All England Open 2022: ಫೈನಲ್‌ನಲ್ಲಿ ಚಿನ್ನ ಗೆಲ್ಲುವ ಲಕ್ಷ್ಯ ಸೆನ್ ಕನಸು ಭಗ್ನ..!

* ಆಲ್‌ ಇಂಗ್ಲೆಂಡ್ ಓಪನ್‌ನಲ್ಲಿ ಚಿನ್ನ ಗೆಲ್ಲುವ ಅವಕಾಶ ಕೈಚೆಲ್ಲಿದ ಲಕ್ಷ್ಯ ಸೆನ್

* 21 ವರ್ಷಗಳ ಬಳಿಕ ಚಿನ್ನದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡ ಭಾರತ

* ಫೈನಲ್‌ನಲ್ಲಿ ಡೆನ್ಮಾರ್ಕ್ನ ವಿಕ್ಟರ್‌ ಆಕ್ಸೆಲ್ಸೆನ್‌ ವಿರುದ್ದ ಲಕ್ಷ್ಯ ಸೆನ್‌ಗೆ ಸೋಲು

All England Open 2022 Lakshya Sen settles for silver after lose against Viktor Axelsen in final kvn

ಬರ್ಮಿಂಗ್‌ಹ್ಯಾಮ್(ಮಾ.21)‌: 21 ವರ್ಷಗಳ ಬಳಿಕ ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (All England Open Badminton Tournament) ಭಾರತೀಯನೊಬ್ಬ ಚಾಂಪಿಯನ್‌ ಆಗಿ ಹೊರಹೊಮ್ಮುವುದನ್ನು ನೋಡಿ ಸಂಭ್ರಮಿಸುವ ಭಾರತೀಯರ ಕನಸು ಈಡೇರಲಿಲ್ಲ. ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಯುವ ತಾರೆ ಲಕ್ಷ್ಯ ಸೆನ್‌ (Lakshya Sen), ವಿಶ್ವ ನಂ.1 ಡೆನ್ಮಾರ್ಕ್ನ ವಿಕ್ಟರ್‌ ಆಕ್ಸೆಲ್ಸೆನ್‌ (Viktor Axelsen) ವಿರುದ್ಧ ಸೋಲುಂಡು ನಿರಾಸೆ ಅನುಭವಿಸಿದರು. ಇತ್ತೀಚೆಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ 11ನೇ ಸ್ಥಾನ ಪಡೆದ 20 ವರ್ಷದ ಲಕ್ಷ್ಯ, 10-21, 11-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿ, ಘಟಾನುಘಟಿಗಳನ್ನು ಸೋಲಿಸಿದ್ದ ಲಕ್ಷ್ಯ, ಕೆಲ ವಾರಗಳ ಹಿಂದಷ್ಟೇ ಜರ್ಮನ್‌ ಓಪನ್‌ (German Open) ಟೂರ್ನಿಯಲ್ಲಿ ಆಕ್ಸೆಲ್ಸೆನ್‌ ವಿರುದ್ಧ ಜಯಿಸಿದ್ದರು. ಅವರಿಂದ ಮತ್ತೊಂದು ಭರ್ಜರಿ ಪ್ರದರ್ಶನ ನಿರೀಕ್ಷೆ ಮಾಡಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು.

ಪಂದ್ಯದ ಮೊದಲ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಆಕ್ಸೆಲ್ಸೆನ್‌ ಬಿಡುವಿನ ವೇಳೆಗೆ 11-2ರ ಮುನ್ನಡೆ ಪಡೆದರು. ಲಕ್ಷ್ಯ ಪುಟಿದೇಳುವ ವೇಳೆಗೆ ಬಹಳ ಮುಂದೆ ಹೋಗಿದ್ದ ಡೆನ್ಮಾರ್ಕ್ ಶಟ್ಲರ್‌, ಸುಲಭವಾಗಿ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು. 2ನೇ ಗೇಮ್‌ನಲ್ಲಿ ಲಕ್ಷ್ಯ ಪ್ರಬಲ ಪೈಪೋಟಿ ನೀಡಿದರಾದರೂ, ವಿಕ್ಟರ್‌ರ ಆಕರ್ಷಕ ಸ್ಮಾಶ್‌ ಹಾಗೂ ಡ್ರಾಪ್‌ ಶಾಟ್‌ಗಳಿಗೆ ತಕ್ಕ ಉತ್ತರ ನೀಡುವಲ್ಲಿ ಸಫಲರಾಗಲಿಲ್ಲ. ಒಂದು ಗಂಟೆಯೊಳಗೆ ಪಂದ್ಯ ಮುಕ್ತಾಯಗೊಂಡಿತು. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಲಕ್ಷ್ಯ ಸೆನ್, ಫೈನಲ್ ಪಂದ್ಯಕ್ಕೆ ವಿಕ್ಟರ್‌ ಆಕ್ಸೆಲ್ಸೆನ್‌ ವಿರುದ್ದ ಒಳ್ಳೆಯ ರಣತಂತ್ರ ಹೆಣೆಯಲಾಗಿತ್ತು. ಕಳೆದ ವಾರ ನಾನು ಅವರ ವಿರುದ್ದ ಹೋರಾಡಿ ಗೆದ್ದಿದ್ದೆ. ಆದರೆ ಇಂದು ಅವರು ಬಲಿಷ್ಠ ಆಕ್ರಮಣ ಹಾಗೂ ರಕ್ಷಣಾತ್ಮಕ ಆಟವಾಡಿದರು. ಪಂದ್ಯದುದ್ದಕ್ಕೂ ಅವರು ತಾಳ್ಮೆ ಕಳೆದುಕೊಳ್ಳದೇ ಉತ್ತಮ ಆಟವನ್ನು ಅಡಿದರು ಎಂದು 20 ಆಟಗಾರ ಲಕ್ಷ್ಯ ಸೆನ್ ಹೇಳಿದ್ದಾರೆ.

1980ರಲ್ಲಿ ಪ್ರಕಾಶ್‌ ಪಡುಕೋಣೆ (Prakash Padukone) ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ ಗೆದ್ದ ಮೊದಲ ಭಾರತೀಯ ಎನ್ನುವ ದಾಖಲೆ ಬರೆದಿದ್ದರು. ಆ ಬಳಿಕ 2001ರಲ್ಲಿ ಪುಲ್ಲೇಲಾ ಗೋಪಿಚಂದ್‌ ಪ್ರತಿಷ್ಠಿತ ಪ್ರಶಸ್ತಿ ಜಯಿಸಿದ 2ನೇ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಆ ಬಳಿಕ ಭಾರತದ ಯಾವ ಶಟ್ಲರ್‌ರಿಂದಲೂ ಈ ಸಾಧನೆ ಮಾಡಲು ಆಗಿಲ್ಲ. 2015ರಲ್ಲಿ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಸೈನಾ ನೆಹ್ವಾಲ್‌ (Saina Nehwal) ಸಹ ಫೈನಲ್‌ನಲ್ಲಿ ಎಡವಿದ್ದರು. ಶನಿವಾರ ನಡೆದ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಲೀ ಝಿ ಜಿಯಾ ಅವರನ್ನು ಬಗ್ಗುಬಡಿಯುವ ಮೂಲಕ ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ 5ನೇ ಭಾರತೀಯ ಶಟ್ಲರ್ ಎನಿಸಿದ್ದರು. ಈ ಮೊದಲು ಪ್ರಕಾಶ್ ನಾಥ್(1947), ಪ್ರಕಾಶ್ ಪಡುಕೋಣೆ(1980, 1981), ಪುಲ್ಲೇಲಾ ಗೋಪಿಚಂದ್ (Pullela Gopichand) (2001) ಹಾಗೂ ಸೈನಾ ನೆಹ್ವಾಲ್(2015) ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರು.

All England Badminton ಹಾಲಿ ಚಾಂಪಿಯನ್ ಆಟಗಾರನನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟ ಲಕ್ಷ್ಯ ಸೆನ್!

2020ರ ಚಾಂಪಿಯನ್‌ ವಿಕ್ಟರ್‌ ಆಕ್ಸೆಲ್ಸೆನ್‌ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಜಪಾನಿನ ಅಕಾನೆ ಯಮಗುಚಿ (Akane Yamaguchi) ಚಾಂಪಿಯನ್ ಪಟ್ಟ ಅಲಂಕರಿಸಿದರು. ದಕ್ಷಿಣ ಕೊರಿಯಾದ ಆನ್‌ ಸೆಯುಂಗ್ ವಿರುದ್ದ 21-15, 21-15 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

Latest Videos
Follow Us:
Download App:
  • android
  • ios