ಫುಟ್ಬಾಲ್ ದಂತಕಥೆ ಪೀಲೆ ಹೆಸರಿನಲ್ಲಿರುವ 6 ಅಪರೂಪದ ದಾಖಲೆಗಳಿವು..!
ಬೆಂಗಳೂರು(ಡಿ.31): ಬ್ರೆಜಿಲ್ ಫುಟ್ಬಾಲ್ ದಂತಕಥೆ ಪೀಲೆ ತಮ್ಮ 82ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ತಮ್ಮ ಅದ್ಭುತ ಕಾಲ್ಚಳಕದ ಮೂಲಕವೇ ಅಕ್ಷರಶಃ ಫುಟ್ಬಾಲ್ ಜಗತ್ತನ್ನು ಆಳಿದ್ದ ಪೀಲೆ, ಮೂರು ಫಿಫಾ ವಿಶ್ವಕಪ್ ಜಯಿಸಿದ ಏಕೈಕ ಫುಟ್ಬಾಲಿಗ ಎನಿಸಿಕೊಂಡಿದ್ದಾರೆ. ಮಾಂತ್ರಿಕ ಫುಟ್ಬಾಲಿಗ ಪೀಲೆ ಹೆಸರಿನಲ್ಲಿರುವ ಆರು ಅಪರೂಪದ ದಾಖಲೆಗಳು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ...
1. ವಿಶ್ವಕಪ್ ಗೆದ್ದ ಅತಿಕಿರಿಯ
ಬ್ರೆಜಿಲ್ 1958ರಲ್ಲಿ ಫಿಫಾ ವಿಶ್ವಕಪ್ ಗೆದ್ದಾಗ ತಂಡದಲ್ಲಿದ್ದ ಪೀಲೆಗೆ ಕೇವಲ 17 ವರ್ಷ, 249 ದಿನಗಳಾಗಿತ್ತು. ಈ ದಾಖಲೆಯನ್ನು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.
2. ಮೂರು ವಿಶ್ವಕಪ್ ಗೆದ್ದ ಏಕೈಕ ವ್ಯಕ್ತಿ
ಫಿಫಾ ಇತಿಹಾಸದಲ್ಲೇ 3 ಬಾರಿ ವಿಶ್ವಕಪ್ ಗೆದ್ದ ಏಕೈಕ ಆಟಗಾರ ಪೀಲೆ. ಪೀಲೆ ತಂಡದಲ್ಲಿದ್ದಾಗ ಬ್ರೆಜಿಲ್ 1958, 1962 ಹಾಗೂ 1970ರಲ್ಲಿ ಚಾಂಪಿಯನ್ ಆಗಿತ್ತು.
3. ಬ್ರೆಜಿಲ್‌ನ ಜಂಟಿ ಅಗ್ರ ಸ್ಕೋರರ್
ಬ್ರೆಜಿಲ್ ಪರ ಪೀಲೆ 92 ಪಂದ್ಯಗಳಲ್ಲಿ 77 ಗೋಲು ಬಾರಿಸಿದ್ದು, ದೇಶದ ಅತಿಹೆಚ್ಚು ಗೋಲು ಗಳಿಕೆದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2022ರ ವಿಶ್ವಕಪ್‌ನಲ್ಲಿ ನೇಯ್ಮರ್(77 ಗೋಲು) ಪೀಲೆ ದಾಖಲೆ ಸರಿಗಟ್ಟಿದ್ದರು.
4. ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಹೊಡೆದ ಕಿರಿಯ
ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೋಲ ಬಾರಿಸಿದ ಅತಿಕಿರಿಯ ಆಟಗಾರ ಎಂಬ ದಾಖಲೆಯೂ ಪೀಲೆ ಹೆಸರಲ್ಲಿದೆ. 1958ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಹ್ಯಾಟ್ರಿಕ್ ಬಾರಿಸಿದ್ದಾಗ ಪೀಲೆಗೆ 17 ವರ್ಷ, 244 ದಿನಗಳಾಗಿತ್ತು.
5. ಸಾವಿರಕ್ಕೂ ಅಧಿಕ ಗೋಲು!
ಪೀಲೆ ತಮ್ಮ ಫುಟ್ಬಾಲ್ ವೃತ್ತಿಬದುಕಿನಲ್ಲಿ 1363 ಪಂದ್ಯಗಳಲ್ಲಿ ದಾಖಲೆಯ 1279 ಗೋಲು ದಾಖಲಿಸಿದ್ದಾರೆ. ಇದು ಯಾವುದೇ ಆಟಗಾರನಿಗಿಂತಲೂ ಗರಿಷ್ಠ.
6. ಗರಿಷ್ಠ ಹ್ಯಾಟ್ರಿಕ್ ಗೋಲು
ಪೀಲೆ ಒಟ್ಟು 92 ಬಾರಿ ಹ್ಯಾಟ್ರಿಕ್ ಗೋಲು ಬಾರಿಸಿದ್ದು, ಈಗಲೂ ದಾಖಲೆಯಾಗಿಯೇ ಉಳಿದಿದೆ. ಕ್ರಿಸ್ಟಿಯಾನೊ ರೊನಾಲ್ಡೋ 56, ಲಿಯೋನೆಲ್ ಮೆಸ್ಸಿ 53 ಹ್ಯಾಟ್ರಿಕ್ ಗೋಲುಗಳೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ.