Indian Super League: ಕೇರಳ ಬ್ಲಾಸ್ಟರ್ಸ್ ಮಣಿಸಿ ಹೈದರಾಬಾದ್ ಚಾಂಪಿಯನ್
* ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಹೈದರಾಬಾದ್ ಎಫ್‌ಸಿ ಚಾಂಪಿಯನ್
* ಕೇರಳ ಬ್ಲಾಸ್ಟರ್ ಎದುರು ರೋಚಕ ಜಯ ಸಾಧಿಸುವ ಮೂಲಕ ಚೊಚ್ಚಲ ಟ್ರೋಫಿ ಗೆದ್ದ ಹೈದರಾಬಾದ್
* ಮೂರನೇ ಬಾರಿಗೆ ಫೈನಲ್‌ನಲ್ಲಿ ಮುಗ್ಗರಿಸಿದ ಕೇರಳ ಬ್ಲಾಸ್ಟರ್ಸ್
ಗೋವಾ(ಮಾ.21): 8ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಲೀಗ್‌ನಲ್ಲಿ (Indian Super League) ಹೈದರಾಬಾದ್ ಎಫ್‌ಸಿ (Hyderabad FC) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ಕೇರಳ ಬ್ಲಾಸ್ಟರ್ಸ್ (Kerala Blasters) ವಿರುದ್ಧದ ರೋಚಕ ಫೈನಲ್ ಹಣಾಹಣಿಯಲ್ಲಿ ಹೈದ್ರಾಬಾದ್ ಶೂಟೌಟ್‌ನಲ್ಲಿ 3-1ರಿಂದ ಜಯಭೇರಿ ಬಾರಿಸಿತು. ಚೊಚ್ಚಲ ಬಾರಿ ಫೈನಲ್ ಪ್ರವೇಶಿಸಿದ್ದ ತಂಡ ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಎತ್ತಿ ಹಿಡಿದರೆ, ಕೇರಳ ಮೂರನೇ ಬಾರಿಯೂ ಫೈನಲ್‌ನಲ್ಲಿ ಸೋತು ಪ್ರಶಸ್ತಿ ಕನಸನ್ನು ಮತ್ತೊಮ್ಮೆ ಭಗ್ನಗೊಳಿಸಿತು.
ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಯಾವುದೇ ಗೋಲುಗಳಿಸಲಿಲ್ಲ. 68ನೇ ನಿಮಿಷದಲ್ಲಿ ಕೇರಳ ಪರ ರಾಹುಲ್ ಗೋಲು ಹೊಡೆದರೆ, 88ನೇ ನಿಮಿಷದಲ್ಲಿ ಹೈದ್ರಾಬಾದ್‌ನ ತವೋರಾ ಗೋಲು ಬಾರಿಸಿ 1-1ರಿಂದ ಸಮಬಲ ಸಾಧಿಸಲು ನೆರವಾದರು. ಬಳಿಕ ಹೆಚ್ಚುವರಿ 30 ನಿಮಿಷ ಪಂದ್ಯ ನಡೆದರೂ ಯಾವುದೇ ಗೋಲು ದಾಖಲಾಗಲಿಲ್ಲ. ಶೂಟೌಟ್‌ನಲ್ಲಿ ಕೇರಳ ನಾಲ್ಕು ಪ್ರಯತ್ನಗಳಲ್ಲಿ ಕೇವಲ 1 ಗೋಲು ಬಾರಿಸಿದರೆ, ಹೈದ್ರಾಬಾದ್ 3 ಬಾರಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿತು.
ಐಎನ್‌ಬಿಎಲ್: ಬ್ಯಾಂಕ್ ಆಫ್ ಬರೋಡಾ ಚಾಂಪಿಯನ್
ಬೆಂಗಳೂರು: ಚೊಚ್ಚಲ ಆವೃತ್ತಿಯ 3*3 ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್(ಐಎನ್‌ಬಿಎಲ್)ನಲ್ಲಿ ಬ್ಯಾಂಕ್ ಆಫ್ ಬರೋಡಾ(ಬಿಒಬಿ) ಹಾಗೂ ಆಲ್ ಸ್ಟಾರ್ಸ್ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ. ಭಾನುವಾರ ಪುರುಷರ ವಿಭಾಗದ ಫೈನಲ್‌ನಲ್ಲಿ ಬಿಒಬಿ, ಐಬಿಬಿಸಿ ವಿರುದ್ಧ 21-9 ಅಂತರದಲ್ಲಿ ಗೆಲುವು ಸಾಧಿಸಿತು.
All England Open 2022: ಫೈನಲ್‌ನಲ್ಲಿ ಚಿನ್ನ ಗೆಲ್ಲುವ ಲಕ್ಷ್ಯ ಸೆನ್ ಕನಸು ಭಗ್ನ..!
ಮಹಿಳಾ ವಿಭಾಗದಲ್ಲಿ ಆಲ್ ಸ್ಟಾರ್ಸ್, ಎಂವೈಎಸ್ ಸ್ಪಾರ್ಕರ್ಸ್ ವಿರುದ್ಧ 16-12ರಿಂದ ಗೆದ್ದು ಚಾಂಪಿಯನ್ ಆಯಿತು. ಅಂಡರ್-18 ಪುರುಷರ ವಿಭಾಗದಲ್ಲಿ ಎಸ್‌ಸಿಪಿಸಿ ತಂಡವನ್ನು ಮಣಿಸಿ ಕ್ಲಾರೆಟ್ ಪಿಯು ಕಾಲೇಜು ಪ್ರಶಸ್ತಿ ಗೆದ್ದರೆ, ಮಹಿಳಾ ವಿಭಾಗದಲ್ಲಿ ಬಿಸಿಬಿಸಿ ವಿರುದ್ಧ ಗೆದ್ದು ಲ್ಯಾಕರ್ಸ್ ಮೌಂಟ್ಸ್ ಚಾಂಪಿಯನ್ ಆಯಿತು. ನಾಲ್ಕೂ ವಿಭಾಗದ ಚಾಂಪಿಯನ್ ತಂಡಗಳು ಮೇ 27ರಿಂದ 29ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಫೈನಲ್ಸ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿವೆ.
ಬೆಂಗಳೂರು ಟೆನಿಸ್: ಖಾಡೆ ಸಿಂಗಲ್ಸ್ ಚಾಂಪಿಯನ್
ಬೆಂಗಳೂರು: ಐಟಿಎಫ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ (ITF Bengaluru Open Tennis Tournament) ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಅರ್ಜುನ್ ಖಾಡೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರವಷ್ಟೇ ಪುರುಷರ ಡಬಲ್ಸ್‌ನಲ್ಲಿ ಬ್ರಿಟನ್‌ನ ಜೂಲಿಯನ್ ಕ್ಯಾಷ್ ಜೊತೆಗೂಡಿ ಪ್ರಶಸ್ತಿ ಗೆದ್ದಿದ್ದ ಖಾಡೆ, ಭಾನುವಾರ ಮತ್ತೊಂದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಫೈನಲ್‌ನಲ್ಲಿ ಅವರು ಭಾರತದವರೇ ಆದ ಸಿದ್ಧಾರ್ಥ್ ರಾವತ್ ವಿರುದ್ಧ 6-3, 3-6, 6-1 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಖಾಡೆ 2160 ಯುಸ್ ಡಾಲರ್(ಸುಮಾರು 1.64 ಲಕ್ಷ ರು.) ಹಾಗೂ 15 ಎಟಿಪಿ ಅಂಕಗಳನ್ನು ಪಡೆದುಕೊಂಡರೆ, ರಾವತ್ 8 ಅಂಕಗಳ ಜೊತೆ 1272 ಯುಸ್ ಡಾಲರ್(ಸುಮಾರು 96 ಸಾವಿರ ರು.) ತಮ್ಮದಾಗಿಸಿಕೊಂಡರು.
FIH Pro League: ಭಾರತ ಹಾಕಿ ತಂಡಕ್ಕೆ ಗೆಲುವು
ಭುವನೇಶ್ವರ್: ಕೊನೆಯ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಬಾರಿಸಿದ ಗೋಲಿನ ನೆರವಿನಿಂದ ಅರ್ಜೇಂಟೀನಾ ವಿರುದ್ದ ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಭಾರತ 4-3 ಗೋಲುಗಳ ಅಂತರದ ಜಯ ಸಾಧಿಸಿತು. ಜುಗರಾಜ್ ಸಿಂಗ್ 2 ಗೋಲು ಬಾರಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಮೊದಲು ಶನಿವಾರ ನಡೆದ ಪಂದ್ಯದಲ್ಲಿ ಭಾರತ ಹಾಕಿ ತಂಡವು, ಅರ್ಜೆಂಟೀನಾ ವಿರುದ್ದದ ಮೊದಲ ಪಂದ್ಯದಲ್ಲಿ ರೋಚಕ ಸೋಲು ಕಂಡಿತ್ತು.