ಇಡೀ ವಿಶ್ವಕ್ಕೆ ಈಗ ಫುಟ್‌ಬಾಲ್‌ ವಿಶ್ವಕಪ್‌ನ ಜ್ವರ. ಈ ಬಾರಿ ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ನಡೆಯಲಿದೆ. ಫುಟ್‌ಬಾಲ್‌ ವಿಶ್ವಕಪ್‌ ಬಂದರೆ ಬರೀ ಆಟ ಮಾತ್ರವಲ್ಲ, ವಿಶ್ವಕಪ್‌ ಸಿದ್ಧತೆ ಅಭಿಮಾನಿಗಳ ನಿರೀಕ್ಷೆಗಳದ್ದೂ ಬಹಳ ದೊಡ್ಡ ಸುದ್ದಿ. ಆದರೆ, ಮುಸ್ಲಿಂ ರಾಷ್ಟ್ರದಲ್ಲಿ ಈ ಬಾರಿ ನಡೆಯುತ್ತಿರುವ ವಿಶ್ವಕಪ್‌ ಆರಂಭಕ್ಕೂ ಮುನ್ನವೇ, ಎಣ್ಣೆ ಫ್ಯಾನ್ಸ್‌ಗಳಿಗೆ ನಿರಾಸೆಯಾಗುವಂಥ ಸುದ್ದಿ ಬಂದಿದೆ. 

ನವದೆಹಲಿ (ನ.17): ಕತಾರ್‌ ದೇಶದ ಆತಿಥ್ಯದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ 'ಮದ್ಯ' ಪ್ರಿಯರ ತಲೆತಿರುಗುವಂತೆ ಮಾಡಿದೆ. ಎಣ್ಣೆಯಿಲ್ಲದೆ ಫುಟ್‌ಬಾಲ್‌ ಮ್ಯಾಚ್‌ ನೋಡೋಕೇ ಸಾಧ್ಯವಿಲ್ಲ ಅನ್ನೋ ಅಭಿಮಾನಿಗಳು ಕತಾರ್‌ ದೇಶದಲ್ಲಿನ ಎಣ್ಣೆ ಆತಿಥ್ಯಕ್ಕೆ ಸುಸ್ತಾಗಿ ಹೋಗಿದ್ದಾರೆ. ಅದಕ್ಕೆ ಕಾರಣ ಅಲ್ಲಿನ ಬೆಲೆ. ಹೌದು.. ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ 500 ಎಂಎಲ್‌ನ ಪಿಂಟ್‌ಗೆ ಬರೋಬ್ಬರಿ 12 ಪೌಂಡ್‌ ಅಂತೆ..! ಅಂದರೆ 1200 ರೂಪಾಯಿ...! ಅಂದರೆ, ವಿಶ್ವಕಪ್‌ ವೇಳೆ ಪಿಂಟ್‌ಗೆ ಕೊಡುವ ಹಣದಲ್ಲಿ ಇಲ್ಲಿ ಬೆಂಗಳೂರಿನಿಂದ ಗೋವಾಕ್ಕೆ ಹೋಗಿ ರೈಲಿನಲ್ಲಿಯೇ ಹೋಗಿ ಬರಬಹುದು. ಇನ್ನು ಫ್ಯಾನ್ಸ್‌ಗಳ ಅಸಮಾಧಾನಕ್ಕೆ ಬೆಲೆ ಹೆಚ್ಚು ಅನ್ನೋದು ಮಾತ್ರ ಕಾರಣವಲ್ಲ. ಇನ್ನೊಂದು ಪ್ರಮುಖ ಕಾರಣವೇನೆಂದರೆ, ಇಷ್ಟೆಲ್ಲಾ ಹಣ ಕೊಟ್ಟರು ಇಡೀ ಕತಾರ್‌ನಲ್ಲಿ ನಿಮಗೆ ಸಿಗೋದು ಬಡ್ವೈಸರ್‌ ಬ್ರ್ಯಾಂಡ್‌ನ ಎಣ್ಣೆ ಮಾತ್ರ. ಬೇರೆ ಯಾವ ಬ್ರ್ಯಾಂಡ್‌ನ ಮದ್ಯ ಕೂಡ ಇಲ್ಲಿ ಸಿಗೋದಿಲ್ಲ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅದರೊಂದಿಗೆ ಒಂದು ಆರ್ಡರ್‌ನಲ್ಲಿ ಒಬ್ಬ ವ್ಯಕ್ತಿಗೆ ನಾಲ್ಕು ಪಿಂಟ್‌ ಮಾತ್ರವೇ ಸಿಗುತ್ತದೆ. ಅದಕ್ಕಿಂತ ಹೆಚ್ಚಿನ ಎಣ್ಣೆ ಆ ವ್ಯಕ್ತಿಗೆ ಸಿಗೋದಿಲ್ಲ. ಮದ್ಯಪ್ರಿಯರು ಕುಡಿದು ರಸ್ತೆಯಲ್ಲಿ ತೂರಾಡಬಾರದು, ಅಸಭ್ಯ ವರ್ತನೆ, ಗಲಾಟೆ ಮಾಡಬಾರದು ಎನ್ನುವ ಕಾರಣಕ್ಕಾಗಿ ಕತಾರ್‌ ಈ ನಿರ್ಬಂಧ ಹೇರಿದೆ.

ಭಾನುವಾರದಿಂದ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ಆರಂಭವಾಗಲಿದೆ. ವಿಶ್ವಕಪ್‌ನಲ್ಲಿರು ಬಹುತೇಕ ರಾಷ್ಟ್ರಗಳ ಅಭಿಮಾನಿಗಳು ಮದ್ಯಪ್ರಿಯರೇ ಆಗಿದ್ದಾರೆ. ಇದರ ನಡುವೆ ಕತಾರ್‌ ಈ ನಿರ್ಬಂಧ ಅಭಿಮಾನಿಗಳಿಗೆ ನಿರಾಸೆ ತಂದಿದೆ. 'ವಿಶ್ವಕಪ್‌ನ ಅಧಿಕೃತ ಬಿಯರ್‌ ಪಾರ್ಟ್‌ನರ್‌ ಆಗಿರುವುದು ಬಡ್ವೈಸರ್‌. ಇದರ 500 ಎಂಎಲ್‌ನ ಒಂದು ಪಿಂಟ್‌ನ ಬೆಲೆ 50 ರಿಯಾಲ್‌ ಅಂದರೆ 12 ಪೌಂಡ್‌ ಆಗಿದೆ. ಫ್ಯಾನ್‌ ಜೋನ್‌ ಹಾಗೂ ಸ್ಟೇಡಿಯಂನಲ್ಲಿ ಮಾತ್ರವೇ ಇದು ಲಭ್ಯವಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಇಂಗ್ಲೆಂಡ್‌ನ ಪತ್ರಿಕೆ ವರದಿ ಮಾಡಿದೆ. ಮದ್ಯ ಕುಡಿದು ಅಭಿಮಾನಿಗಳು ಅನುಚಿತ ವರ್ತನೆ ತೋರಬಾರದು ಎನ್ನುವ ಉದ್ದೇಶದಲ್ಲಿ ಇದನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

FIFA World Cupಗೆ ಇನ್ನು 5 ದಿನ: ಫುಟ್ಬಾಲ್‌ ವಿಶ್ವಕಪ್‌ ಬೆಳೆದು ಬಂದ ಹಾದಿ ಹೀಗಿದೆ..

ಅಭಿಮಾನಿಗಳು ದುಬಾರಿ ಬೆಲೆ ಮಾತ್ರವಲ್ಲ, ಕೇವಲ ಒಂದೇ ಬ್ರ್ಯಾಂಡ್‌ ಅದರಲ್ಲೂ ಬಡ್ವೈಸರ್‌ ಬಿಯರ್‌ ಮಾತ್ರ ಲಭ್ಯವಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 'ಇದು ಅಗತ್ಯಕ್ಕಿಂತ ಹೆಚ್ಚಿನ ಬೆಲೆ ಮಾತ್ರವಲ್ಲ. ಬಡ್ವೈಸರ್‌ ಬ್ರ್ಯಾಂಡ್‌ ಎನ್ನುವುದೇ ಬೇಸರ ತಂದಿದೆ' ಎಂದು ಟ್ವಿಟರ್‌ನಲ್ಲಿ ಅಭಿಮಾನಿಗಳು ಬರೆದಿದ್ದಾರೆ. ಇನ್ನೊಬ್ಬ ಅಭಿಮಾನಿ ಕೂಡ ಇದೇ ಅರ್ಥದಲ್ಲಿ ಬರೆದಿದ್ದಾರೆ. ನೀವು ಕತಾರ್‌ಗೆ ಹೋಗಲು ತೀರ್ಮಾನ ಮಾಡಿದ್ದೀರಿ ಎಂದಾದರೆ, ಒಂದು ಪಿಂಟ್‌ ಬಿಯರ್‌ಗೆ 12 ಪೌಂಡ್‌ ಕೊಡೋದು ಸಮಸ್ಯೆ ಆಗೋದಿಲ್ಲ. ಆದರೆ ಸಮಸ್ಯೆ ಇರೋದು ಬಡ್ವೈಸರ್‌ ಬ್ರ್ಯಾಂಡ್‌ನ ಬಿಯರ್‌ ಬಗ್ಗೆ. ಬಹುಶಃ ಜಗತ್ತಿನಲ್ಲಿರುವ ಅತೀ ಕೆಟ್ಟ ಬಿಯರ್‌' ಎಂದು ಬರೆದಿದ್ದಾರೆ.

FIFA World Cup: ಫುಟ್ಬಾಲ್ ಮಹಾಕಾಳಗಕ್ಕೆ 32 ತಂಡಗಳು ಸನ್ನದ್ದ..!

ಹಾಗಂತ ಇಂಗ್ಲೆಂಡ್‌ನಲ್ಲಿ ಆಲ್ಕೋಹಾಲ್‌ಗೆ ಕಡಿಮೆ ಬೆಲೆ ಅಂತಾ ಅರ್ಥವಲ್ಲ. ಇದನ್ನೇ ಒಬ್ಬ ಅಭಿಮಾನಿ ಬರೆದಿದ್ದು, ಲಂಡನ್‌ನಲ್ಲೂ ಬಿಯರ್‌ಗೆ ಇಷ್ಟೇ ದರ ಇರುತ್ತದೆ ಎಂದಿದ್ದಾರೆ.
ಕತಾರ್‌ನಲ್ಲಿ ಬಿಯರ್‌ ಬೆಲೆಗಳ ಬಗ್ಗೆ ಮಾಹಿತಿ ಹೊರಬಿದ್ದ ಬೆನ್ನಲ್ಲಿಯೇ ಅಭಿಮಾನಿಯೊಬ್ಬರು ಮುಂದಿನ ದಿನಗಳಲ್ಲಿ ಹಾಗೂ ಟೂರ್ನಿಯ ಕೆಲ ಹಂತಗಳಲ್ಲಿ ಇದೇ ರೀತಿಯ ಕೆಲವು ವಿಚಾರಗಳು ಮುನ್ನಲೆಗೆ ಬರಬಹುದು ಎಂದು ಹೇಳಿದ್ದಾರೆ. 'ಕತಾರ್‌ ವಿಶ್ವಕಪ್‌. ಫುಟ್‌ಬಾಲ್‌ ಜಗತ್ತಗೆ ನೀಡುತ್ತಿರುವ ಗಿಫ್ಟ್‌' ಎಂದು ಅಭಿಮಾನಿ ಬರೆದಿದ್ದಾರೆ.