FIFA World Cup 2022: ಶೂಟೌಟ್ ಗೆದ್ದ ಕ್ರೊವೇಷಿಯಾ, ಜಪಾನ್ ತಂಡಕ್ಕೆ ನಿರಾಸೆ..!
ಪೆನಾಲ್ಟಿ ಶೂರ್ಟಟ್ ಗೆದ್ದು ಬೀಗಿದ ಕ್ರೊವೇಷಿಯಾ
ಜಪಾನ್ ಎದುರು ಕ್ರೊವೇಷಿಯಾಗೆ 3-1 ಅಂತರದ ಗೆಲುವು
ಜಪಾನ್ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಕ್ರೊವೇಷಿಯಾ
ಅಲ್ ವಕ್ರಾ(ಡಿ.06): ಕಳೆದ ಬಾರಿಯ ರನ್ನರ್-ಅಪ್ ಕ್ರೊವೇಷಿಯಾ ಈ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಸೋಮವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 3-1 ಗೋಲುಗಳಲ್ಲಿ ಜಯಿಸಿ ಮುನ್ನಡೆಯಿತು.
ನಿಗದಿತ 90 ನಿಮಿಷಗಳಲ್ಲಿ ಎರಡೂ ತಂಡಗಳು ತಲಾ ಒಂದು ಗೋಲುಗಳಲ್ಲಿ ಸಮಬಲ ಸಾಧಿಸಿದವು. 43ನೇ ನಿಮಿಷದಲ್ಲಿ ಜಪಾನ್‌ನ ಡೈಜನ್ ಮಯೆದಾ ಗೋಲು ಬಾರಿಸಿದರೆ, 55ನೇ ನಿಮಿಷದಲ್ಲಿ ಇವಾನ್ ಪೆರಿಸಿಚ್ ಕ್ರೊವೇಷಿಯಾ ಪರ ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರು. 30 ನಿಮಿಷಗಳ ಹೆಚ್ಚುವರಿ ಆಟ ನಡೆಸಲಾಯಿತು. ಆಗ ಎರಡೂ ತಂಡಗಳು ಮುನ್ನಡೆ ಪಡೆಯಲು ವಿಫಲವಾದಾಗ, ಫಲಿತಾಂಶಕ್ಕಾಗಿ ಪೆನಾಲ್ಟಿಶೂಟೌಟ್ ಮೊರೆ ಹೋಗಲಾಯಿತು.
FIFA World Cup 2022: ಕ್ವಾರ್ಟರ್ ಫೈನಲ್‌ಗೆ ಹಾಲಿ ಚಾಂಪಿಯನ್ ಫ್ರಾನ್ಸ್!
ಶೂಟೌಟ್‌ನಲ್ಲಿ ಮೊದಲೆರಡು ಪ್ರಯತ್ನ ನಡೆಸಿದ ಜಪಾನ್‌ನ ತಕುಮಿ ಮಿನಮಿನೊ, ಕೌರು ಮಿಟೊಮ ಗೋಲು ಬಾರಿಸಲಿಲ್ಲ. ಆದರೆ ಕ್ರೊವೇಷಿಯಾದ ನಿಕೊಲಾ ವ್ಲಾಸಿಚ್, ಮಾರ್ಸೆಲೊ ಬ್ರೊಜೊವಿಚ್ ಜಪಾನ್‌ನ ಗೋಲ್‌ಕೀಪರ್‌ನನ್ನು ವಂಚಿಸಲು ಯಶಸ್ವಿಯಾದರು. 3ನೇ ಯತ್ನದಲ್ಲಿ ತಕುಮ ಅಸಾನೊ ಗೋಲು ಬಾರಿಸಿ ಜಪಾನ್ ಆಸೆ ಜೀವಂತವಾಗಿರಿಸಿದರು. ಮಾರ್ಕೊ ಲಿವಾಜ ವೈಫಲ್ಯ ಕಂಡಿದ್ದು ಮತ್ತೊಂದು ತಿರುವು ನೀಡಿತು. ಆದರೆ 4ನೇ ಯತ್ನದಲ್ಲಿ ಮಯಾ ಯೋಶಿದಾ ವಿಫಲರಾಗಿ, ಮಾರಿಯೋ ಪಸಾಲಿಚ್ ಗೋಲು ಬಾರಿಸುತ್ತಿದ್ದಂತೆ ಕ್ರೊವೇಷಿಯಾ ಸಂಭ್ರಮಿಸಲು ಆರಂಭಿಸಿತು. ಗೋಲ್ ಕೀಪರ್ ಡೊಮಿನಿಕ್ ಲಿವಕೊವಿಚ್ ಸಾಹಸ ಕ್ರೊವೇಷಿಯಾವನ್ನು ಕ್ವಾರ್ಟರ್‌ಗೇರಿಸಿತು.
ಶೂಟೌಟ್‌ನಲ್ಲಿ 3ನೇ ಜಯ ಸಾಧಿಸಿದ ಕ್ರೊವೇಷಿಯಾ!
ಕ್ರೊವೇಷಿಯಾ ಪೆನಾಲ್ಟಿಶೂಟೌಟ್‌ನಲ್ಲಿ ಶೇ.100ರ ದಾಖಲೆ ಮುಂದುವರಿಸಿದೆ. ವಿಶ್ವಕಪ್‌ನಲ್ಲಿ ಇದು 3ನೇ ಬಾರಿಗೆ ಶೂಟೌಟ್‌ನಲ್ಲಿ ತಂಡ ಜಯ ಸಾಧಿಸಿರುವುದು. 2018ರ ಪ್ರಿ ಕ್ವಾರ್ಟರ್, ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಶೂಟೌಟ್‌ನಲ್ಲೇ ಗೆದ್ದಿತ್ತು. ಜಪಾನ್ ವಿಶ್ವಕಪ್‌ನಲ್ಲಿ ಈ ಹಿಂದೆ ಕೇವಲ ಒಂದು ಶೂಟೌಟ್ ಎದುರಿಸಿ ಸೋಲುಂಡಿತ್ತು. ಪರುಗ್ವೆ ವಿರುದ್ಧ 3-5ರಲ್ಲಿ ಪರಾಭವಗೊಂಡಿತ್ತು.
ಜಪಾನ್ ಕನಸಿನ ಓಟಕ್ಕೆ ಬ್ರೇಕ್!
ಗುಂಪು ಹಂತದಲ್ಲಿ ಎರಡು ಮಾಜಿ ಚಾಂಪಿಯನ್ ತಂಡವನ್ನು ಸೋಲಿಸಿ ಅಗ್ರಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿದ್ದ ಜಪಾನ್ ಚೊಚ್ಚಲ ಬಾರಿಗೆ ಕ್ವಾರ್ಟರ್‌ಗೇರುವ ಕನಸು ಕಾಣುತ್ತಿತ್ತು. ಆ ಕನಸು ಈಡೇರಲಿಲ್ಲ. 2002, 2010, 2018ರಲ್ಲೂ ತಂಡ ಪ್ರಿ ಕ್ವಾರ್ಟರ್‌ನಲ್ಲೇ ನಿರ್ಗಮಿಸಿತ್ತು.
ಮೆಸ್ಸಿ ಜೊತೆ ಫೋಟೋಗೆ ಆಸೀಸ್ ಫುಟ್ಬಾಲಿಗರ ಕ್ಯೂ!
ದೋಹಾ: ಶನಿವಾರ ಅರ್ಜೆಂಟೀನಾ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತ ಬಳಿಕ ಆಸ್ಪ್ರೇಲಿಯಾ ಫುಟ್ಬಾಲಿಗರು ಸರತಿ ಸಾಲಿನಲ್ಲಿ ನಿಂತು ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಜೊತೆ ಫೋಟೋ ತೆಗಿಸಿಕೊಂಡ ಪ್ರಸಂಗ ನಡೆಯಿತು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಪಂದ್ಯಕ್ಕೂ ಮೊದಲು ಆಸೀಸ್‌ನ ಬಹುತೇಕ ಆಟಗಾರರು ತಾವು ಮೆಸ್ಸಿ ಅಭಿಮಾನಿಗಳು ಎಂದು ಹೇಳಿಕೊಂಡಿದ್ದರು.