ಡುರಾಂಡ್ ಕಪ್: ಚೊಚ್ಚಲ ಬಾರಿಗೆ ಎಫ್‌ಸಿ ಗೋವಾ ಚಾಂಪಿಯನ್
* ಚೊಚ್ಚಲ ಬಾರಿಗೆ ಡುರಾಂಡ್ ಕಪ್ ಜಯಿಸಿದ ಎಫ್‌ಸಿ ಗೋವಾ
* ಮೊಹಮೆಡನ್ ಸ್ಪೋರ್ಟಿಂಗ್ ಕ್ಲಬ್ ವಿರುದ್ಧ 1-0 ಗೋಲಿನ ಅಂತರದ ರೋಚಕ ಜಯ
* ಹೆಚ್ಚುವರಿ ಸಮಯದಲ್ಲಿ ಗೋಲು ಬಾರಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ಗೋವಾ
ಕೋಲ್ಕತ(ಅ.04): 130ನೇ ಆವೃತ್ತಿಯ ಡುರಾಂಡ್ ಕಪ್ (Durand Cup) ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಮೊಹಮೆಡನ್ ಸ್ಪೋರ್ಟಿಂಗ್ ಕ್ಲಬ್ ವಿರುದ್ಧ 1-0 ಗೋಲಿನ ಅಂತರದಿಂದ ರೋಚಕ ಜಯ ಸಾಧಿಸಿದ ಎಫ್‌ಸಿ ಗೋವಾ (FC Goa) ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್ ಟೂರ್ನಿಯಲ್ಲಿ ಗೋವಾ ತಂಡ ಮೊದಲ ಬಾರಿಗೆ ಚಾಂಪಿಯನ್ ಆಗಿ ಮೆರೆದಾಡಿದೆ.
ಭಾನುವಾರ ನಡೆದ ರೋಚಕ ಕಾದಾಟದಲ್ಲಿ ನಿಗದಿತ 90 ನಿಮಿಷದಲ್ಲಿ ಇತ್ತಂಡಗಳೂ ಗೋಲು ಗಳಿಸಲಿಲ್ಲ. ಬಳಿಕ ಹೆಚ್ಚುವರಿ ಸಮಯದ 105ನೇ ನಿಮಿಷದಲ್ಲಿ ಗೋವಾ ಪರ ಎಡ್ವರ್ಡೊ ಬೆಡಿಯ ಗೆಲುವಿನ ಗೋಲು ಬಾರಿಸಿದರು. 6ನೇ ಬಾರಿ ಫೈನಲ್ ಪ್ರವೇಶಿಸಿದ್ದ ಮೊಹಮೆಡನ್ 4 ಬಾರಿ ರನ್ನರ್ ಅಪ್ ಆಗಿದ್ದು, 2 ಬಾರಿ ಚಾಂಪಿಯನ್ ಆಗಿದೆ.
ಡುರಾಂಡ್ ಕಪ್: ಸೆಮೀಸ್‌ನಲ್ಲಿ ಬಿಎಫ್‌ಸಿಗೆ ಸೋಲು, ಫೈನಲ್‌ಗೆ ಲಗ್ಗೆಯಿಟ್ಟ ಗೋವಾ
ಗೋವಾ ತಂಡವು ಈ ಬಾರಿಯ ಡುರಾಂಡ್ ಕಪ್‌ನಲ್ಲಿ ಅಜೇಯವಾಗಿ ಫೈನಲ್ ಹಂತ ತಲುಪಿತ್ತು. ಲೀಗ್ ಹಂತದಿಂದ ಫೈನಲ್‌ವರೆಗೂ ಸೋಲಿನ ಮುಖ ನೋಡದ ಗೋವಾ ತಂಡವು ಕೋಲ್ಕತದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ 34,000 ಪ್ರೇಕ್ಷಕರೆದುರು ಚಾಂಪಿಯನ್ ಆಗಿ ಮೆರೆದಾಡಿತು. ಟೂರ್ನಿ ಆರಂಭಕ್ಕೂ ಮುನ್ನವೇ ಎಫ್‌ಸಿ ಗೋವಾ ಡುರಾಂಡ್ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿತ್ತು.
ಫೈನಲ್ ಪ್ರವೇಶಿಸಿದ ಈ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಬೆಂಗಳೂರು ಮೂಲದ ತಂಡಗಳನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದವು. ಮೊಹಮೆಡನ್ ಸೆಮಿಫೈನಲ್‌ನಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ (FC Bengaluru United) ತಂಡವನ್ನು ಸೋಲಿಸಿತ್ತು. ಇನ್ನು ಎಫ್‌ಸಿ ಗೋವಾ ತಂಡವು ಬೆಂಗಳೂರು ಎಫ್‌ಸಿ (Bengaluru FC) ವಿರುದ್ಧ ಗೆದ್ದು ಪೈನಲ್ ಪ್ರವೇಶಿಸಿತ್ತು. ಡುರಾಂಡ್ ಕಪ್ ಟ್ರೋಫಿ ಜಯಿಸಿದ ಎಫ್‌ಸಿ ಗೋವಾ ತಂಡವು 40 ಲಕ್ಷ ರುಪಾಯಿ ಬಹುಮಾನ ಪಡೆದರೆ, ರನ್ನರ್ ಅಪ್ ಮೊಹಮೆಡನ್ ಸ್ಪೋರ್ಟಿಂಗ್ ಕ್ಲಬ್ ತಂಡವು 20 ಲಕ್ಷ ರುಪಾಯಿ ಬಹುಮಾನ ಪಡೆಯಿತು. ಇನ್ನು ಸೆಮಿಫೈನಲ್ ಪ್ರವೇಶಿಸಿದ ಎಫ್‌ಸಿ ಬೆಂಗಳೂರು ಯುನೈಟೆಡ್ ಹಾಗೂ ಬೆಂಗಳೂರು ಎಫ್‌ಸಿ ತಂಡಗಳು ತಲಾ 5 ಲಕ್ಷ ರುಪಾಯಿ ಬಹುಮಾನ ಪಡೆದವು.