ಫಿಫಾ ವಿಶ್ವಕಪ್‌ನಲ್ಲಿ, ಆಸ್ಟ್ರೇಲಿಯಾ ವಿರುದ್ಧ 2-0 ಗೋಲುಗಳಿಂದ ಗೆದ್ದ ಅಮೆರಿಕ ನಾಕೌಟ್‌ ಹಂತ ಪ್ರವೇಶಿಸಿದೆ. ಬ್ರೆಜಿಲ್‌ ತಂಡವು ಹೈಟಿಯನ್ನು 3-0 ಅಂತರದಿಂದ ಸೋಲಿಸಿ ಮೊದಲ ಜಯ ದಾಖಲಿಸಿತು. ಇತರೆ ಪಂದ್ಯಗಳಲ್ಲಿ, ಪರಗ್ವೆ ಮತ್ತು ಮೊರೊಕ್ಕೊ ಕ್ರಮವಾಗಿ ಟರ್ಕಿ ಮತ್ತು ಸ್ಕಾಟ್ಲೆಂಡ್‌ ವಿರುದ್ಧ ಜಯ ಸಾಧಿಸಿದವು.

ಸಿಯಾಟೆಲ್‌: ತಾರಾ ಆಟಗಾರ ಕ್ರಿಸ್ಟಿಯನ್‌ ಪುಲಿಸಿಚ್‌ರ ಅನುಪಸ್ಥಿತಿಯಲ್ಲೂ ಅಮೆರಿಕ, ಫಿಫಾ ವಿಶ್ವಕಪ್‌ನ ನಾಕೌಟ್‌ ಹಂತ ಪ್ರವೇಶಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ 2-0 ಗೋಲುಗಳ ಜಯ ದೊರೆಯಿತು. ಕೇವಲ 2 ಪಂದ್ಯಗಳನ್ನಾಡಿ ಅಮೆರಿಕ ನಾಕೌಟ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದು ಇದೇ ಮೊದಲು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂದ್ಯದ 11ನೇ ನಿಮಿಷದಲ್ಲೇ ಆಸ್ಟ್ರೇಲಿಯಾದ ಕ್ಯಾಮರೂನ್‌ ಬರ್ಗೆಸ್‌ ಸ್ವಂತ ಗೋಲು ಬಾರಿಸಿ, ಅಮೆರಿಕಕ್ಕೆ ಆರಂಭಿಕ ಮುನ್ನಡೆ ಬಿಟ್ಟುಕೊಟ್ಟರು. 43ನೇ ನಿಮಿಷದಲ್ಲಿ ಆ್ಯಂಟೋನಿಯೊ ಫ್ರೀಮನ್‌ ಬಾರಿಸಿದ ಗೋಲು, ಅಮೆರಿಕಕ್ಕೆ 2-0 ಮುನ್ನಡೆ ಒದಗಿಸಿತು. ದ್ವಿತೀಯಾರ್ಧದಲ್ಲೂ ಮುನ್ನಡೆ ಕಾಯ್ದುಕೊಂಡ ಅಮೆರಿಕ ಪಂದ್ಯ ಜಯಿಸಿ, ಅಂತಿಮ-32ರ ಸುತ್ತಿಗೇರಿತು.

65 ಸೆಕೆಂಡಲ್ಲೇ ಗೋಲು ಬಾರಿಸಿ ಗೆದ್ದ ಪರಗ್ವೆ!

ಸ್ಯಾಂಟಾ ಕ್ಲಾರಾ: ಮಥಿಯಾಸ್‌ ಗಲರ್ಜಾ ಪಂದ್ಯ ಆರಂಭಗೊಂಡ ಕೇವಲ 65 ಸೆಕೆಂಡ್‌ಗಳಲ್ಲೇ ಗೋಲು ಗಳಿಸಿ, ಟರ್ಕಿ ವಿರುದ್ಧ ಪರಗ್ವೆಗೆ 1-0 ಅಂತರದ ಜಯ ತಂದುಕೊಟ್ಟರು. ಈ ವಿಶ್ವಕಪ್‌ನಲ್ಲಿ ಇದು ಅತಿವೇಗದ ಗೋಲು ಎನಿಸಿತು. ಇನ್ನು, ಸತತ 2ನೇ ಸೋಲು ಕಂಡು ಟರ್ಕಿ ಟೂರ್ನಿಯಿಂದ ಹೊರಬಿತ್ತು.

ಸ್ಕಾಟ್ಲೆಂಡ್‌ ವಿರುದ್ಧ ಗೆದ್ದ ಮೊರೊಕ್ಕೊ

ಬೋಸ್ಟನ್‌: ಚೊಚ್ಚಲ ವಿಶ್ವಕಪ್‌ ಆಡುತ್ತಿರುವ ಇಸ್ಮಾಯಿಲ್‌ ಸೈಬರಿ ಬಾರಿಸಿದ ಗೋಲಿನ ನೆರವಿನಿಂದ ಸ್ಕಾಟ್ಲೆಂಡ್‌ ವಿರುದ್ಧ ಮೊರಾಕ್ಕೊ 1-0 ಅಂತರದ ಜಯ ಸಾಧಿಸಿ, ನಾಕೌಟ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಸೈಬರಿ, ಪಂದ್ಯದ 21ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಬ್ರೆಜಿಲ್‌ಗೆ ಮೊದಲ ಜಯ

ಫಿಲಡೆಲ್ಫಿಯಾ: 5 ಬಾರಿ ಚಾಂಪಿಯನ್‌ ಬ್ರೆಜಿಲ್‌, 2026ರ ಫಿಫಾ ವಿಶ್ವಕಪ್‌ನಲ್ಲಿ ಮೊದಲ ಜಯ ಸಾಧಿಸಿದೆ. ಹೈಟಿ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 3-0 ಗೋಲುಗಳ ಜಯ ಸಾಧಿಸಿತು. 1974ರ ಬಳಿಕ ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದ ಹೈಟಿ, ಸತತ 2 ಸೋಲುಗಳೊಂದಿಗೆ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎನಿಸಿತು.

ಮಥಾಯೆಸ್‌ ಕುನ್ಹಾ 23, 36ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ವಿನಿಶಿಯಸ್‌ ಜೂನಿಯರ್‌ 45+3ನೇ ನಿಮಿಷದಲ್ಲಿ ತಂಡದ ಪರ 3ನೇ ಗೋಲು ದಾಖಲಿಸಿದರು. ಮೊದಲಾರ್ಧದಲ್ಲೇ 3-0 ಮುನ್ನಡೆ ಪಡೆದ ಬ್ರೆಜಿಲ್‌, ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ವಿಫಲವಾಯಿತು. ಮೀನಖಂಡ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ನೇಯ್ಮರ್‌ ಸತತ 2ನೇ ಪಂದ್ಯಕ್ಕೂ ಗೈರಾದರು.