Asianet Suvarna News Asianet Suvarna News

FIFA World Cup: ಮೆಸ್ಸಿ ಮ್ಯಾಜಿಕ್‌, ಪೆನಾಲ್ಟಿಯಲ್ಲಿ ಕಮಾಲ್‌, ಫುಟ್‌ಬಾಲ್‌ ಜಗತ್ತಿಗೆ ಅರ್ಜೆಂಟೀನಾ ಕಿಂಗ್!

ಬರೋಬ್ಬರಿ 36 ವರ್ಷಗಳ ಬಳಿಕ ದಕ್ಷಿಣ ಅಮೆರಿಕದ ಫುಟ್‌ಬಾಲ್‌ ಪ್ರೇಮದ ದೇಶ ಅರ್ಜೆಂಟೀನಾ ಕಾಲ್ಚೆಂಡಾಟದ ಕಿಂಗ್‌ ಎನಿಸಿಕೊಂಡಿದೆ. ಭಾನುವಾರ ದೋಹಾದ ಲೌಸೇಲ್‌ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯ ನಾಟಕೀಯವಾಗಿ ಸಾಗಿತು. ಕೊನೆಗೆ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ 3ನೇ ಬಾರಿಗೆ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
 

FIFA World Cup Final 2022 Argentina Beat France in penalties and won World cup for third time Lionel Messi Qatar san
Author
First Published Dec 18, 2022, 11:25 PM IST

ದೋಹಾ (ಡಿ.18): ನಾಟಕೀಯ ಬೆಳವಣಿಗೆ ಸಾಕ್ಷಿಯಾದ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿದ ಅರ್ಜೆಂಟೀನಾ ತಂಡ 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ. ನಿಗದಿತ ಸಮಯ ಹಾಗೂ ಹಚ್ಚುವರಿ ಸಮಯದ ಅಂತ್ಯಕ್ಕೆ ಪಂದ್ಯ 3-3 ಗೋಲುಗಳಿಂದ ಸಮಬಲ ಕಂಡ ಕಾರಣಕ್ಕೆ ಪೆನಾಲ್ಟಿ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ವಿಶ್ವಕಪ್‌ ಫೈನಲ್‌ ಪಂದ್ಯ ಪೆನಾಲ್ಟಿ ಮೂಲಕ ನಿರ್ಧಾರವಾಗಿದ್ದು ಇದು ಮೂರನೇ ಬಾರಿ. ಪೆನಾಲ್ಟಿಯಲ್ಲಿ ಅರ್ಜೆಂಟಿನಾ ಸಾಹಸಿಕ ಆಟವಾಡಿದ್ದರಿಂದ ವಿಶ್ವ ಫುಟ್‌ಬಾಲ್‌ ಲೋಕಕ್ಕೆ ಚಾಂಪಿಯನ್‌ ಎನಿಸಿಕೊಂಡಿತು. ಪೆನಾಲ್ಟಿಯಲ್ಲಿ ಅರ್ಜೆಂಟೀನಾ 4-1 ಅಂತರದಿಂದ ಫ್ರಾನ್ಸ್‌ ತಂಡವನ್ನು ಸೋಲಿಸಿತು.

ಆಧುನಿಕ ಫುಟ್‌ಬಾಲ್‌ನ ಸರ್ವಶ್ರೇಷ್ಠ ಆಟಗಾರ ಲಿಯೋನೆಲ್‌ ಮೆಸ್ಸಿ ಪಂದ್ಯದ 108ನೇ ನಿಮಿಷದಲ್ಲಿ ಬಾರಿಸಿದ ಈವರೆಗಿನ ಅವರ ವೃತ್ತಿಜೀವನದ ಸ್ಮರಣೀಯ ಗೋಲಿನ ಸಹಾಯದಿಂದ ಅರ್ಜೆಂಟೀನಾ ತಂಡ 2022ರ ಫಿಫಾ ವಿಶ್ವಕಪ್‌ ಚಾಂಪಿಯನ್‌ ಎನಿಸಿಕೊಂಡಿದೆ. ಆ ಮೂಲಕ 36 ವರ್ಷಗಳ ಬಳಿಕ ದಕ್ಷಿಣ ಅಮೆರಿಕದ ದೇಶ ಕಾಲ್ಚೆಂಡಾಟದ ಕಾಳಗದಲ್ಲಿ ವಿಶ್ವಕ್ಕೆ ದೊರೆ ಎನಿಸಿಕೊಂಡಿದೆ. ನಿಗದಿತ ಅವಧಿಯಲ್ಲಿ ಪಂದ್ಯ 2-2 ರಿಂದ ಸಮಬಲವಾಗಿದ್ದಾಗ ಹೆಚ್ಚುವರಿ ಸಮಯದ ಮೊದಲ ಅವಧಿಯಲ್ಲೂ ಯಾವುದೇ ಗೋಲು ಬಂದಿರಲಿಲ್ಲ. 2ನೇ ಅವಧಿ ಆರಂಭವಾದ ಮೂರನೇ ನಿಮಿಷದಲ್ಲಿ ಅರ್ಜೆಂಟೀನಾದ ದಾಳಿ ಎಷ್ಟು ಅತ್ಯುತ್ತಮವಾಗಿತ್ತೆಂದರೆ, ಮೆಸ್ಸಿ ಅಮೂಲ್ಯ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಲಾಟೋರೋ ಮಾರ್ಟಿನೆಜ್‌ ಬಾರಿಸಿದ ಶಾಟ್‌ ಅನ್ನು ಫ್ರಾನ್ಸ್‌ ಗೋಲ್‌ಕೀಪರ್‌ ತಡೆದರಾದರೂ, ಅವರ ಎದುರಿನಲ್ಲಿಯೇ ಇದ್ದ ಲಿಯೋನೆಲ್‌ ಮೆಸ್ಸಿ, ಚೆಂಡಿಗೆ ಸಣ್ಣ ಟಚ್‌ ನೀಡುವ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಈ ವೇಳೆ ಆಫ್‌ಸೈಡ್‌ ಗೋಲಿನ ಅನುಮಾನ ಬಂದಿತ್ತಾದರೂ, ವಿಎಆರ್ ತ್ವರಿತವಾಗಿ ಇದು ಗೋಲು ಎಂದು ಪರಿಗಣಿಸಿದ್ದರಿಂದ ಅರ್ಜೆಂಟೀನಾದ ಗೋಲು ಮಾನ್ಯಗೊಂಡಿತು.

ಆದರೆ, ಇದಾದ 10 ನಿಮಿಷಕ್ಕೆ ಎಂಬಾಪೆ ಬಾರಿಸಿದ ಶಾಟ್‌ ಪೆನಾಲ್ಟಿ ಆವರಣದಲ್ಲಿ ಅರ್ಜೆಂಟೀನಾದ ಮಾಂಟಿಯಲ್‌ ಕೈ ತಾಕಿತು. ಹ್ಯಾಂಡ್‌ಬಾಲ್‌ ಕಾರಣಕ್ಕೆ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಎಂಬಾಪೆ ತಮ್ಮ ಮೂರನೇ ಗೋಲು ಬಾರಿಸಿ ಪಂದ್ಯದಲ್ಲಿ ಮತ್ತೊಮ್ಮೆ ಸಮಬಲಕ್ಕೆ ಕಾರಣರಾದರು. 

FIFA World Cup: ಫೈನಲ್‌ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ಲಿಯೋನೆಲ್‌ ಮೆಸ್ಸಿ!

ಮೊದಲ ಅವಧಿಯ ಆಟದಲ್ಲಿ ಅರ್ಜೆಂಟೀನಾ ಎರಡು ಗೋಲು ಬಾರಿಸಿದರೆ, ಪಂದ್ಯದ ಕೊನೆಯ ಹಂತದಲ್ಲಿ ಒಂದೇ ನಿಮಿಷ ಅಂತರದಲ್ಲಿ ಫ್ರಾನ್ಸ್‌ನ ಕೈಲಿಯನ್‌ ಎಂಬಾಪೆ ಮಿಂಚಿನ ಸಂಚಾರ ಮಾಡಿದಂತೆ ಎರಡು ಗೋಲು ಸಿಡಿಸಿ ಫ್ರಾನ್ಸ್‌ ತಂಡದ ಸಮಬಲಕ್ಕೆ ಕಾರಣರಾಗಿದ್ದರು. ಪಂದ್ಯದ 23ನೇ ನಿಮಿಷದಲ್ಲಿ ಲಿಯೋನೆಲ್‌ ಮೆಸ್ಸಿ ಅರ್ಜೆಂಟೀನಾ ಪರವಾಗಿ ಗೋಲು ಬಾರಿಸಿದ್ದರೆ, ಅದಾದ ಕೆಲವೇ ನಿಮಿಷಗಳಲ್ಲಿ ಏಂಜೆಲ್‌ ಡಿ ಮಾರಿಯಾ ಗೋಲು ಸಿಡಿಸಿ ಅರ್ಜೆಂಟೀನಾದ ಸಂಭ್ರಮಕ್ಕೆ ಕಾರಣರಾಗಿದ್ದರು. ಈ ಮುನ್ನಡೆಯನ್ನು ಅರ್ಜೆಂಟೀನಾ ಮೊದಲ ಅವಧಿ ಮುಗಿಯುವವರೆಗೂ ಕಾಯ್ದುಕೊಂಡಿತ್ತು.

Story Of Lionel Messi: ಕುಬ್ಜನಾಗುವ ಹಾದಿಯಲ್ಲಿದ್ದ ಮೆಸ್ಸಿಯನ್ನು ಎಳೆದು, ಬಿಗಿ ಮಾಡಿದ್ದ ಬಾರ್ಸಿಲೋನಾ ಎಫ್‌ಸಿ!

ಒಂದೇ ನಿಮಿಷದ ಆಟದಲ್ಲಿ ಫ್ರಾನ್ಸ್‌ಗೆ ಸಂಭ್ರಮ ತಂದ ಎಂಬಾಪೆ: ಭವಿಷ್ಯದ ಫುಟ್‌ಬಾಲ್‌ ಆಟಗಾರ ಎನ್ನುವ ಕೀರ್ತಿಯನ್ನು ಕಳೆದ ವಿಶ್ವಕಪ್‌ನಲ್ಲಿಯೇ ಗಳಿಸಿಕೊಂಡಿದ್ದ ಕೈಲಿಯನ್‌ ಎಂಬಾಪೆ ಪಂದ್ಯ ಮುಗಿಯುವ 10 ನಿಮಿಷಗಳಷ್ಟೇ ಇರುವಾಗಿ ತಮ್ಮ ನಿಜ ಆಟದ ಪ್ರದರ್ಶನ ಮಾಡಿದರು. 80ನೇ ನಿಮಿಷದಲ್ಲಿ ನಿಕೋಲಸ್‌ ಒಟಮೆಂಡಿ ಪೆನಾಲ್ಟಿ ಆವರಣದಲ್ಲಿ ಫ್ರಾನ್ಸ್‌ ಆಟಗಾರನನ್ನು ಫೌಲ್‌ ಮಾಡಿದ್ದ ಕಾರಣಕ್ಕೆ, ರೆಫ್ರಿ ಪೆನಾಲ್ಟಿ ಘೋಷಿಸಿದರು. ಈ ಅವಕಾಶದಲ್ಲಿ ಎಂಬಾಪೆ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಅರ್ಜೆಂಟೀನಾದ ಗೋಲ್‌ಕೀಪರ್‌, ಚೆಂಡು ಬಂದ ಕಡೆಗೆ ಜಂಪ್‌ ಮಾಡಿದರಾದರೂ ಅವರ ಕೈಗೆ ತಾಕಿ ಚೆಂಡು ಗೋಲು ಪೆಟ್ಟಿಗೆಗೆ ಸೇರಿತು. ಹಿನ್ನಡೆ ತಗ್ಗಿಸಿದ ಖುಷಿಯಲ್ಲಿದ್ದ ಫ್ರಾನ್ಸ್‌ ಮರು ನಿಮಿಷದಲ್ಲಿ ಸಮಬಲದ ಗೋಲು ದಾಖಲಿಸಿತು. ನಾಲ್ಕು ಆಟಗಾರರ ನಡುವಿನ ತಾಳಮೇಳದಿಂದ ಚೆಂಡನ್ನು ಪಡೆದುಕೊಂಡ ಎಂಬಾಪೆ ಆಕರ್ಷಕವಾಗಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದಾಗ ಗ್ಯಾಲರಿಯಲ್ಲಿದ್ದ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌ ಎದ್ದೆದ್ದು ಕುಣಿದಿದ್ದರು. ಕೇವಲ 97 ಸೆಕೆಂಡ್‌ನ ಅಂತರದಲ್ಲಿ ಎಂಬಾಪೆ ಎರಡು ಗೋಲು ಸಿಡಿಸಿದ್ದರು.

Follow Us:
Download App:
  • android
  • ios