ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಸಿಎ ಭವಾನಿ ದೇವಿಈ ಸಾಧನೆ ಮಾಡಿದ ಭಾರತದ ಮೊದಲ ಫೆನ್ಸರ್ ಎನ್ನುವ ಹೆಗ್ಗಳಿಕೆಗೆ ಪಾತ್ರಸೆಮೀಸ್‌ನಲ್ಲಿ ಕೇವಲ 1 ಅಂಕದಿಂದ ಫೈನಲ್‌ ಅವಕಾಶವಂಚಿತರಾದ ಭಾರತದ ಫೆನ್ಸರ್

ವುಕ್ಸಿ(ಜೂ.19): ಭಾರತದ ಅನುಭವಿ ಫೆನ್ಸರ್ ಸಿಎ ಭವಾನಿ ದೇವಿ ಸೋಮವಾರವಾದ ಇಂದು(ಜೂ.19) ಏಷ್ಯನ್‌ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಮೂಲಕ, ಈ ಸಾಧನೆ ಮಾಡಿದ ಭಾರತದ ಮೊದಲ ಫೆನ್ಸರ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಚೀನಾದ ವುಕ್ಸಿ ಎನ್ನುವ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಭವಾನಿ ದೇವಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

29 ವರ್ಷದ ಚೆನ್ನೈ ಮೂಲದ ಸಿಎ ಭವಾನಿ ದೇವಿ, ಮಹಿಳೆಯರ ವೈಯುಕ್ತಿಕ ವಿಭಾಗದ ಸಬ್ರೇ ಫೆನ್ಸಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಝೈನಾಬ್‌ ಡೈಬೇಕೊವಾ ವಿರುದ್ದ ಭವಾನಿ ದೇವಿ 14-15 ಅಂಕಗಳ ರೋಚಕ ಸೋಲು ಕಾಣುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಕ್ವಾರ್ಟರ್‌ ಫೈನಲ್‌ನಲ್ಲಿ ಭವಾನಿ ದೇವಿ, ವಿಶ್ವದ ಹಾಲಿ ನಂ.1 ಶ್ರೇಯಾಂಕಿ ಫೆನ್ಸರ್ ಜಪಾನಿನಮಿಸಾಕಿ ಎಮೂರಾ ವಿರುದ್ದ 15-10 ಅಂಕಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದರು. ಈ ಮೂಲಕ ಭವಾನಿ ದೇವಿ ಏಷ್ಯನ್‌ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಖಚಿತಪಡಿಸಿಕೊಂಡರು. ಪ್ರಶಸ್ತಿ ಗೆಲ್ಲುವ ನೆಚ್ಚಿನ ಫೆನ್ಸರ್ ಆಗಿ ಗುರುತಿಸಿಕೊಂಡಿದ್ದ ಜಪಾನಿನ ಸ್ಪರ್ಧಾಳು ಎದುರು ಭರ್ಜರಿ ಗೆಲುವು ಸಾಧಿಸುವಲ್ಲಿ ಒಲಿಂಪಿಯನ್ ಭವಾನಿ ದೇವಿ ಯಶಸ್ವಿಯಾಗಿದ್ದರು.

Scroll to load tweet…

ಈ ಮೊದಲು ಭವಾನಿ ದೇವಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಮೂಲಕ, ಫೆನ್ಸಿಂಗ್‌ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಫೆನ್ಸರ್ ಎನ್ನುವ ಹೆಗ್ಗಳಿಕೆಗೆ ಭವಾನಿ ದೇವಿ ಪಾತ್ರರಾಗಿದ್ದರು. ಟೋಕಿಯೋ ಒಲಿಂಪಿಕ್ಸ್‌ನ 64ನೇ ಸುತ್ತಿನಲ್ಲಿ ಬೈ ಪಡೆದಿದ್ದ ಭವಾನಿ ದೇವಿ, ತಮ್ಮ ಮೊದಲ ಪ್ರಯತ್ನದಲ್ಲಿಯೇ ಅದ್ಭುತ ಚಾಕಚಕ್ಯತೆ ಪ್ರದರ್ಶಿಸಿದ್ದರು. ಇನ್ನು ಕಳೆದ ವರ್ಷ ನಡೆದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭವಾನಿ ದೇವಿ ಚಿನ್ನದ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು.

ಸಾತ್ವಿ​ಕ್‌-ಚಿರಾ​ಗ್‌ಗೆ ಇಂಡೋ​ನೇಷ್ಯಾ ಸೂಪರ್‌ 1000 ಕಿರೀ​ಟ! ಏನಿದು ಸೂಪರ್‌ 1000 ಟೂರ್ನಿ?

ಭಾರತದ ಫೆನ್ಸಿಂಗ್‌ ಕ್ರೀಡೆಯ ಪಾಲಿಗೆ ಇಂದು ಹೆಮ್ಮೆಯ ದಿನ. ಈ ಹಿಂದೆ ಫೆನ್ಸಿಂಗ್‌ನಲ್ಲಿ ಭಾರತದ ಯಾವೊಬ್ಬ ಫೆನ್ಸರ್ ಮಾಡದ ಸಾಧನೆಯನ್ನು ಇಂದು ಭವಾನಿ ಮಾಡಿ ತೋರಿಸಿದ್ದಾರೆ ಎಂದು ಭಾರತೀಯ ಫೆನ್ಸಿಂಗ್ ಫೆಡರೇಷನ್‌ನ ವ್ಯವಸ್ಥಾಪಕ ಕಾರ್ಯದರ್ಶಿ ರಾಜೀವ್ ಮೆಹ್ತಾ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಠಿತ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯಳು ಎನ್ನುವ ಕೀರ್ತಿಗೆ ಭವಾನಿ ದೇವಿ ಪಾತ್ರರಾಗಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ಸೋತಿರಬಹುದು, ಆದರೆ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿತ್ತು. ಕೇವಲ ಒಂದು ಪಾಯಿಂಟ್‌ ವ್ಯತ್ಯಾಸವಷ್ಟೇ. ಭವಾನಿ ದೇವಿ ಅತಿದೊಡ್ಡ ಸಾಧನೆ ಮಾಡಿದ್ದಾರೆ ಎಂದು ರಾಜೀವ್ ಮೆಹ್ತಾ ಸಂತೋಷ ವ್ಯಕ್ತಪಡಿಸಿದ್ದಾರೆ.