Cristiano Ronaldo: ಮ್ಯಾಂಚೆಸ್ಟರ್‌ಗೆ ತೊರೆದು ಹೊಸ ಕ್ಲಬ್ ಸೇರಿದ ರೊನಾಲ್ಡೋ ವಾರ್ಷಿಕ ಸಂಬಳ 1770 ಕೋಟಿ ರುಪಾಯಿ..!
ಸೌದಿ ಅರೇಬಿಯಾದ ಅಲ್ ನಾಸ್ರ್ ಕ್ಲಬ್ ಜತೆ 2 ವರ್ಷದ ಒಪ್ಪಂದಕ್ಕೆ ಸಹಿ ಹಾಕಿರ ಕ್ರಿಸ್ಟಿಯಾನೋ ರೊನಾಲ್ಡೋ
ವಾರ್ಷಿಕ 1,770 ಕೋಟಿ ರುಪಾಯಿಗಳನ್ನು ಪಡೆದುಕೊಳ್ಳಲಿರುವ ಪೋರ್ಚುಗಲ್ ಫುಟ್ಬಾಲಿಗ
2025ರ ವರೆಗೆ ಅಲ್ ನಾಸ್ರ್ ತಂಡವನ್ನು ಪ್ರತಿನಿಧಿಸಲಿರುವ ಮ್ಯಾಂಚೆಸ್ಟರ್ ಯುನೈಟೆಡ್ ಮಾಜಿ ಫುಟ್ಬಾಲಿಗ
ಲಂಡನ್(ಡಿ.31): ಪೋರ್ಚುಗಲ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ನಿರೀಕ್ಷೆಯಂತೆಯೇ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ತೊರೆದಿದ್ದಾರೆ. ಇದೀಗ ಸೌದಿ ಅರೇಬಿಯಾದ ಅಲ್ ನಾಸ್ರ್ ಕ್ಲಬ್ ಜತೆಗೆ ಎರಡು ವರ್ಷದ ಅವಧಿಗೆ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಸೌದಿ ಅರೇಬಿಯಾದ ಅಲ್ ನಾಸ್ರ್ ಕ್ಲಬ್ ಪರ ಕಣಕ್ಕಿಳಿಯುವುದರಿಂದ ಕ್ರಿಸ್ಟಿಯಾನೋ ರೊನಾಲ್ಡೋ ವಾರ್ಷಿಕ 1,770 ಕೋಟಿ ರುಪಾಯಿಗಳನ್ನು ಪಡೆದುಕೊಳ್ಳಲಿದ್ದಾರೆ.
ಫಿಫಾ ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ಟಿವಿ ಸಂದರ್ಶನವೊಂದರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ, ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮ್ಯಾನೇಜ್‌ಮೆಂಟ್ ವಿರುದ್ದ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಕೆಲ ದಿನಗಳ ಹಿಂದಷ್ಟೇ ರೊನಾಲ್ಡೋ, ಮ್ಯಾಂಚೆಸ್ಟರ್ ಕ್ಲಬ್‌ನಿಂದ ಹೊರಬಂದಿದ್ದರು.
ಫುಟ್ಬಾಲ್ ದಂತಕಥೆ ಪೀಲೆ ಹೆಸರಿನಲ್ಲಿರುವ 6 ಅಪರೂಪದ ದಾಖಲೆಗಳಿವು..!
ಇದೀಗ ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್ ಅಲ್ ನಾಸ್ರ್, ದಾಖಲೆಯ 200 ಮಿಲಿಯನ್ ಯೂರೋಗೂ ಅಧಿಕ ಮೊತ್ತ ನೀಡಿ 37 ವರ್ಷದ ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ರಿಸ್ಟಿಯಾನೋ ರೊನಾಲ್ಡೋ ಅವರು 2025ರ ಜೂನ್‌ವರೆಗೆ ಅಲ್ ನಾಸ್ರ್ ತಂಡದೊಂದಿಗೆ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ನಾನು ಇದೀಗ ಮತ್ತೊಂದು ದೇಶದ ಹೊಸ ಫುಟ್ಬಾಲ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಹಾಗೂ ಯುವೆಂಟಸ್ ತಂಡವನ್ನು ಪ್ರತಿನಿಧಿಸಿದ್ದ ರೊನಾಲ್ಡೋ ಹೇಳಿದ್ದಾರೆ. ಇನ್ನು ಅಲ್ ನಾಸ್ರ್ ಅಧಿಕೃತ ಫುಟ್ಬಾಲ್ ಟ್ವಿಟರ್ ಖಾತೆಯಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ, ಹಳದಿ ಮತ್ತು ನೀಲಿ ಬಣ್ಣದ 7 ಸಂಖ್ಯೆಯ ತಮ್ಮ ಜೆರ್ಸಿಯನ್ನು ಕೈಯಲ್ಲಿ ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ.
ಅಲ್ ನಾಸ್ರ್ ತಂಡದ ದೃಷ್ಟಿಕೋನವು ನನ್ನನ್ನು ಈ ತಂಡ ಸೇರಿಕೊಳ್ಳಲು ಪ್ರೇರಣೆ ನೀಡಿತು. ನಾನೀಗ ನನ್ನ ಸಹ ಆಟಗಾರರನ್ನು ಕೂಡಿಕೊಳ್ಳಲು ಉತ್ಸುಕನಾಗಿದ್ದೇನೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಅಲ್ ನಾಸ್ರ್ ತಂಡವನ್ನು ಮತ್ತಷ್ಟು ಎತ್ತರಕ್ಕೆ ಏರುವಂತೆ ಮಾಡೋಣ ಎಂದು ಕ್ರಿಸ್ಟಿಯಾನೋ ರೊನಾಲ್ಡೋ ಹೇಳಿದ್ದಾರೆ.
ಸೌದಿ ಅರೇಬಿಯನ್ ಲೀಗ್ ಟೂರ್ನಿಯಲ್ಲಿ ಅಲ್ ನಾಸ್ರ್ ತಂಡವು ಒಟ್ಟು 9 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. 2019ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಅಲ್ ನಾಸ್ರ್ ತಂಡಕ್ಕೆ ಇದೀಗ ಕ್ರಿಸ್ಟಿಯಾನೋ ರೊನಾಲ್ಡೋ ಸೇರ್ಪಡೆ ಆನೆ ಬಲ ಬಂದಂತೆ ಆಗಿದೆ.
ಕ್ರಿಸ್ಟಿಯಾನೋ ರೊನಾಲ್ಡೋ, ಅಲ್ ನಾಸ್ರ್ ತಂಡ ಸೇರ್ಪಡೆ ಕುರಿತಂತೆ ಟ್ವೀಟ್ ಮಾಡಿರುವ ಅರಬ್ ಫುಟ್ಬಾಲ್ ಕ್ಲಬ್, ಇತಿಹಾಸ ನಿರ್ಮಾಣವಾಗುತ್ತಿದೆ. ಈ ಒಪ್ಪಂದವು ಕೇವಲ ನಮ್ಮ ಕ್ಲಬ್ ಅನ್ನು ಮಾತ್ರ ಸ್ಪೂರ್ತಿಗೊಳಿಸುತ್ತಿಲ್ಲ, ಬದಲಾಗಿ ಇಡೀ ನಮ್ಮ ಸೌದಿ ಅರೇಬಿಯನ್ ಲೀಗ್ ಮತ್ತಷ್ಟು ಎತ್ತರಕ್ಕೆ ಏರಲು ನೆರವಾಗಲಿದೆ. ನಮ್ಮ ದೇಶದ ಹಾಗೂ ಮುಂಬ ಬಾಲಕ-ಬಾಲಕಿಯರು ಸೇರಿದಂತೆ ಯುವ ಪೀಳಿಗೆಗೆ ಉತ್ತಮ ದೃಷ್ಟಿಕೋನ ಹೊಂದಲು ಅನುಕೂಲವಾಗಲಿದೆ. ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗೆ ಹೊಸ ಮನೆಯಾದ ಅಲ್ ನಾಸ್ರ್ ಗೆ ಸ್ವಾಗತ ಎಂದು ಟ್ವೀಟ್ ಮಾಡಿದೆ.