ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದ ಅರ್ಜೆಂಟೀನಾಅರ್ಜೆಂಟೀನಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ನಾಯಕ ಲಿಯೋನೆಲ್ ಮೆಸ್ಸಿಈ ಗೆಲುವಿನೊಂದಿಗೆ ಮೆಸ್ಸಿ ಪಡೆಯ ನಾಕೌಟ್ ಕನಸು ಜೀವಂತ

ದೋಹಾ(ನ.27): ನಾಯಕ ಲಿಯೋನೆಲ್ ಮೆಸ್ಸಿ ಹಾಗೂ ಎನ್ಜೊ ಫರ್ನಾಂಡೀಸ್ ಬಾರಿಸಿದ ಆಕರ್ಷಕ ಗೋಲುಗಳ ನೆರವಿನಿಂದ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೆಕ್ಸಿಕೊ ವಿರುದ್ದ 2-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ. ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೆಸ್ಸಿ, ಅರ್ಜೆಂಟೀನಾ ತಂಡದ ಪಾಲಿಗೆ ಮತ್ತೊಮ್ಮೆ ಆಪತ್ಬಾಂದವ ಎನಿಸಿಕೊಂಡರು. ಈ ಗೆಲುವಿನೊಂದಿಗೆ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ನಾಕೌಟ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಹೌದು, 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಅರ್ಜೆಂಟೀನಾ ತಂಡವು, ತಾನಾಡಿದ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿತ್ತು. ಹೀಗಾಗಿ ಮೆಕ್ಸಿಕೊ ಎದುರಿನ ಎರಡನೇ ಪಂದ್ಯವು ಅರ್ಜೆಂಟೀನಾ ತಂಡದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಮಹತ್ವದ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಮೆಸ್ಸಿ, ಪಂದ್ಯದ 64ನೇ ನಿಮಿಷದಲ್ಲಿ 20 ಯಾರ್ಡ್‌ ದೂರದಿಂದಲೇ ಅದ್ಭುತ ಗೋಲು ದಾಖಲಿಸುವ ಮೂಲಕ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ತಂಡದ ಪರ ಗೋಲಿನ ಖಾತೆ ತೆರೆದರು. ಇದಾದ ಬಳಿಕ ಪಂದ್ಯ ಮುಕ್ತಾಯಕ್ಕೆ ಇನ್ನು ಮೂರು ನಿಮಿಷ ಬಾಕಿ ಇದ್ದಾಗ ಎನ್ಜೊ ಫರ್ನಾಂಡೀಸ್‌ ಮಿಂಚಿನ ಗೋಲು ದಾಖಲಿಸುವ ಮೂಲಕ ಅಂತರವನ್ನು 2-0 ಗೆ ಹಿಗ್ಗಿಸಿದರು.

Scroll to load tweet…

ಮರಡೋನಾ ದಾಖಲೆ ಸರಿಗಟ್ಟಿದ ಮೆಸ್ಸಿ: ಹೌದು, ಮೆಕ್ಸಿಕೊ ಎದುರು ಅತ್ಯಾಕರ್ಷಕ ಗೋಲು ಬಾರಿಸುವ ಮೂಲಕ ಲಿಯೋನೆಲ್ ಮೆಸ್ಸಿ, ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ದಾಖಲೆ ಸರಿಗಟ್ಟಿದರು. ಡಿಯಾಗೋ ಮರಡೋನಾ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಪರ 8 ಗೋಲು ಬಾರಿಸಿದ್ದರು. ಇದೀಗ ಮೆಸ್ಸಿ ಕೂಡಾ 21 ಫುಟ್ಬಾಲ್ ವಿಶ್ವಕಪ್ ಪಂದ್ಯಗಳನ್ನಾಡಿ 8ನೇ ಗೋಲು ದಾಖಲಿಸಿ ಸಂಭ್ರಮಿಸಿದರು. ಕಾಕತಾಳೀಯ ಎನ್ನುವಂತೆ ಡಿಯಾಗೋ ಮರಡೋನಾ ಕೊನೆಯುಸಿರೆಳೆದ ಎರಡನೇ ವರ್ಷಾಚರಣೆಯ ದಿನದಂದೇ ಮೆಸ್ಸಿ, ಮರಡೋನಾ ದಾಖಲೆ ಸರಿಗಟ್ಟಿದ್ದು ಫರ್ಫೆಕ್ಟ್ ಟ್ರಿಬ್ಯೂಟ್‌ ಎನಿಸಿಕೊಂಡಿತು.

FIFA World Cup ಡೆನಾರ್ಕ್‌ ಮಣಿಸಿ ನಾಕೌಟ್‌ಗೆ ಲಗ್ಗೆಯಿಟ್ಟ ಫ್ರಾನ್ಸ್..!

ನಾಕೌಟ್‌ಗೇರಲು ಅರ್ಜೆಂಟೀನಾಗೆ ಇನ್ನೊಂದು ಗೆಲುವು ಅನಿವಾರ್ಯ: ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಈಗಾಗಲೇ ಮೊದಲ ಪಂದ್ಯ ಸೋತಿದ್ದರಿಂದ, ಗ್ರೂಪ್ ಹಂತದಲ್ಲಿ ಇನ್ನೊಂದು ಪಂದ್ಯ ಗೆದ್ದರಷ್ಟೇ ನಾಕೌಟ್ ಹಾದಿ ಸುಗಮವಾಗಲಿದೆ. ಸದ್ಯ 'ಸಿ' ಗುಂಪಿನಲ್ಲಿ ಅರ್ಜೆಂಟೀನಾ ತಂಡವು 2 ಪಂದ್ಯಗಳನ್ನಾಡಿ 1 ಗೆಲುವು ಹಾಗೂ ಒಂದು ಸೋಲಿನೊಂದಿಗೆ 3 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೀಗ ಅರ್ಜೆಂಟೀನಾ ತಂಡವು ಗ್ರೂಪ್ ಹಂತದಲ್ಲಿ ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಪೋಲೆಂಡ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಜಯಿಸಿದರಷ್ಟೇ ಅರ್ಜೆಂಟೀನಾ ತಂಡವು ಅಧಿಕೃತವಾಗಿ ನಾಕೌಟ್ ಹಂತಕ್ಕೆ ಲಗ್ಗೆಯಿಡಲಿದೆ.

ಸೌದಿ ಸಂಭ್ರಮಕ್ಕೆ ಬ್ರೇಕ್‌ ಹಾಕಿದ ಪೋಲೆಂಡ್‌!

ಅಲ್‌ ರಯ್ಯನ್‌: ಅರ್ಜೆಂಟೀನಾವನ್ನು ಸೋಲಿಸಿ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದ ಸೌದಿ ಅರೇಬಿಯಾ ಶನಿವಾರ ಪೋಲೆಂಡ್‌ ವಿರುದ್ಧ 0-2 ಗೋಲುಗಳಲ್ಲಿ ಸೋಲುಂಡಿತು. ಮೊದಲ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿದ್ದ ಪೋಲೆಂಡ್‌, ಸೌದಿ ವಿರುದ್ಧ ಮೊದಲಾರ್ಧದಲ್ಲೇ ಗೋಲು ಬಾರಿಸಿ ಮುನ್ನಡೆ ಪಡೆಯಿತು. ಪಿಯೊಟ್ಸ್ ಝೀಲಿನಿಸ್ಕಿ 39ನೇ ನಿಮಿಷದಲ್ಲಿ ಪೋಲೆಂಡ್‌ ಪರ ಗೋಲಿನ ಖಾತೆ ತೆರೆದರು. ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಸಾಧಿಸಿದ ಪೋಲೆಂಡ್‌ 82ನೇ ನಿಮಿಷದಲ್ಲಿ 2ನೇ ಗೋಲು ದಾಖಲಿಸಿತು. ನಾಯಕ ರಾಬರ್ಚ್‌ ಲೆವಾಂಡೋವ್ಸ್ಕಿ ಆಕರ್ಷಕ ಗೋಲು ಬಾರಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಪೋಲೆಂಡ್‌ ಕೊನೆ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ನಾಕೌಟ್‌ಗೇರುವ ಸಾಧ್ಯತೆ ಇದೆ.