Asianet Suvarna News Asianet Suvarna News

ಕತಾರ್‌ನಲ್ಲಿ ಎಣ್ಣೆ ಬ್ಯಾನ್‌, ಗೋದಾಮಿನ ರಾಶಿ ರಾಶಿ ಬಿಯರ್‌ ಕ್ಯಾನ್‌ ಫೋಟೋ ಪ್ರಕಟಿಸಿದ ಬಡ್ವೈಸರ್‌!

ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಆಯೋಜನೆ ಮಾಡಿರುವ ಕತಾರ್‌ ದೇಶ ತನ್ನ ಕೊನೆಯ ಕ್ಷಣದ ನಿರ್ಧಾರದಲ್ಲಿ ಸ್ಟೇಡಿಯಂನಲ್ಲಿ ಮದ್ಯಪಾನಕ್ಕೆ ನಿಷೇಧ ವಿಧಿಸಿದೆ. ಅದರ ಬದಲು ಸ್ಟೇಡಿಯಂನಲ್ಲಿ ಆಲ್ಕೋಹಾಲ್‌ ಇಲ್ಲದ ಬಿಯರ್‌ಗಳನ್ನು ಮಾತ್ರ ಮಾರಾಟ ಮಾಡಲು ಒಪ್ಪಿಗೆ ನೀಡಿದೆ. ಇದು ಟೂರ್ನಿಯ ಸ್ಪಾನ್ಸರ್‌ ಆಗಿರುವ ಬಡ್ವೈಸರ್‌ಗೆ ದೊಡ್ಡ ಆಘಾತ ನೀಡಿದೆ.
 

FIFA World Cup 2022 in Qatar Budweiser breaks silence on beer ban san
Author
First Published Nov 20, 2022, 6:18 PM IST

ದೋಹಾ (ನ.20): ಕತಾರ್‌ನ ಆತಿಥ್ಯದಲ್ಲಿ ಇಂದು ರಾತ್ರಿ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಚಾಲನೆ ಸಿಗಲಿದೆ. ಆದರೆ, ತನ್ನ ಕೊನೇ ಕ್ಷಣದ ನಿರ್ಧಾರದಲ್ಲಿ ಸಂಘಟಕರು ಮುಸ್ಲಿಂ ರಾಷ್ಟ್ರದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಆಗಿರುವ ಕಾರಣ ಸ್ಟೇಡಿಯಂನಲ್ಲಿ ಮದ್ಯಪಾನ ಹಾಗೂ ಮಾರಾಟಕ್ಕೆ ನಿಷೇಧ ವಿಧಿಸಿದೆ. ಆದರೆ, ಇದಾವುದರ ಅರಿವಿಲ್ಲದ ಬಡ್ವೈಸರ್‌ ಕಂಪನಿ, ಈಗಾಗಲೇ ವಿಶ್ವಕಪ್‌ಗಾಗಿ ರಾಶಿ ರಾಶಿ ಬಿಯರ್‌ ಕ್ಯಾನ್‌ಗಳನ್ನು ಉತ್ಪಾದನೆ ಮಾಡಿ ಗೋದಾಮಿನಲ್ಲಿಟ್ಟಿದೆ. ಕೊನೇ ಹಂತದಲ್ಲಿ ಕತಾರ್‌ನ ಸಂಘಟಕರು ಮಾಡಿದ ನಿರ್ಧಾರದಿಂದ ಬಡ್ವೈಸರ್‌ ಕಂಪನಿ ಅಘಾತಕ್ಕೆ ಈಡಾಗಿದೆ. ಮದ್ಯ ಕಂಪನಿಯನ್ನು ಈ ಬಾರಿಯ ಫಿಫಾ ವಿಶ್ವಕಪ್‌ನ ಪ್ರಾಯೋಜಕರಾಗಿ ಪ್ರಕಟಿಸಲಾಗಿತ್ತು. ಅದಕ್ಕಾಗಿ ಅಂದಾಜು 560 ಕೋಟಿ ರೂಪಾಯಿಯ ಒಪ್ಪಂದವನ್ನೂ ಮಾಡಿಕೊಂಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮೈದಾನಗಳಲ್ಲಿ ಬಡ್ವೈಸರ್‌ ಹೊರತಾಗಿ ಬೇರೆ ಯಾವ ಕಂಪನಿಯ ಬಿಯರ್‌ಗಳು ಕೂಡ ಮಾರಾಟ ಮಾಡುವಂತಿರಲಿಲ್ಲ. ಆದರೆ, ಕತಾರ್‌ನ ಈ ನಿರ್ಧಾರದಿಂದಾಗಿ ಆಲ್ಕೋಹಾಲ್‌ ರಹಿತ ಬಡ್ವೈಸರ್‌ ಬಿಯರ್‌ಅನ್ನು ಮಾತ್ರವೇ ಮೈದಾನಗಳಲ್ಲಿ ಮಾರಾಟ ಮಾಡಬೇಕಿದೆ. ಇದರಿಂದ ಆಕ್ರೋಶಗೊಂಡಿರುವ ಫುಟ್‌ಬಾಲ್‌ ಅಭಿಮಾನಿಗಳು, ಫಿಫಾ ಅಧ್ಯಕ್ಷರಿಂದ ತಮ್ಮ ಟಿಕೆಟ್‌ ಹಾಗೂ ಪ್ರಯಾಣದ ಹಣವನ್ನು ವಾಪಸ್‌ ಕೇಳಿದ್ದಾರೆ. ಕತಾರ್‌ನ ರಾಯಲ್‌ ಕುಟುಂಬದ ಒತ್ತಡದ ಕಾರಣದಿಂದಾಗಿ ಫಿಫಾ ಕೂಡ ಈ ನಿರ್ಧಾರಕ್ಕೆ ಅನಿವಾರ್ಯವಾಗಿ ಒಪ್ಪಿಕೊಂಡಿದೆ.


ಫಿಫಾ ಹಾಗೂ ಕತಾರ್‌ ವಿಶ್ವಕಪ್‌ ಸಂಘಟಕರ ನಿರ್ಧಾರಿಂದಾಗಿ ದೊಡ್ಡ ಪ್ರಮಾಣದ ಬಡ್ವೈಸರ್‌ ಬಿಯರ್‌ಗಳು ವೇಸ್ಟ್‌ ಆಗಲಿದೆ ಎಂದು ಇಂಗ್ಲೆಂಡ್‌ನ ಪತ್ರಿಕೆ ವರದಿ ಮಾಡಿದೆ. ತನ್ನ ಗೋದಾಮಿನಲ್ಲಿ ರಾಶಿ ರಾಶಿ ಬಿಯರ್‌ ಕ್ಯಾನ್‌ಗಳನ್ನು ಇಟ್ಟಿರುವ ಚಿತ್ರವನ್ನು ಬಡ್ವೈಸರ್‌ ಕಂಪನಿ ತನ್ನ ಸೋಶಿಯಲ್‌ ಮೀಡಿಯಾ ಪುಟದಲ್ಲಿ ಹಾಕಿಕೊಂಡಿದೆ. ಈ ಎಲ್ಲಾ ಬಿಯರ್ ಕ್ಯಾನ್‌ಗಳನ್ನು ವಿಶ್ವಕಪ್‌ ವಿಜೇತ ತಂಡಕ್ಕೆ ಕೊಡಲಾಗುವುದು ಎಂದು ಕಂಪನಿ ಬರೆದುಕೊಂಡಿದೆ.

'ಹೊಸ ದಿನ, ಹೊಸ ಟ್ವೀಟ್‌. ವಿಜೇತ ದೇಶ ಈ ಬಡ್ಸ್‌ಗಳನ್ನು ಪಡೆದುಕೊಳ್ಳಲಿದೆ. ನಿಮ್ಮ ಪ್ರಕಾರ ಇದನ್ನು ಯಾರು ಪಡೆದುಕೊಳ್ಳಬಹುದು?' ಎಂದು ಗೋದಾಮಿನಲ್ಲಿ ರಾಶಿ ಹಾಕಿರುವ ಬಿಯರ್‌ ಕ್ಯಾನ್‌ಗಳ ಚಿತ್ರದೊಂದಿಗೆ ಬರೆದಿದೆ. ಇದಕ್ಕೂ ಮುನ್ನ ಶುಕ್ರವಾರ ಪ್ರಮುಖ ಟ್ವೀಟ್‌ ಮಾಡಿದ್ದ ಬಡ್ವೈಸರ್‌ ಸ್ಟೇಡಿಯಂನಲ್ಲಿ ಬಿಯರ್‌ ಬ್ಯಾನ್‌ ಮಾಡಿದ ನಿರ್ಧಾರವನ್ನು ಟೀಕಿಸಿಸಿತ್ತು. ಆಲ್ಕೋಹಾಲ್‌ ಮಾರಾಟವನ್ನು ಸ್ಟೇಡಿಯಂನಲ್ಲಿ ನಿಷೇಧಿಸಲಾಗಿದೆ ಎನ್ನುವ ಪ್ರಕಟಣೆಗೆ, ಇದೊಂದು ಅಸಂಬದ್ಧ ಎಂದು ಟ್ವೀಟ್‌ ಮಾಡಿತ್ತು. ಬಳಿಕ ಇದನ್ನು ಕಂಪನಿ ಡಿಲೀಟ್‌ ಮಾಡಿತ್ತು.

FIFA World Cup: ಒಂದು ಪಿಂಟ್‌ ಬಡ್ವೈಸರ್‌ಗೆ ಕೊಡೋ ಹಣದಲ್ಲಿ ನೀವಿಲ್ಲಿ ಗೋವಾಕ್ಕೇ ಹೋಗಿ ಬರಬಹುದು!

8 ಸಾವಿರ ಮೈಲಿಯಿಂದ ಬಂದಿದ್ದ ಬಿಯರ್‌: ದೋಹಾದ ಕತಾರ್‌ಗೆ ಅಂದಾಜು 8 ಸಾವಿರ ಮೈಲಿ ದೂರದಿಂದ ಈ ಬಿಯರ್‌ ಕ್ಯಾನ್‌ಗಳು ಬಂದಿದ್ದವು. ಲಂಡನ್‌ನ ಲಂಕಾಷೈರ್‌ ಹಾಗೂ ವೇಲ್ಸ್‌ನಿಂದ ಈ ಬಿಯರ್‌ಗಳು ದೋಹಾ ತಲುಪಿದ್ದವು. ಕತಾರ್‌ ದೇಶದಲ್ಲಿ ಮದ್ಯಪಾನ ನಿಷೇಧವಿದೆ. ಪ್ರವಾಸಿಗರು ಅಧಿಕೃತ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಮಾತ್ರವೇ ಮದ್ಯವನ್ನು ಸೇವನೆ ಮಾಡಬಹುದಾಗಿದೆ. ವಿಶ್ವಕಪ್‌ಗಾಗಿಯೂ ಈ ಮೊದಲುಸ ವಿನಾಯಿತಿಯನ್ನು ನೀಡಲಾಗಿತ್ತು. ಸ್ಟೇಡಿಯಂನಲ್ಲಿರುವ ವಿಶೇಷ ಫ್ಯಾನ್‌ಜೋನ್‌ಗಳಲ್ಲಿ ಅಭಿಮಾನಿಗಳು ಬಿಯರ್‌ ಖರೀದಿ ಮಾಡಬಹುದು ಎನ್ನಲಾಗಿತ್ತು. ಅದಲ್ಲದೆ, ಫ್ಯಾನ್‌ಜೋನ್‌ನ ಒಳಗಡೆ ಮಾತ್ರವೆ ಬಿಯರ್‌ ಸೇವಿಸಬಹುದು ಎಂದು ಕತಾರ್ ಹೇಳಿತ್ತು. ಪಂದ್ಯದ ಎಲ್ಲಾ ಸಮಯದಲ್ಲೂ ಬಿಯರ್‌ಗಳು ಸಿಗೋದಿಲ್ಲ. ಪ್ರತಿ ಪಿಂಟ್‌ಗೆ 12 ಡಾಲರ್‌ ಅಂದರೆ 1200 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಒಬ್ಬ ವ್ಯಕ್ತಿಗೆ ನಾಲ್ಕು ಪಿಂಟ್‌ಗಳನ್ನು ಮಾತ್ರವೇ ನೀಡುವುದಾಗಿ ಘೋಷಣೆಯಾಗಿತ್ತು.

FIFA World Cup: ಟೂರ್ನಿ ಆರಂಭಕ್ಕೂ ಮುನ್ನ ಹಾಲಿ ಚಾಂಪಿಯನ್‌ಗೆ ಆಘಾತ, ಸ್ಟಾರ್‌ ಆಟಗಾರ ಔಟ್‌!

ಆನ್‌ಹ್ಯುಸರ್‌-ಬುಷ್‌ ಇನ್‌ಬೆವ್‌, ಬಡ್ವೈಸರ್‌ ಮತ್ತು ಡಜನ್‌ಗಟ್ಟಲೆ ಇತರ ಬಿಯರ್ ಬ್ರಾಂಡ್‌ಗಳನ್ನು ಹೊಂದಿರುವ ಬ್ರೇವರಿಸ್‌ ದೈತ್ಯ ಕಂಪನಿಯಾಗಿದೆ. ಇದು ಇನ್ನೂ 'ನಮ್ಮ ಗ್ರಾಹಕರೊಂದಿಗೆ ಫುಟ್‌ಬಾಲ್ ಆಚರಿಸಲು' ಎದುರುನೋಡುತ್ತಿದೆ ಆದರೆ 'ನಮ್ಮ ನಿಯಂತ್ರಣ ಮೀರಿದ ಸಂದರ್ಭಗಳಿಂದ' ಕೆಲವು ಮಾರಾಟಗಳು ಮುಂದುವರಿಯಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದೆ.

Follow Us:
Download App:
  • android
  • ios