ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಹಂತಕ್ಕೇರಿದ ಫ್ರಾನ್ಸ್‌ಮೊದಲ ತಂಡವಾಗಿ ನಾಕೌಟ್ ಹಂತಕ್ಕೇರಿದ ಹಾಲಿ ಚಾಂಪಿಯನ್ಎರಡು ಗೋಲು ಬಾರಿಸಿ ತಂಡದ ಗೆಲುವಿನ ರೂವಾರಿಯಾದ ಎಂಬಾಪೆ

ದೋಹಾ(ನ.27): ಕಿಲಿಯಾನ್‌ ಎಂಬಾಪೆ ಬಾರಿಸಿದ 2 ಗೋಲುಗಳು ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡವನ್ನು ವಿಶ್ವಕಪ್‌ನ ನಾಕೌಟ್‌ಗೇರಿಸಿದೆ. ಡೆನ್ಮಾರ್ಕ್ ವಿರುದ್ಧ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ 2-1ರ ಗೆಲುವು ಸಾಧಿಸಿದ ಫ್ರಾನ್ಸ್‌, ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾಯಿತು. ಮೊದಲಾರ್ಧ ಗೋಲು ರಹಿತ ಅಂತ್ಯ ಕಂಡ ಬಳಿಕ, 61ನೇ ನಿಮಿಷದಲ್ಲಿ ಎಂಬಾಪೆ ಮೊದಲ ಗೋಲು ಬಾರಿಸಿದರು. ಆದರೆ ಫ್ರಾನ್ಸ್‌ನ ಸಂಭ್ರಮ ಹೆಚ್ಚು ಹೊತ್ತು ಬಾಳಲಿಲ್ಲ. ಆ್ಯಂಡ್ರೆಯೆಸ್‌ ಕ್ರಿಸ್ಟೆನ್ಸೆನ್‌ 68ನೇ ನಿಮಿಷದಲ್ಲಿ ಡೆನ್ಮಾರ್ಕ್ ಸಮಬಲ ಸಾಧಿಸಲು ನೆರವಾದರು.

ಫ್ರಾನ್ಸ್‌ ಡ್ರಾಗೆ ಸಮಾಧಾನಪಡಲು ಎಂಬಾಪೆ ಬಿಡಲಿಲ್ಲ. 86ನೇ ನಿಮಿಷದಲ್ಲಿ ಆ್ಯಂಟೋನಿ ಗ್ರೀಝ್‌ಮನ್‌ ನೀಡಿದ ಪಾಸನ್ನು ಆಕರ್ಷಕ ಹೆಡ್ಡರ್‌ ಮೂಲಕ ಗೋಲಾಗಿಸಿದ ಎಂಬಾಪೆ ತಂಡದ ಗೆಲುವನ್ನು ಖಚಿತಪಡಿಸಿದರು.

ಡಚ್‌ ಜಯದ ಕನಸಿಗೆ ಅಡ್ಡಿಯಾದ ಈಕ್ವೆಡಾರ್‌

ಅಲ್‌ ರಯ್ಯನ್‌: ಈಕ್ವೆಡಾರ್‌ ನಾಯಕ ಎನ್ನರ್‌ ವ್ಯಾಲೆನ್ಸಿಯಾ ಈ ವಿಶ್ವಕಪ್‌ನಲ್ಲಿ 3ನೇ ಗೋಲು ಬಾರಿಸುವ ಮೂಲಕ ನೆದರ್‌ಲೆಂಡ್‌್ಸನ ಗೆಲುವಿನ ಆಸೆಗೆ ತಣ್ಣೀರೆರೆಚಿದರು. 6ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದರೂ 1-1ರ ಡ್ರಾಗೆ ಡಚ್‌ ಪಡೆ ತೃಪ್ತಿಪಡಬೇಕಾಯಿತು. ಈ ಫಲಿತಾಂಶದಿಂದ ಆತಿಥೇಯ ಕತಾರ್‌, ವಿಶ್ವಕಪ್‌ನಿಂದ ಹೊರಬಿತ್ತು.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ನೆದರ್‌ಲೆಂಡ್‌್ಸ ನಿರೀಕ್ಷಿತ ಆಟ ಪ್ರದರ್ಶಿಸುವಲ್ಲಿ ವಿಫಲವಾಯಿತು. ತಂಡ ಸತತ 2ನೇ ಗೆಲುವಿನೊಂದಿಗೆ ನಾಕೌಟ್‌ ಹಂತಕ್ಕೇರುವ ನಿರೀಕ್ಷೆಯಲ್ಲಿತ್ತು. ಆದರೆ ಈಕ್ವೆಡಾರ್‌ನ ರಕ್ಷಣಾ ಪಡೆ ಇದಕ್ಕೆ ಅವಕಾಶ ನೀಡಲಿಲ್ಲ. ಆದರೂ 2 ಪಂದ್ಯಗಳಿಂದ 4 ಅಂಕ ಗಳಿಸಿ ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿರುವ ನೆದರ್‌ಲೆಂಡ್‌್ಸ, 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಕತಾರ್‌ ವಿರುದ್ಧ ಡ್ರಾ ಸಾಧಿಸಿದರೂ ಸಾಕು ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿದೆ.

ಪಂದ್ಯಕ್ಕೂ ಮೊದಲು ಸೆಕ್ಸ್ ತಪ್ಪಲ್ಲ, ಸ್ಪೇನ್ ಕೋಚ್ ಹೇಳಿಕೆ ತಂಡದ ಫೆರಾನ್‌ಗೆ ಮಾತ್ರ ಅನ್ವಯವಾಗಲ್ಲ!

ಪಂದ್ಯದ 6ನೇ ನಿಮಿಷದಲ್ಲಿ ಕೊಡಿ ಗಾಕ್ಪೋ ಬಾರಿಸಿದ ಗೋಲು ನೆದರ್‌ಲೆಂಡ್‌್ಸಗೆ ಮುನ್ನಡೆ ಒದಗಿಸಿತು. ಇದು ಈ ವಿಶ್ವಕಪ್‌ನಲ್ಲಿ ದಾಖಲಾದ ಅತಿವೇಗದ ಗೋಲು. ಆದರೆ 49ನೇ ನಿಮಿಷದಲ್ಲಿ ವ್ಯಾಲೆನ್ಸಿಯಾ ಈಕ್ವೆಡಾರ್‌ ಸಮಬಲ ಸಾಧಿಸಲು ನೆರವಾದರು.

06 ಗೋಲು: ವ್ಯಾಲೆನ್ಸಿಯಾ ಸ್ಪೆಷಲ್‌!

2014ರಿಂದ 2022ರ ವರೆಗೂ ವಿಶ್ವಕಪ್‌ನಲ್ಲಿ ಈಕ್ವೆಡಾರ್‌ 6 ಗೋಲುಗಳನ್ನು ದಾಖಲಿಸಿದ್ದು, ಆರೂ ಗೋಲುಗಳನ್ನು ಎನ್ನಾರ್‌ ವ್ಯಾಲೆನ್ಸಿಯಾ ಅವರೇ ಬಾರಿಸಿರುವುದು ವಿಶೇಷ. ಈ ವಿಶ್ವಕಪ್‌ನಲ್ಲಿ 33 ವರ್ಷದ ಈಕ್ವೆಡಾರ್‌ ನಾಯಕ 3 ಗೋಲು ಗಳಿಸಿದ್ದಾರೆ.

ಜಯದ ಓಟಕ್ಕೆ ಬ್ರೇಕ್‌

ವಿಶ್ವಕಪ್‌ನ ಗುಂಪು ಹಂತದಲ್ಲಿ ಸತತ 7 ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದ ನೆದರ್‌ಲೆಂಡ್‌್ಸನ ಓಟಕ್ಕೆ ಬ್ರೇಕ್‌ ಬಿದ್ದಿದೆ. 2010, 2014ರ ವಿಶ್ವಕಪ್‌ಗಳಲ್ಲಿ ಡಚ್‌ ತಂಡ ಗುಂಪು ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಜಯಿಸಿತ್ತು. ಈ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸೆನೆಗಲ್‌ ವಿರುದ್ಧ 2-0ಯಲ್ಲಿ ಜಯಿಸಿತ್ತು.

ಇಂಗ್ಲೆಂಡ್‌ಗೆ ಗೆಲ್ಲಲು ಬಿಡದ ಅಮೆರಿಕ: 0-0 ಡ್ರಾ!

ಅಲ್‌ ಖೋರ್‌: ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧ ಮೊದಲ ಗೆಲುವಿಗೆ ಇಂಗ್ಲೆಂಡ್‌ ಇನ್ನಷ್ಟು ಸಮಯ ಕಾಯಬೇಕಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯ ಗೋಲು ರಹಿತ ಡ್ರಾಗೊಂಡಿತು. ಇದು ಈ ವಿಶ್ವಕಪ್‌ನಲ್ಲಿ 0-0ಯಲ್ಲಿ ಡ್ರಾ ಆದ 5ನೇ ಪಂದ್ಯ. 1950ರಲ್ಲಿ ಇಂಗ್ಲೆಂಡ್‌ ವಿರುದ್ಧ 1-0 ಅಂತರದಲ್ಲಿ ಜಯಿಸಿದ್ದ ಅಮೆರಿಕ, 2010ರಲ್ಲಿ 1-1ರಲ್ಲಿ ಡ್ರಾ ಸಾಧಿಸಿತ್ತು. ಯುವ ಪಡೆಯೊಂದಿಗೆ ವಿಶ್ವಕಪ್‌ನಲ್ಲಿ ಕಣಕ್ಕಿಳಿದಿರುವ ಅಮೆರಿಕದ ವೇಗದ ಮುಂದೆ ಮಂಕಾಯಿತು. ಮೊದಲ ಪಂದ್ಯದಲ್ಲಿ ಇರಾನ್‌ ವಿರುದ್ಧ 6-2ರಲ್ಲಿ ಗೆದ್ದಿದ್ದ ಇಂಗ್ಲೆಂಡ್‌ಗೆ ಅಮೆರಿಕದ ರಕ್ಷಣಾ ಪಡೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಜಯಿಸಿದ್ದರೆ ಇಂಗ್ಲೆಂಡ್‌ ನಾಕೌಟ್‌ಗೇರುವುದು ಖಚಿತವಾಗುತ್ತಿತ್ತು. ಇದೀಗ ಕೊನೆ ಪಂದ್ಯದಲ್ಲಿ ಇಂಗ್ಲೆಂಡ್‌ ಕನಿಷ್ಠ ಡ್ರಾ ಸಾಧಿಸಬೇಕಿದೆ. ‘ಬಿ’ ಗುಂಪಿನಲ್ಲಿ ನಾಲ್ಕೂ ತಂಡಗಳಿಗೆ ನಾಕೌಟ್‌ಗೇರಲು ಅವಕಾಶವಿದೆ.