FIFA World Cup: ಜರ್ಮನಿ vs ಸ್ಪೇನ್ ದೈತ್ಯರ ಕಾಳಗ
ಫಿಫಾ ವಿಶ್ವಕಪ್ ಟೂರ್ನಿಯಲ್ಲಿಂದು ಜರ್ಮನಿಗೆ ಬಲಿಷ್ಠ ಸ್ಪೇನ್ ಸವಾಲು
ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತ ಫುಟ್ಬಾಲ್ ಫ್ಯಾನ್ಸ್
ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಜರ್ಮನಿ
ದೋಹಾ(ನ.27): ಈ ವರ್ಷ ಏಪ್ರಿಲ್‌ನಲ್ಲಿ ವಿಶ್ವಕಪ್‌ನ ವೇಳಾಪಟ್ಟಿ ಪ್ರಕಟಗೊಂಡಾಗ, ನ.27ರ ಜರ್ಮನಿ ಹಾಗೂ ಸ್ಪೇನ್ ನಡುವಿನ ಗುಂಪು ಹಂತದ ಪಂದ್ಯ ಬಹು ನಿರೀಕ್ಷಿತ ಎನಿಸಿತ್ತು. 8 ತಿಂಗಳ ಬಳಿಕ ಮಾಜಿ ಚಾಂಪಿಯನ್ ಹಾಗೂ ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡಗಳ ನಡುವಿನ ಕಾದಾಟ ಮತ್ತಷ್ಟು ಮಹತ್ವ ಪಡೆದಿದೆ. ಇದಕ್ಕೆ ಕಾರಣ, ಜಪಾನ್ ವಿರುದ್ಧ ಜರ್ಮನಿ ಅನುಭವಿಸಿದ ಆಘಾತಕಾರಿ ಸೋಲು.
ಭಾನುವಾರದ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸೋತರೆ ಜರ್ಮನಿ ಸತತ 2ನೇ ಬಾರಿಗೆ ವಿಶ್ವಕಪ್ ಗುಂಪು ಹಂತದಲ್ಲೇ ಹೊರಬೀಳಲಿದೆ. 2018ರ ವಿಶ್ವಕಪ್‌ನಲ್ಲೂ ಜರ್ಮನಿ ಆರಂಭಿಕ ಹಂತದಲ್ಲೇ ಹೊರಬಿದ್ದಿತ್ತು. ಸ್ಪೇನ್ ವಿರುದ್ಧ ಡ್ರಾ ಮಾಡಿಕೊಂಡರೆ ನಾಕೌಟ್‌ಗೇರುವ ಆಸೆ ಜೀವಂತವಾಗಿ ಉಳಿಯಲಿದೆಯಾದರೂ ಸಾಧ್ಯತೆ ಕಡಿಮೆ.
ಮತ್ತೊಂದೆಡೆ ಸ್ಪೇನ್ ಮತ್ತೊಂದು ಭರ್ಜರಿ ಗೆಲುವಿನ ಮೂಲಕ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಕಾತರಿಸುತ್ತಿದೆ. ಕೋಸ್ಟರಿಕಾ ವಿರುದ್ಧ 7-0 ಅಂತರದ ಜಯದಲ್ಲಿ ಸ್ಪೇನ್‌ನ ಯುವ ತಂಡದ ಸಾಮರ್ಥ್ಯ ಅನಾವರಣಗೊಂಡಿತ್ತು. ಟಿಕಿ-ಟಾಕ ಶೈಲಿಯ ಆಟವನ್ನು ಮುಂದುವರಿಸಲಿರುವ ಸ್ಪೇನ್ ವಿರುದ್ಧ ಜರ್ಮನಿ ಯಾವ ರಣತಂತ್ರದೊಂದಿಗೆ ಕಣಕ್ಕಿಳಿಯಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಸ್ಪೇನ್ ವಿರುದ್ಧ ಕಳಪೆ ದಾಖಲೆ
2 ವರ್ಷಗಳ ಹಿಂದೆ ನೇಷನ್ಸ್ ಲೀಗ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಜರ್ಮನಿ 0-6 ಗೋಲುಗಳಲ್ಲಿ ಸೋತು ಮುಖಭಂಗಕ್ಕೊಳಗಾಗಿತ್ತು. ‘ಲಾ ರೋಜಾ’ ತಂಡದ ವಿರುದ್ಧ ಕೊನೆ ಬಾರಿಗೆ ಜರ್ಮನಿ ಗೆದ್ದಿದ್ದು 8 ವರ್ಷಗಳ ಹಿಂದೆ ಅದೂ ಸ್ನೇಹಾರ್ಥ ಪಂದ್ಯದಲ್ಲಿ. ಇನ್ನು ಫಿಫಾ ಅಧಿಕೃತ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಜರ್ಮನಿ ಕೊನೆ ಬಾರಿಗೆ ಗೆದ್ದಿದ್ದು 1988ರ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ. ಆ ಬಳಿಕ ಜರ್ಮನಿ ವಿರುದ್ಧ ಸ್ಪೇನ್ 3 ಗೆಲುವು, 2 ಡ್ರಾ ಸಾಧಿಸಿದೆ.
FIFA World Cup ಡೆನಾರ್ಕ್ ಮಣಿಸಿ ನಾಕೌಟ್‌ಗೆ ಲಗ್ಗೆಯಿಟ್ಟ ಫ್ರಾನ್ಸ್..!
ಜಪಾನ್‌ಗೆ ನಾಕೌಟ್ ಪ್ರವೇಶಿಸುವ ತವಕ
ದೋಹಾ: ಜರ್ಮನಿ ವಿರುದ್ಧ 2-1 ಗೋಲುಗಳಲ್ಲಿ ಅಚ್ಚರಿಯ ಗೆಲುವು ಸಾಧಿಸಿದ್ದ ಜಪಾನ್, ಭಾನುವಾರ ತನ್ನ 2ನೇ ಪಂದ್ಯದಲ್ಲಿ ಕೋಸ್ಟರಿಕಾವನ್ನು ಬಗ್ಗುಬಡಿದು ‘ಇ’ ಗುಂಪಿನಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲು ಎದುರು ನೋಡುತ್ತಿದೆ. ಸತತ 7ನೇ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಜಪಾನ್, 3 ಬಾರಿ ಪ್ರಿ ಕ್ವಾರ್ಟರ್ ಫೈನಲ್‌ಗೇರಿದ್ದು, ಒಮ್ಮೆಯೂ ಕ್ವಾರ್ಟರ್ ಫೈನಲ್ ತಲುಪಿಲ್ಲ. ಈ ವರ್ಷ ಅಂತಿಮ 8ರ ಹಂತ ತಲುಪುವುದು ನಮ್ಮ ಮೊದಲ ಗುರಿ ಎಂದು ಜಪಾನ್ ಕೋಚ್ ಹೇಳಿದ್ದಾರೆ.
ಇಂದಿನ ಪಂದ್ಯಗಳು
ಜಪಾನ್-ಕೋಸ್ಟರಿಕಾ, ಮಧ್ಯಾಹ್ನ 3.30ಕ್ಕೆ
ಬೆಲ್ಜಿಯಂ-ಮೊರಾಕ್ಕೋ, ಸಂಜೆ 6.30ಕ್ಕೆ
ಕ್ರೊವೇಷಿಯಾ-ಕೆನಡಾ, ರಾತ್ರಿ 9.30ಕ್ಕೆ
ಜರ್ಮನಿ-ಸ್ಪೇನ್, ರಾತ್ರಿ 12.30ಕ್ಕೆ