FIFA World Cup: ಸ್ಪೇನ್, ಪೋರ್ಚುಗಲ್‌ ಕ್ವಾರ್ಟರ್‌ಗೆ ಲಗ್ಗೆ..?

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಮೇಲೆ ಕಣ್ಣಿಟ್ಟ ಸ್ಪೇನ್, ಪೋರ್ಚುಗಲ್
ಮಾಜಿ ಚಾಂಪಿಯನ್‌ ಸ್ಪೇನ್‌ಗೆ ಮೊರಾಕ್ಕೊ ಸವಾಲು 
2006ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ಗೇರುವ ತವಕದಲ್ಲಿ ಪೋರ್ಚುಗಲ್‌

FIFA World Cup Spain and Portugal eyes on Quarter Final kvn

ದೋಹಾ(ಡಿ.06): ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಕೊನೆಯ ಎರಡು ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಮಂಗಳವಾರ ನಡೆಯಲಿದೆ. ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಮಾಜಿ ಚಾಂಪಿಯನ್‌ ಸ್ಪೇನ್‌ಗೆ ಮೊರಾಕ್ಕೊ ಸವಾಲು ಎದುರಾಗಲಿದೆ. ಗುಂಪು ಹಂತದಲ್ಲಿ ಬೆಲ್ಜಿಯಂ, ಕೆನಡಾಗೆ ಸೋಲುಣಿಸಿ, ಕ್ರೊವೇಷಿಯಾ ವಿರುದ್ಧ ಡ್ರಾ ಸಾಧಿಸಿದ ಮೊರಾಕ್ಕೊ ಅಜೇಯವಾಗಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಸ್ಪೇನ್‌ಗೂ ಆಘಾತ ನೀಡುವ ನಿರೀಕ್ಷೆಯಲ್ಲಿದ್ದು ಚೊಚ್ಚಲ ಬಾರಿಗೆ ಕ್ವಾರ್ಟರ್‌ ಫೈನಲ್‌ಗೇರಲು ಕಾತರಿಸುತ್ತಿದೆ.

ಮತ್ತೊಂದಡೆ 2010ರಲ್ಲಿ ಚಾಂಪಿಯನ್‌ ಆಗಿದ್ದ ಸ್ಪೇನ್‌ ಆ ಬಳಿಕ ಅಂತಿಮ 8ರ ಸುತ್ತಿಗೆ ಪ್ರವೇಶಿಸಿಲ್ಲ. 2014ರಲ್ಲಿ ಗುಂಪು ಹಂತದಲ್ಲಿ ಸೋತಿದ್ದ ಸ್ಪೇನ್‌, 2018ರಲ್ಲಿ ಪ್ರಿ ಕ್ವಾರ್ಟರ್‌ನಲ್ಲಿ ಹೊರಬಿದ್ದಿತ್ತು. ಈ ಬಾರಿ ಜಪಾನ್‌ ವಿರುದ್ಧ ಸೋತು ಆಘಾತಕ್ಕೊಳಗಾದ ಸ್ಪೇನ್‌ಗೆ ಮೊರಾಕ್ಕೊ ತಂಡದಿಂದಲೂ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ಮಿಂಚ್ತಾರಾ ರೊನಾಲ್ಡೋ?

ಮತ್ತೊಂದು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ವಿಜರ್‌ಲೆಂಡ್‌ ಸವಾಲು ಗೆದ್ದು 2006ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ಗೇರುವ ತವಕದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋರ ಪೋರ್ಚುಗಲ್‌ ತಂಡವಿದೆ. ನಾಕೌಟ್‌ ಹಂತದಲ್ಲಿ ಆಡಿದ ಕಳೆದ 5 ಪಂದ್ಯ ಸೋತಿರುವ ಪೋರ್ಚುಗಲ್‌ ಒತ್ತಡದಲ್ಲೇ ಕಣಕ್ಕಿಳಿಯಲಿದೆ. ಗುಂಪು ಹಂತದಲ್ಲಿ ರೊನಾಲ್ಡೋ ಪಡೆ ಘಾನಾ, ಉರುಗ್ವೆ ವಿರುದ್ಧ ಗೆದ್ದು, ದಕ್ಷಿಣ ಕೊರಿಯಾಗೆ ಶರಣಾಗಿತ್ತು. ಈ ಪಂದ್ಯದಲ್ಲಿ ಪೋರ್ಚುಗಲ್‌ನ ದೌರ್ಬಲ್ಯಗಳು ಹೊರಬಿದ್ದಿತ್ತು.

FIFA World Cup 2022: ಶೂಟೌಟ್ ಗೆದ್ದ ಕ್ರೊವೇಷಿಯಾ, ಜಪಾನ್ ತಂಡಕ್ಕೆ ನಿರಾಸೆ..!

ಇನ್ನು ಸ್ವಿಜರ್‌ಲೆಂಡ್‌ ಸಹ ಉತ್ತಮ ಲಯದಲ್ಲೇನೂ ಇಲ್ಲ. ತಂಡಕ್ಕೆ ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವ ದಾಖಲೆಯೂ ಇಲ್ಲ. ಸ್ವಿಸ್‌ ತಂಡ ಕೊನೆ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು 1954ರಲ್ಲಿ. ಪೋರ್ಚುಗಲ್‌ ವಿರುದ್ಧ ಗೆಲ್ಲಬೇಕಿದ್ದರೆ ತಂಡ ಅಸಾಧಾರಣ ಆಟವಾಡಬೇಕಿದೆ.

ಇಂದಿನ ಪಂದ್ಯಗಳು

ಸ್ಪೇನ್‌-ಮೊರಾಕ್ಕೊ, ರಾತ್ರಿ 8.30ಕ್ಕೆ

ಪೋರ್ಚುಗಲ್‌-ಸ್ವಿಜರ್‌ಲೆಂಡ್‌, ರಾತ್ರಿ 12.30ಕ್ಕೆ

ಈಗಲಾದ್ರೂ ಹೆಚ್ಚಿನ ನೆರವು ಕೊಡಿ: ಸರ್ಕಾರಕ್ಕೆ ಆಸೀಸ್‌ ಫುಟ್ಬಾಲ್‌ ಕೋಚ್‌ ಒತ್ತಾಯ!

ದೋಹಾ: ವಿಶ್ವಕಪ್‌ನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೋತು ಹೊರಬಿದ್ದರೂ ಟೂರ್ನಿಯಲ್ಲಿ ಆಸ್ಪ್ರೇಲಿಯಾ ತಂಡ ಆಕರ್ಷಕ ಆಟದ ಮೂಲಕ ಗಮನ ಸೆಳೆಯಿತು. ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೋಚ್‌ ಗ್ರಹಾಮ್‌ ಅರ್ನಾಂಡ್‌, ‘ಈಗಲಾದರೂ ಸರ್ಕಾರ ನಮಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಆಸ್ಪ್ರೇಲಿಯಾದಲ್ಲಿ ಫುಟ್ಬಾಲ್‌ಗಿರುವ ಸೌಲಭ್ಯಗಳು ಅಭಿವೃದ್ಧಿಯಾಗಬೇಕು. ದೇಸಿ ಟೂರ್ನಿಗಳ ಗುಣಮಟ್ಟವನ್ನು ಹೆಚ್ಚಿಸಬೇಕಿದೆ. ಇಷ್ಟುವರ್ಷವಾದರೂ ನಮಗ್ಯಾರಿಗೂ ಮನೆ ಇಲ್ಲ. ಸರ್ಕಾರ ಫುಟ್ಬಾಲಿಗರ ಕ್ಷೇಮಾಭಿವೃದ್ಧಿಯತ್ತ ಗಮನ ಹರಿಸಬೇಕಿದೆ’ ಎಂದಿದ್ದಾರೆ.

ಮನೆಯಲ್ಲಿ ದರೋಡೆ: ವಿಶ್ವಕಪ್‌ ಬಿಟ್ಟು ಇಂಗ್ಲೆಂಡ್‌ಗೆ ತೆರಳಿದ ರಹೀಂ ಸ್ಟರ್ಲಿಂಗ್‌

ದೋಹಾ: ಇಂಗ್ಲೆಂಡ್‌ ಫುಟ್ಬಾಲ್‌ ತಂಡದ ಫಾರ್ವರ್ಡ್‌ ಆಟಗಾರ ರಹೀಂ ಸ್ಟರ್ಲಿಂಗ್‌ರ ಲಂಡನ್‌ ನಿವಾಸದಲ್ಲಿ ಭಾನುವಾರ ದರೋಡೆ ನಡೆದಿದೆ. ಸ್ಟರ್ಲಿಂಗ್‌ರ ಪತ್ನಿ ಹಾಗೂ ಇಬ್ಬರು ಮಕ್ಕಳು ಮನೆಯಲ್ಲಿ ಇರುವಾಗಲೇ ಬಂದೂಕುಗಳೊಂದಿಗೆ ನುಗ್ಗಿದ ದರೋಡೆಕೋರರು, 3 ಕೋಟಿ ರು. ಮೌಲ್ಯದ ವಾಚ್‌ಗಳನ್ನು ಕದೊಯ್ದಿದ್ದಾರೆ. ಸೆನೆಗಲ್‌ ವಿರುದ್ಧದ ಪಂದ್ಯಕ್ಕೆ 15 ನಿಮಿಷ ಬಾಕಿ ಇದ್ದಾಗ ಸ್ಟರ್ಲಿಂಗ್‌ಗೆ ಈ ವಿಷಯ ತಿಳಿದಿದ್ದು, ತಂಡದ ಆಡಳಿತದ ಅನುಮತಿ ಪಡೆದು ಲಂಡನ್‌ಗೆ ತೆರಳಿದ್ದಾರೆ. ಶನಿವಾರದ ಕ್ವಾರ್ಟರ್‌ ಫೈನಲ್‌ಗೂ ಮುನ್ನ ಅವರು ಕತಾರ್‌ಗೆ ವಾಪಸಾಗುವ ನಿರೀಕ್ಷೆ ಇದೆ.

Latest Videos
Follow Us:
Download App:
  • android
  • ios