ನೈಜೀರಿಯನ್ ಮೂಲದ ಫೊಲಾರಿನ್ ಬಾಲೋಗನ್, 25 ವರ್ಷಗಳ ಹಿಂದೆ ಅವರ ಗರ್ಭಿಣಿ ತಾಯಿಗೆ ಅಮೆರಿಕದಿಂದ ಲಂಡನ್‌ಗೆ ತೆರಳುವ ವಿಮಾನವನ್ನು ನಿರಾಕರಿಸಿದ್ದರಿಂದ ಆಕಸ್ಮಿಕವಾಗಿ ಅಮೆರಿಕದಲ್ಲಿ ಜನಿಸಿದರು. ಲಂಡನ್‌ನಲ್ಲಿ ಬೆಳೆದು, ಫುಟ್ಬಾಲ್ ಪಳಗಿದ ಬಾಲೋಗನ್, ಇದೀಗ ವಿಶ್ವಕಪ್‌ನಲ್ಲಿ ಅಮೆರಿಕ ತಂಡದ ಪ್ರಮುಖ ಆಟಗಾರನಾಗಿ ಮಿಂಚುತ್ತಿದ್ದಾರೆ.
Folarin Balogun Remarkable Story: 25 ವರ್ಷಗಳ ಹಿಂದೆ ಅಮೆರಿಕದ ವಿಮಾನಯಾನ ಸಿಬ್ಬಂದಿಯು ಲಂಡನ್‌ನ ಗರ್ಭಿಣಿ ಮಹಿಳೆಗೆ ವಿಮಾನವೇರಲು ಬಿಟ್ಟಿದ್ದರೆ ಈ ಬಾರಿ ವಿಶ್ವಕಪ್‌ನಲ್ಲಿ ಅಮೆರಿಕ ತಂಡಕ್ಕೆ ಬಹುಶಃ ಫೊಲಾರಿನ್ ಬಾಲೋಗನ್ ಎಂಬ ತಾರಾ ಸ್ಟ್ರೈಕರ್ ಸಿಗುತ್ತಿರಲಿಲ್ಲ.
ಅಮೆರಿಕ ತಂಡದ ಪರ ಅಪರೂಪದ ದಾಖಲೆ ಬರೆದ ಫೊಲಾರಿನ್ ಬಾಲೋಗನ್
1930ರ ಬಳಿಕ ವಿಶ್ವಕಪ್ ಪಂದ್ಯವೊಂದರಲ್ಲಿ 2 ಗೋಲು ಬಾರಿಸಿದ ಅಮೆರಿಕದ ಮೊದಲ ಆಟಗಾರ ಎನಿಸಿಕೊಂಡಿರುವ ಬಾಲೋಗನ್ ಹುಟ್ಟಿದ್ದು ಅಮೆರಿಕದಲ್ಲೇ ಆಗಿದ್ದರೂ ಅವರ ಪೋಷಕರು ನೈಜೀರಿಯಾದವರು. ಆದರೆ ಇಂಗ್ಲೆಂಡ್‌ನಲ್ಲಿ ವಾಸ. ಬಾಲೋಗನ್‌ರ ತಾಯಿ ಫ್ಲೋರೆನ್ಸ್ 2001ರಲ್ಲಿ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ಲಂಡನ್‌ನಿಂದ ನ್ಯೂಯಾರ್ಕ್‌ಗೆ ತೆರಳಿದ್ದರು. ಆದರೆ ಹಿಂದಿರುಗುವಾಗ ಮೆಡಿಕಲ್ ಕ್ಲಿಯರೆನ್ಸ್ ಇಲ್ಲದ ಕಾರಣ ತುಂಬ ಗರ್ಭಿಣಿಗೆ ವಿಮಾನವೇರಲು ಅಮೆರಿಕದಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ ಫ್ಲೋರೆನ್ಸ್ ಅಲ್ಲೇ ಉಳಿದು, ಕೆಲ ದಿನಗಳಲ್ಲಿ ಮಗುವಿಗೆ ಜನ್ಮ ನೀಡಿದ್ದರು.
ವಾರದಲ್ಲೇ ಅವರು ಲಂಡನ್‌ಗೆ ಮರಳಿದ್ದರು. ಬಾಲೋಗನ್ ಅಲ್ಲೇ ಬೆಳೆದು, ಸಣ್ಣ ವಯಸ್ಸಿನಲ್ಲೇ ಅರ್ಸೆನಲ್ ಕ್ಲಬ್‌ನ ಹೇಲ್ ಎಂಡ್ ಅಕಾಡೆಮಿಯಲ್ಲಿ ಫುಟ್ಬಾಲ್ ತರಬೇತಿ ಆರಂಭಿಸಿದ್ದರು. ಬಳಿಕ ಅಲ್ಲಿಂದ ಫ್ರಾನ್ಸ್‌ಗೆ ತೆರಳಿ ಪ್ರತಿಭಾವಂತ ಫುಟ್ಬಾಲರ್ ಆಗಿ ಬೆಳೆದರು. ಅಲ್ಲಿಂದ ಮತ್ತೆ ಅಮೆರಿಕದತ್ತ ಪಯಣ ಬೆಳೆಸಿದ ಬಾಲೋಗನ್ 2023ರಿಂದ ಅಲ್ಲಿನ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ.
ನೈಜೀರಿಯಾದ ಪೋಷಕರಿಗೆ ಹುಟ್ಟಿ, ಅಮೆರಿಕದ ಪೌರನಾಗಿ, ಲಂಡನ್‌ನಲ್ಲಿ ಫುಟ್ಬಾಲ್ ಕಲಿತು, ಫ್ರಾನ್ಸ್‌ನಲ್ಲಿ ಓರ್ವ ಗೋಲ್ ಸ್ಕೋರರ್ ಆಗಿ ಬೆಳೆದು, ಇಂಗ್ಲೆಂಡ್‌ನ ಅಂಡರ್-17, ಅಂಡರ್-21 ರಾಷ್ಟ್ರೀಯ ತಂಡದ ಪರ ಆಡಿದ್ದ ಬಾಲೋಗನ್, ಈಗ ಅಮೆರಿಕ ತಂಡಕ್ಕೆ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದಾರೆ.
ಅಮೆರಿಕ ಗೋಲು ಮಳೆ, 4-1ರಲ್ಲಿ ಭರ್ಜರಿ ಗೆಲುವು
ಇಂಗಲ್‌ವುಡ್(ಕ್ಯಾಲಿಫೋರ್ನಿಯಾ): ಫಿಫಾ ವಿಶ್ವಕಪ್‌ನಲ್ಲಿ ಆತಿಥೇಯ ಅಮೆರಿಕ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಶನಿವಾರ ಮುಂಜಾನೆ ನಡೆದ ಪರಗ್ವೆ ವಿರುದ್ಧ ಪಂದ್ಯದಲ್ಲಿ ಗೋಲಿನ ಮಳೆ ಸುರಿಸಿದ ಅಮೆರಿಕ 4-1 ಅಂತರದಲ್ಲಿ ಜಯಭೇರಿ ಬಾರಿಸಿತು. ಈ ಮೂಲಕ ವಿಶ್ವಕಪ್ ಪಂದ್ಯದಲ್ಲೇ ತನ್ನ ಗರಿಷ್ಠ ಗೋಲಿನ ದಾಖಲೆ ಬರೆಯಿತು.
ಅಮೆರಿಕ ತಂಡ 2022ರ ವಿಶ್ವಪ್‌ನಲ್ಲಿ 3 ಪಂದ್ಯಗಳಲ್ಲಿ ಕೇವಲ 4 ಗೋಲು ಬಾರಿಸಿತ್ತು. ಅಲ್ಲದೆ, ವಿಶ್ವಕಪ್ ಪಂದ್ಯದಲ್ಲಿ ಈವರೆಗೂ 3ಕ್ಕಿಂತ ಹೆಚ್ಚು ಗೋಲು ಬಾರಿಸಿರಲಿಲ್ಲ. ಆದರೆ ಪರಗ್ವೆ ವಿರುದ್ಧ ತಂಡ ಮೊದಲಾರ್ಧದಲ್ಲೇ 3-0 ಮುನ್ನಡೆ ಸಾಧಿಸಿತು.
ಪರಗ್ವೆ ಆಟಗಾರ ಡಾಮಿಯನ್ ಬೊಬಾದಿಲ್ಲಾ 31ನೇ ನಿಮಿಷದಲ್ಲಿ ಮಾಡಿದ ಓನ್ ಗೋಲ್ ಎಡವಟ್ಟಿನಿಂದಾಗಿ ಅಮೆರಿಕ 1-0 ಮುನ್ನಡೆ ಪಡೆಯಿತು. ಬಳಿಕ ಫೊಲಾರಿನ್ ಬಾಲೋಗನ್ 32 ಹಾಗೂ ಮೊದಲಾರ್ಧದ ಹೆಚ್ಚುವರಿ ನಿಮಿಷ(45+5)ದಲ್ಲಿ 2 ಗೋಲು ದಾಖಲಿಸಿ ಅಮೆರಿಕಕ್ಕೆ ಬಹುತೇಕ ಗೆಲುವು ಖಚಿತಪಡಿಸಿಕೊಂಡರು. ಬಳಿಕ ದ್ವಿತೀಯಾರ್ಧದ 73ನೇ ನಿಮಿಷದಲ್ಲಿ ಪರಗ್ವೆ ಪರ ಮಾರಿಸಿಯೊ ಗೋಲು ದಾಖಲಿಸಿದರೂ, 98ನೇ ನಿಮಿಷದಲ್ಲಿ ಜಿಯೋವಾನಿ ರೇನಾ ಬಾರಿಸಿದ ಗೋಲು ಅಮೆರಿಕದ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿತು.

