ಫುಟ್ಬಾಲ್ ಮಾಂತ್ರಿಕ ಮೆಸ್ಸಿಗಿಂದು 33ನೇ ಬರ್ತ್ ಡೇ ಸಂಭ್ರಮ
ಬಾಲ್ಯದ ಸಂಕಷ್ಟಗಳನ್ನು ಮೀರಿ ಬೆಳೆದ ಮೇರು ಪ್ರತಿಭೆ ಲಿಯೋನೆಲ್ ಮೆಸ್ಸಿ. ಜೆರ್ಸಿ ನಂ. 10 ಹೊಂದಿರುವ ಅರ್ಜೆಂಟೀನಾ ನಾಯಕ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಮೆಸ್ಸಿ ಇಂದು(ಜೂ.24)ರಂದು ತಮ್ಮ 33ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮೆಸ್ಸಿ Happy Birthday Champ....
ಬೆಂಗಳೂರು(ಜೂ.24): ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ, ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಇಂದು(ಜೂ.24) ತಮ್ಮ 33ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಮೈದಾನದಲ್ಲಿ ತಮ್ಮ ಕಾಲ್ಚಳಕದ ಮೂಲಕ ಪ್ರೇಕ್ಷರನ್ನು ಅಕ್ಷರಶಃ ಮಂತ್ರಮುಗ್ದಗೊಳಿಸುವ ಸಾಮರ್ಥ್ಯ ಮೆಸ್ಸಿಗಿದೆ.
ಅರ್ಜೆಂಟೀನಾದ ಸೂಪರ್ ಹೀರೋ ಮೆಸ್ಸಿ ತಮ್ಮ 12ನೇ ವಯಸ್ಸಿನಲ್ಲೇ ಬಾರ್ಸಿಲೋನಾ ಫ್ರಾಂಚೈಸಿ ಪರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಬೆಳೆಯವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಮೆಸ್ಸಿ ಎನ್ನುವ ಅಸಾಧಾರಣ ಪ್ರತಿಭೆಯನ್ನು ಬಾರ್ಸಿಲೋನಾದ ಟೆಕ್ನಿಕಲ್ ಸೆಕ್ರೇಟರಿ ಚಾರ್ಲಿ ರೆಕ್ಸಚ್ ಗುರುತಿಸುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಬಾರ್ಸಿಲೋನಾದ ಯುವ ಆಕೆಡಮಿ 'ಲಾ ಮೆಸಿಯಾ' ಸೇರಿದ ಮಸ್ಸಿ ಇದೀಗ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.
ಬಾಲ್ಯದ ದಿನಗಳಲ್ಲಿ ಮೆಸ್ಸಿ Growth Harmone Disoreder(GHD) ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಬಾರ್ಸಿಲೋನಾ ಕ್ಲಬ್ ಮೆಸ್ಸಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರಿಂದ ಇಂದು ದಿಗ್ಗಜ ಆಟಗಾರನಾಗಿ ಬಾರ್ಸಿಲೋನಾ ನಾಯಕ ಬೆಳೆದು ನಿಂತಿದ್ದಾರೆ. 2000ನೇ ಇಸವಿಯಲ್ಲಿ ಒಪ್ಪಂದಕ್ಕೆ ಸಹಿಹಾಕಿದ್ದ ಮೆಸ್ಸಿ, ನವೆಂಬರ್ 16, 2003ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಬಾರ್ಸಿಲೋನಾ ಪರ ಪಾದಾರ್ಪಣೆ ಮಾಡಿದರು. ಆ ಬಳಿಕ ಮೆಸ್ಸಿ ಹಿಂತಿರುಗಿ ನೋಡಲೇ ಇಲ್ಲ.
6 ಬಾರಿ ಬಾಲನ್ ಡಿ ಓರ್ ಪ್ರಶಸ್ತಿ ವಿಜೇತ ಮೆಸ್ಸಿ, ಲಾ ಲಿಗಾ ಇತಿಹಾಸದಲ್ಲಿ ದಾಖಲೆಯ 440 ಗೋಲು ಬಾರಿಸಿದ್ದಾರೆ. 2012ರಲ್ಲಿ ಅತ್ಯದ್ಬುತ ಫಾರ್ಮ್‌ನಲ್ಲಿದ್ದ ಮೆಸ್ಸಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಕ್ಲಬ್ ಹಾಗೂ ರಾಷ್ಟ್ರದ ಪರ ಒಟ್ಟು 91 ಗೋಲು ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು.
6 ವರ್ಷದಲ್ಲೇ ಸಿಕ್ಸ್ ಪ್ಯಾಕ್ ; ನಾನು ಮೆಸ್ಸಿಯಂತಾಗುತ್ತೇನೆ ಎಂದ ಪೋರ..!
ಮೆಸ್ಸಿ ಬಾರ್ಸಿಲೋನಾಗೆ 10 ಲಾ ಲಿಗಾ,4 ಚಾಂಪಿಯನ್ಸ್ ಲೀಗ್, 6 ಕೋಪಾ ಡೆಲ್ ರೇ, 3 ಕ್ಲಬ್ ವರ್ಲ್ಡ್ ಕಪ್, 3 ಯೂರೋಪಿಯನ್ ಸೂಪರ್ ಕಪ್ ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇಷ್ಟೆಲ್ಲಾ ಅಮೋಘ ಸಾಧನೆ ಮಾಡಿರುವ ಮೆಸ್ಸಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಸಾಧ್ಯವಾಗದೇ ಇರುವುದು ಮಾತ್ರ ವಿಪರ್ಯಾಸ. ಮೆಸ್ಸಿ ಅರ್ಜೆಂಟೀನಾ ತಂಡವನ್ನು ಮೂರು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೈನಲ್‌ಗೆ ಕೊಂಡೊಯ್ದರಾದರೂ ಚಾಂಪಿಯನ್ ಮಟ್ಟಕ್ಕೇರಿಸಲು ಮಾತ್ರ ಸಾಧ್ಯವಾಗಿಲ್ಲ. ಅರ್ಜೆಂಟೀನಾ ತಂಡವು 2014ರ ಫಿಫಾ ವಿಶ್ವಕಪ್ ಹಾಗೂ 2015 ಹಾಗೂ 2016ರಲ್ಲಿ ಕೋಪಾ ಅಮೆರಿಕಾ ಟೂರ್ನಿಯಲ್ಲಿ ಫೈನಲ್ ಎಂಟ್ರಿ ಕೊಟ್ಟಿತ್ತು. ಆದರೆ ಕಪ್ ಗೆಲ್ಲಲು ಮಾತ್ರ ಸಾಧ್ಯವಾಗಲಿಲ್ಲ.
ಮೆಸ್ಸಿ ಜನ್ಮದಿನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನ ನಾನಾ ಮೂಲೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸುವರ್ಣ ನ್ಯೂಸ್.ಕಾಂ ವತಿಯಿಂದಲೂ ಹ್ಯಾಪಿ ಹ್ಯಾಪಿ ಬರ್ತ್ ಡೇ ಲಿಯೋನೆಲ್ ಮೆಸ್ಸಿ. ಇನ್ನಷ್ಟು ವರ್ಷ ಫುಟ್ಬಾಲ್ ಮೈದಾನದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳನ್ನು ರಂಜಿಸಲಿ ಎನ್ನುವುದಷ್ಟೇ ನಮ್ಮೆಲ್ಲರ ಹಾರೈಕೆ