Asianet Suvarna News Asianet Suvarna News

‘ಮೆಸ್ಸಿ ನನ್ನ ಕಣ್ಣಿಗೆ ಕಾಣದಂತೆ ಓಡಾಡಲಿ’ ಫುಟ್ಬಾಲ್ ದಿಗ್ಗಜನಿಗೆ ಮೆಕ್ಸಿಕೋ ಬಾಕ್ಸರ್‌ನಿಂದ ಬೆದರಿಕೆ!

ಮೆಕ್ಸಿಕೋ ಎದುರು ಭರ್ಜರಿ ಗೆಲುವು ಸಾಧಿಸಿದ ಅರ್ಜೆಂಟೀನಾ
ಮೆಕ್ಸಿಕೋ ತಂಡದ ಜೆರ್ಸಿ ಕಾಲಿನಿಂದ ಮೆಸ್ಸಿ ನೆಲ ಒರೆಸಿದ ವಿಡಿಯೋ ವೈರಲ್
‘ಮೆಸ್ಸಿ ನನ್ನ ಕಣ್ಣಿಗೆ ಕಾಣದಂತೆ ಓಡಾಡಲಿ’ ಎಚ್ಚರಿಕೆ ನೀಡಿದ ಬಾಕ್ಸರ್

FIFA World Cup 2022 World Champion Boxer Threatens Lionel Messi For Disrespecting Mexico Jersey kvn
Author
First Published Nov 29, 2022, 9:41 AM IST

ದೋಹಾ(ನ.29): ಮೆಕ್ಸಿಕೋ ವಿರುದ್ಧ ರೋಚಕ ಗೆಲುವು ಸಾಧಿಸಿ ವಿಶ್ವಕಪ್‌ನ ನಾಕೌಟ್‌ ರೇಸ್‌ನಲ್ಲಿ ಉಳಿದ ಬಳಿಕ ಅರ್ಜೆಂಟೀನಾ ತಂಡ ತನ್ನ ಡ್ರೆಸ್ಸಿಂಗ್‌ ಕೋಣೆಯಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಸಿತ್ತು. ಈ ವೇಳೆ ಅರ್ಜೆಂಟೀನಾ ನಾಯಕ ಲಿಯೋನೆಲ್‌ ಮೆಸ್ಸಿ, ಮೆಕ್ಸಿಕೋ ತಂಡದ ಜೆರ್ಸಿ ಹಾಗೂ ಆ ದೇಶದ ಬಾವುಟವನ್ನು ಬಳಸಿ ನೆಲ ಒರೆಸಿದರು ಎನ್ನಲಾದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಈ ಸಂಬಂಧ ಮೆಕ್ಸಿಕೋದ ಬಾಕ್ಸರ್‌ ಸೌಲ್‌ ಕ್ಯಾನೆಲೊ ಆಲ್ವರಜ್‌ ಮೆಸ್ಸಿಗೆ ಬೆದರಿಕೆ ಹಾಕಿದ್ದಾರೆ. ‘ಮೆಸ್ಸಿ ನನ್ನ ಕಣ್ಣಿಗೆ ಕಾಣದಂತೆ ಓಡಾಡಲಿ’ ಎಂದಿದ್ದಾರೆ.

ನಾಕೌಟ್‌ ರೇಸಲ್ಲಿ ಉಳಿದ ಅರ್ಜೆಂಟೀನಾ: ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದೆನಿಸಿಕೊಂಡು ವಿಶ್ವಕಪ್‌ಗೆ ಕಾಲಿಟ್ಟಅರ್ಜೆಂಟೀನಾ, ನಾಕೌಟ್‌ ರೇಸ್‌ನಲ್ಲಿ ಉಳಿದುಕೊಂಡಿದೆ. ಶನಿವಾರ ರಾತ್ರಿ ನಡೆದ ಮೆಕ್ಸಿಕೋ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ರೋಚಕ ಗೆಲುವು ಸಾಧಿಸಿ 3 ಅಂಕ ಸಂಪಾದಿಸಿತು.

ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾಗೆ ಶರಣಾಗಿದ್ದ ಅರ್ಜೆಂಟೀನಾಕ್ಕೆ ಮೆಕ್ಸಿಕೋ ವಿರುದ್ಧದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ಭಾರೀ ಒತ್ತಡದಲ್ಲಿ ಕಣಕ್ಕಿಳಿದ ಅರ್ಜೆಂಟೀನಾ ಮೊದಲಾರ್ಧದಲ್ಲಿ ಗೋಲು ಬಾರಿಸಲು ವಿಫಲವಾಯಿತು ಆದರೆ, ಮೆಕ್ಸಿಕೋಗೂ ಗೋಲು ಬಾರಿಸಲು ಅವಕಾಶ ನೀಡಲಿಲ್ಲ. ಲಿಯೋನೆಲ್‌ ಮೆಸ್ಸಿ 64ನೇ ನಿಮಿಷದಲ್ಲಿ ಬಾರಿಸಿದ ಗೋಲು ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅರ್ಜೆಂಟೀನಾ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಎನ್ಜೋ ಫೆರ್ನಾಂಡೆಜ್‌ 87ನೇ ನಿಮಿಷದಲ್ಲಿ ತಂಡದ ಮುನ್ನಡೆಯನ್ನು 2-0ಗೇರಿಸಿದರು. ಜಯದೊಂದಿಗೆ ಅರ್ಜೆಂಟೀನಾ ನಿಟ್ಟುಸಿರು ಬಿಟ್ಟಿತು.

FIFA World Cup ಕೊರಿಯಾಕ್ಕೆ ಸೋಲುಣಿಸಿ ನಾಕೌಟ್ ರೇಸಲ್ಲಿ ಉಳಿದ ಘಾನಾ!

ನಾಕೌಟ್‌ ಹಾದಿ ಹೇಗೆ?

‘ಸಿ’ ಗುಂಪಿನಲ್ಲಿ ಪೋಲೆಂಡ್‌ 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, 3 ಅಂಕ ಪಡೆದಿರುವ ಅರ್ಜೆಂಟೀನಾ 2ನೇ ಸ್ಥಾನದಲ್ಲಿದೆ. ಸೌದಿ ಅರೇಬಿಯಾ ಸಹ 3 ಅಂಕ ಹೊಂದಿದ್ದು, -1 ಗೋಲು ವ್ಯತ್ಯಾಸ ಹೊಂದಿರುವ ಕಾರಣ 3ನೇ ಸ್ಥಾನದಲ್ಲಿದೆ. ಮೆಕ್ಸಿಕೋ ಕೇವಲ 1 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ಅಂತಿಮ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾಗೆ ಪೋಲೆಂಡ್‌ ಎದುರಾಗಲಿದ್ದು, ಸೌದಿ ಹಾಗು ಮೆಕ್ಸಿಕೋ ಸೆಣಸಲಿವೆ. ಅರ್ಜೆಂಟೀನಾ ಗೆದ್ದರೆ 6 ಅಂಕಗಳೊಂದಿಗೆ ನಾಕೌಟ್‌ ಪ್ರವೇಶಿಸಲಿದೆ. ಒಂದು ವೇಳೆ ಡ್ರಾ ಸಾಧಿಸಿದರೆ, ಆಗ ಹಾದಿ ಕಠಿಣಗೊಳ್ಳಲಿದೆ. ಮೆಕ್ಸಿಕೋ ವಿರುದ್ಧ ಸೌದಿ ಗೆದ್ದರೆ ಅರ್ಜೆಂಟೀನಾ ಹೊರಬೀಳಲಿದೆ. ಸೌದಿ ವಿರುದ್ಧ ಮೆಕ್ಸಿಕೋ ಗೆಲುವುದಾದರೂ 3 ಗೋಲುಗಳಿಂದ ಕಡಿಮೆ ಅಂತರದಲ್ಲಿ ಗೆದ್ದರಷ್ಟೇ ಅರ್ಜೆಂಟೀನಾಗೆ ನಾಕೌಟ್‌ ಸ್ಥಾನ ಸಿಗಲಿದೆ. ಒಂದು ವೇಳೆ ಅರ್ಜೆಂಟೀನಾ ಸೋತರೆ ಖಚಿತವಾಗಿ ಹೊರಬೀಳಲಿದೆ.

Follow Us:
Download App:
  • android
  • ios