FIFA World Cup ಮೆಸ್ಸಿ ಪಡೆಗೆ ನಾಕೌಟ್ ಕನಸು! ಪೋಲೆಂಡ್ ಸವಾಲು ಮೆಟ್ಟಿ ನಿಲ್ಲುತ್ತಾ ಅರ್ಜೆಂಟೀನಾ?
ಫಿಫಾ ವಿಶ್ವಕಪ್ ಟೂರ್ನಿಯಲ್ಲಿಂದು ಮಹತ್ವದ ಪಂದ್ಯಗಳು
ಅರ್ಜೆಂಟೀನಾ ತಂಡಕ್ಕಿಂದು ಪೋಲೆಂಡ್ ಸವಾಲು
ನಾಕೌಟ್ ಹಂತಕ್ಕೇರಲು ಲಿಯೋನೆಲ್ ಮೆಸ್ಸಿ ಪಡೆಗೆ ಗೆಲುವು ಅನಿವಾರ್ಯ
ದೋಹಾ(ನ.30): ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ಬುಧವಾರ ನಾಕೌಟ್ ಹಂತಕ್ಕೇರಲು ಪೋಲೆಂಡ್ ವಿರುದ್ಧ ಸೆಣಸಲಿದೆ. ಬಹುತೇಕ ಕೊನೆಯ ವಿಶ್ವಕಪ್ ಆಡುತ್ತಿರುವ ಮೆಸ್ಸಿ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ತಹತಹಿಸುತ್ತಿದ್ದು, ಆ ಕನಸು ಜೀವಂತವಾಗಿ ಉಳಿಯಬೇಕಿದ್ದರೆ ಪೋಲೆಂಡ್‌ಗೆ ಸೋಲುಣಿಸಿ ಮುನ್ನಡೆಯಬೇಕಿದೆ.
ಅರ್ಜೆಂಟೀನಾ ಜಯಗಳಿಸಿದರೆ ‘ಸಿ’ ಗುಂಪಿನಲ್ಲಿ ಬಹುತೇಕ ಮೊದಲ ಸ್ಥಾನಿಯಾಗಿ ನಾಕೌಟ್‌ಗೇರಲಿದೆ. ಡ್ರಾ ಸಾಧಿಸಿದರೂ ತಂಡಕ್ಕೆ ಅವಕಾಶವಿದೆ. ಆದರೆ ಮತ್ತೊಂದು ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು ಮೆಕ್ಸಿಕೋ ಸೋಲಿಸಬೇಕು.
ಇನ್ನು ‘ಡಿ’ ಗುಂಪಿನಲ್ಲೂ ಬುಧವಾರ ಮಹತ್ವದ ಪಂದ್ಯಗಳು ನಡೆಯಲಿವೆ. ಈಗಾಗಲೇ ನಾಕೌಟ್ ಪ್ರವೇಶಿಸಿರುವ ಹಾಲಿ ಚಾಂಪಿಯನ್ ಫ್ರಾನ್ಸ್, ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಆಸ್ಪ್ರೇಲಿಯಾ ಹಾಗೂ ಡೆನ್ಮಾರ್ಕ್ ನಡುವಿನ ಸೆಣಸಾಟದಲ್ಲಿ ಮೇಲುಗೈ ಸಾಧಿಸುವ ತಂಡಕ್ಕೆ ನಾಕೌಟ್ ಟಿಕೆಟ್ ಸಿಗಲಿದೆ.
ಇಂದಿನ ಪಂದ್ಯಗಳು
ಫ್ರಾನ್ಸ್-ಟ್ಯುನೀಶಿಯಾ, ರಾತ್ರಿ 8.30ಕ್ಕೆ
ಆಸ್ಪ್ರೇಲಿಯಾ-ಡೆನ್ಮಾರ್ಕ್, ರಾತ್ರಿ 8.30ಕ್ಕೆ
ಅರ್ಜೆಂಟೀನಾ-ಪೋಲೆಂಡ್, ರಾತ್ರಿ 12.30ಕ್ಕೆ
ಸೌದಿ ಅರೇಬಿಯಾ-ಮೆಕ್ಸಿಕೋ, ರಾತ್ರಿ 12.30ಕ್ಕೆ
ತಂಡದಿಂದ ಕೈಬಿಟ್ಟಿದ್ದಕ್ಕೆ ವಿಶ್ವಕಪ್‌ಗೆ ಕ್ಯಾಮರೊನ್ ಗೋಲಿ ಗುಡ್‌ಬೈ..!
ಅಲ್ ರಯ್ಯನ್: ಅನುಚಿತ ವರ್ತನೆಯ ಕಾರಣ ತಂಡದಿಂದ ಹೊರಬಿಟ್ಟಿದ್ದಕ್ಕೆ ಸಿಟ್ಟಾದ ಕ್ಯಾಮರೂನ್ ಗೋಲ್ ಕೀಪರ್ ಆಂಡ್ರೆ ಒನಾನ ವಿಶ್ವಕಪ್‌ಗೆ ಗುಡ್ ಬೈ ಹೇಳಿ ತವರಿಗೆ ವಾಪಾಸ್ಸಾಗಿದ್ದಾರೆ. ಅವರು ದೋಹಾದ ವಿಮಾನ ನಿಲ್ದಾಣದಲ್ಲಿದ್ದ ಫೋಟೋಗಳನ್ನು ಕ್ಯಾಮರೊನ್ ದೇಶದ ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
FIFA World Cup: ಅಂತಿಮ 16ರ ಸುತ್ತಿಗೇರಿದ ನೆದರ್‌ಲೆಂಡ್ಸ್, ಸೆನಗಲ್..!
ಕ್ಯಾಮರೊನ್ ಫುಟ್ಬಾಲ್ ತಂಡದ ಕೋಚ್ ರಿಗೊಬರ್ಟ್ ಸಾಂಗ್ ಜೊತೆ ತಂಡದ ಸಂಯೋಜನೆಯ ವಿಚಾರವಾಗಿ ಮನಸ್ತಾಪ ಮಾಡಿಕೊಂಡ ಒನಾನ ಅವರನ್ನು ಸೋಮವಾರದ ಸರ್ಬಿಯಾ ಎದುರಿನ ಪಂದ್ಯಕ್ಕೂ ಮುನ್ನ ತಂಡದಿಂದ ಹೊರಹಾಕಲಾಗಿತ್ತು. ಒನಾನ ಅವರನ್ನು ಕ್ಯಾಮರೊನ್ ಫುಟ್ಬಾಲ್ ಫೆಡರೇಷನ್ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ಮನಸ್ತಾಪ ಬಗೆಹರಿಸಿಕೊಳ್ಳಲು ನಾನು ಎಲ್ಲಾ ಪ್ರಯತ್ನ ನಡೆಸಿದೆ. ಆದರೆ ರಿಗೊಬರ್ಟ್ ಮಾತುಕತೆಗೆ ಸಿದ್ದವಿಲ್ಲ' ಎಂದು ಒನಾನ ಹೇಳಿಕೊಂಡಿದ್ದಾರೆ. ಸಾಂಗ್ ಹಲವು ವರ್ಷಗಳ ಕಾಲ ಕ್ಯಾಮರೊನ್ ತಂಡದ ನಾಯಕರಾಗಿದ್ದರು. ಈ ವರ್ಷ ಫೆಬ್ರವರಿಯಲ್ಲಿ ಕೋಚ್ ಆಗಿ ನೇಮಕಗೊಂಡಿದ್ದರು.
ಬ್ರೆಜಿಲ್‌ಗೆ ‘ದಿಗ್ಗಜರ’ ಬೆಂಬಲ!
ದೋಹಾದ 974 ಕ್ರೀಡಾಂಗಣದಲ್ಲಿ ಮಂಗಳವಾರ ಸ್ವಿಜರ್‌ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡವನ್ನು ಬೆಂಬಲಿಸಿದ ಬ್ರೆಜಿಲ್‌ನ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರಾದ ರಾಬೆರ್ಟೊ ಕಾರ್ಲೋಸ್, ರೊನಾಲ್ಡೋ, ಕಫು ಹಾಗೂ ಕಾಕ. ಸಾಮಾಜಿಕ ತಾಣಗಳಲ್ಲಿ ಈ ಫೋಟೋ ವೈರಲ್ ಆಗಿದೆ.