್ ವೃತ್ತಿ ಬದುಕಿನ ಕೊನೆ ಹಂತದಲ್ಲಿದ್ದೇನೆ ಎಂದ ಚಾಂಪಿಯನ್ ಆಟಗಾರ
ಎಲ್ಲದರಲ್ಲೂ ಚಾಂಪಿಯನ್ ಎಂಬ ಖುಷಿಯಲ್ಲೇ ಈಗ ಆಡುತ್ತಿದ್ದೇನೆ ಎಂದ ಮೆಸ್ಸಿ
ಬ್ಯೂನಸ್ ಐರಿಸ್(ಜೂ.20): ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರಲ್ಲಿ ಓರ್ವರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಫುಟ್ಬಾಲ್ ವೃತ್ತಿ ಬದುಕಿನ ಕೊನೆ ಹಂತದಲ್ಲಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ 35 ವರ್ಷದ ಮೆಸ್ಸಿ, ‘ವೃತ್ತಿ ಬದುಕಿನ ಕೊನೆ ಹಂತದಲ್ಲಿದ್ದೇನೆ. ಆದರೆ ಎಲ್ಲದರಲ್ಲೂ ಚಾಂಪಿಯನ್ ಎಂಬ ಖುಷಿಯಲ್ಲೇ ಈಗ ಆಡುತ್ತಿದ್ದೇನೆ. ಫುಟ್ಬಾಲ್ನಲ್ಲಿ ಗೆಲುವು ಮಾತ್ರವಲ್ಲ, ನಮ್ಮ ಪಯಣವೂ ಕೂಡಾ ಜೀವನಕ್ಕೆ ಬೇಕಾದ ಅತ್ಯಮೂಲ್ಯ ಪಾಠಗಳನ್ನು ಕಲಿಸಿಕೊಟ್ಟಿದೆ. ನಾವು ಏನಾದರೂ ಅಂದುಕೊಂಡಾಗ, ಯಾವುದಕ್ಕಾದರೂ ಪ್ರಯತ್ನಿಸಿ ಸಿಗದೆ ಇರುವ ಕ್ಷಣಗಳೂ ನಮಗೆ ಪಾಠ. ನೀವು ಕನಸು ಕಂಡಿದ್ದನ್ನು ಸಾಧಿಸುವವರೆಗೂ ಪ್ರಯತ್ನ ಬಿಡಬೇಡಿ’ ಎಂದು ಸಲಹೆ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು 2026ರ ವಿಶ್ವಕಪ್ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದರು.
ಕಳೆದ ವರ್ಷ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಫೈನಲ್‌ನಲ್ಲಿ ಫ್ರಾನ್ಸ್ ಎದುರು ದಿಗ್ವಿಜಯ ಸಾಧಿಸಿತ್ತು. ಈ ಮೂಲಕ ಮೆಸ್ಸಿ ಫಿಫಾ ವಿಶ್ವಕಪ್ ಗೆಲ್ಲುವ ಜೀವಮಾನದ ಕನಸನ್ನು ನನಸಾಗಿಸಿಕೊಂಡಿದ್ದರು.
ಫಿಫಾ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಮೆಸ್ಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ‘ವಿಶ್ವಕಪ್ ಗೆಲ್ಲುವ ಕನಸು ನನಸಾಗಿದೆ. ಇದಕ್ಕಿಂತ ಇನ್ನೇನು ಬೇಕು. ಕೋಪಾ ಅಮೆರಿಕದ ಜೊತೆಗೆ ವಿಶ್ವಕಪ್ ಕೂಡಾ ಗೆದ್ದಿದ್ದೇನೆ. ದೇವರು ನನಗೆ ಈ ಉಡುಗೊರೆ ನೀಡುತ್ತಾರೆಂದು ಗೊತ್ತಿತ್ತು. ಇದೊಂದು ಅದ್ಭುತ ಕ್ಷಣ. ರಾಷ್ಟ್ರೀಯ ತಂಡದ ಭಾಗವಾಗಿರಲು ತುಂಬಾ ಸಂತೋಷವಾಗುತ್ತಿದೆ’ ಎಂದು ಫೈನಲ್ ಬಳಿಕ ಮೆಸ್ಸಿ ಪ್ರತಿಕ್ರಿಯಿಸಿದ್ದರು.
ಭಾರತ ಫುಟ್ಬಾಲ್ ತಂಡಕ್ಕೆ 1 ಕೋಟಿ ರು. ಬಹುಮಾನ
ಭುವನೇಶ್ವರ: 2ನೇ ಬಾರಿ ಇಂಟರ್ ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿಕೊಂಡ ಭಾರತ ತಂಡಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 1 ಕೋಟಿ ರು. ಬಹುಮಾನ ಘೋಷಿಸಿದ್ದಾರೆ. ಭಾನುವಾರ ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ನಡೆದ 3ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಭಾರತ, ಲೆಬನಾನ್ ವಿರುದ್ಧ 2-0 ಅಂತರದಲ್ಲಿ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಪಂದ್ಯದ ಬಳಿಕ ವಿಜೇತರಿಗೆ ಟ್ರೋಫಿ ವಿತರಣೆ ಮಾಡಿ ಮಾತನಾಡಿದ ಪಟ್ನಾಯಕ್, ಆಟಗಾರರಿಗೆ 1 ಕೋಟಿ ರು. ನಗದು ಬಹುಮಾನ ನೀಡುವುದಾಗಿ ತಿಳಿಸಿದರು.
ಫೆನ್ಸಿಂಗ್: ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭವಾನಿ ದೇವಿ
ಒಡಿಶಾ ಸಂತ್ರಸ್ತರಿಗೆ .20 ಲಕ್ಷ: ಒಡಿಶಾ ಸರ್ಕಾರದಿಂದ ತಮಗೆ ಲಭಿಸಿದ 1 ಕೋಟಿ ರು. ಬಹುಮಾನ ಮೊತ್ತದಲ್ಲಿ 20 ಲಕ್ಷ ರು.ಗಳನ್ನು ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೀಡಲು ಭಾರತೀಯ ಫುಟ್ಬಾಲ್ ಫೆಡರೇಶನ್ ನಿರ್ಧರಿಸಿದೆ. ಈ ಬಗ್ಗೆ ಭಾರತೀಯ ಫುಟ್ಬಾಲ್ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಇತ್ತೀಚೆಗೆ ನಡೆದಿದ್ದ ಭೀಕರ ರೈಲು ಅವಘಡದಲ್ಲಿ ಸುಮಾರು 300ರಷ್ಟುಮಂದಿ ಮೃತಪಟ್ಟಿದ್ದರೆ, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಕಿರಿಯರ ಫುಟ್ಬಾಲ್: ಇಂದು ಭಾರತ-ಉಜ್ಬೇಕಿಸ್ತಾನ
ಪಥುಂ ಥಾನಿ(ಥಾಯ್ಲೆಂಡ್): ಎಎಫ್ಸಿ ಅಂಡರ್-17 ಏಷ್ಯಾಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಮಂಗಳವಾರ ಉಜ್ಬೇಕಿಸ್ತಾನ ವಿರುದ್ಧ ಸೆಣಸಾಡಲಿದೆ. ‘ಡಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ವಿಯೆಟ್ನಾಂ ವಿರುದ್ಧ 1-1 ಗೋಲಿನ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಭಾರತ ಈ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.
ಸದ್ಯ ಗುಂಪಿನ ಎಲ್ಲಾ ತಂಡಗಳೂ ತಲಾ 1 ಅಂಕ ಹೊಂದಿದ್ದು, ಜಪಾನ್ ಅಗ್ರಸ್ಥಾನ, ವಿಯೆಟ್ನಾಂ 2, ಉಜ್ಬೇಕಿಸ್ತಾನ 3 ಮತ್ತು ಭಾರತ ಕೊನೆ ಸ್ಥಾನದಲ್ಲಿದೆ. ಹೀಗಾಗಿ ಉಜ್ಬೇಕಿಸ್ತಾನ ವಿರುದ್ಧ ಗೆದ್ದರೆ ಮಾತ್ರ ಭಾರತಕ್ಕೆ ನಾಕೌಟ್ಗೇರುವ ಅವಕಾಶ ಹೆಚ್ಚಿರಲಿದೆ. ಗುಂಪಿನ 2 ತಂಡಗಳು ಮಾತ್ರ ನಾಕೌಟ್ ಪ್ರವೇಶಿಸಲಿವೆ.
ಫುಟ್ಬಾಲ್: ಚಂಡೀಗಢ ವಿರುದ್ಧ ಗೆದ್ದ ಕರ್ನಾಟಕ
ಅಮೃತ್ಸರ್: 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್ ಸುತ್ತಿನಲ್ಲಿ ಕರ್ನಾಟಕ ತಂಡ ಮೊದಲ ಗೆಲುವು ಸಾಧಿಸಿದೆ. ಸೋಮವಾರ ‘ಎ’ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ರಾಜ್ಯ ತಂಡ, ಚಂಡೀಗಢ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿತು. ಇದರೊಂದಿಗೆ 3 ಪಂದ್ಯಗಳಲ್ಲಿ 4 ಅಂಕ ಸಂಪಾದಿಸಿತು.
58ನೇ ನಿಮಿಷದಲ್ಲಿ ಸುನಲಿಂದಾ ರಾಜ್ಯದ ಪರ ಮೊದಲ ಗೋಲು ಬಾರಿಸಿದರೆ, 78ನೇ ನಿಮಿಷದಲ್ಲಿ ಅರುಷಿ ಸಂತೋಷ್ ಹೊಡೆದ ಗೋಲು ರಾಜ್ಯದ ಮುನ್ನಡೆ ಹೆಚ್ಚಿಸಿತು. 88ನೇ ನಿಮಿಷದಲ್ಲಿ ಚಂಡೀಗಢ ಗೋಲು ಬಾರಿಸಿದರೂ ಗೆಲುವು ತಪ್ಪಿಸಲು ಸಾಧ್ಯವಾಗಲಿಲ್ಲ. ಮೊದಲ ಪಂದ್ಯ ಸೋತು, 2ನೇ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ರಾಜ್ಯ ತಂಡ ಬುಧವಾರ ಒಡಿಶಾ ವಿರುದ್ಧ ಸೆಣಸಾಡಲಿದೆ.