Asianet Suvarna News Asianet Suvarna News

FIFA World Cup: ಕತಾರ್‌ ವಿಶ್ವಕಪ್‌ನಲ್ಲಿ ಸೋದರರ ಸವಾಲ್‌! ಸ್ಪೇನ್‌ ಪರ ನಿಕೋ, ಘಾನಾ ಪರ ಇನಾಕಿ ಆಟ

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೋದರರ ಇಂಟ್ರೆಸ್ಟಿಂಗ್ ಸವಾಲು
ಸಹೋದರರಿಬ್ಬರು ಬೇರೆ ಬೇರೆ ದೇಶಗಳ ಪರ ಆಡುತ್ತಿದ್ದು ಗಮನ ಸೆಳೆದಿದ್ದಾರೆ
ನಿಕೋ ವಿಲಿಯಮ್ಸ್‌ ಸ್ಪೇನ್‌ ಪರ, ಇನಾಕಿ ವಿಲಿಯಮ್ಸ್‌ ಘಾನಾ ಪರ ಕಣಕ್ಕಿಳಿದಿದ್ದಾರೆ.

FIFA World Cup 2022 Nico and Inaki Williams two brothers born in Spain are now playing for different teams kvn
Author
First Published Nov 25, 2022, 9:10 AM IST

ದೋಹಾ(ನ.25): 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಸಹೋದರರಿಬ್ಬರು ಬೇರೆ ಬೇರೆ ದೇಶಗಳ ಪರ ಆಡುತ್ತಿದ್ದು ಗಮನ ಸೆಳೆದಿದ್ದಾರೆ. ನಿಕೋ ವಿಲಿಯಮ್ಸ್‌ ಸ್ಪೇನ್‌ ಪರ ಆಡುತ್ತಿದ್ದು ಅವರ ಹಿರಿಯ ಸಹೋದರ ಇನಾಕಿ ವಿಲಿಯಮ್ಸ್‌ ಘಾನಾ ಪರ ಕಣಕ್ಕಿಳಿದಿದ್ದಾರೆ.

90ರ ದಶಕದಲ್ಲಿ ನಡೆದ ಲೈಬೀರಿಯನ್‌ ಯುದ್ಧದ ವೇಳೆ ವಿಲಿಯಮ್ಸ್‌ ಸಹೋದರರ ಪೋಷಕರಾದ ಫೆಲಿಕ್ಸ್‌ ಹಾಗೂ ಮರಿಯಾ, ಘಾನಾ ಬಿಟ್ಟು ಸ್ಪೇನ್‌ಗೆ ವಲಸೆ ಹೋಗಿ ಅಲ್ಲೇ ಆಶ್ರಯ ಪಡೆದರು. ನಿಕೋ ಹಾಗೂ ಇನಾಕಿ ಇಬ್ಬರು ಸ್ಪೇನ್‌ನ 2ನೇ ಅತಿ ಹಳೆಯ ಫುಟ್ಬಾಲ್‌ ಕ್ಲಬ್‌ ಅಥ್ಲೆಟಿಕ್‌ ಬಿಲ್ಬಾವೋ ಪರ ಆಡುತ್ತಾರೆ. 

28 ವರ್ಷದ ಇನಾಕಿ, ಬಿಲ್ಬಾವೋ ಪರ ಸತತ 236 ಪಂದ್ಯಗಳನ್ನಾಡಿ ಲಾ ಲೀಗಾದಲ್ಲಿ ದಾಖಲೆ ಬರೆದಿದ್ದರು. ಅವರು ತಂಡವನ್ನು ಒಟ್ಟು 286 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು 80 ಗೋಲು ಬಾರಿಸಿದ್ದಾರೆ. ಅದರೆ ಅವರಿಗೆ ಸ್ಪೇನ್‌ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಘಾನಾ ತಂಡದಿಂದ ಬಂದ ಆಫರ್‌ ಒಪ್ಪಿಕೊಂಡು ಇನಾಕಿ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ಕಿರಿಯರ ವಿಭಾಗದಲ್ಲೂ ಸ್ಪೇನ್‌ ತಂಡವನ್ನು ಪ್ರತಿನಿಧಿಸಿದ್ದ ನಿಕೋಗೆ ಹಿರಿಯರ ತಂಡದಲ್ಲೂ ಸ್ಥಾನ ದೊರೆತಿದೆ.

FIFA World Cup: ಇಂಗ್ಲೆಂಡ್‌, ನೆದರ್‌ಲೆಂಡ್ಸ್‌ಗೆ ಸತತ 2ನೇ ಜಯದ ಗುರಿ

ಬೈನಾಕುಲರ್‌ನಲ್ಲಿ ಮದ್ಯ ಇಟ್ಟುಕೊಂಡಿದ್ದವನ ಸೆರೆ!

ದೋಹಾ: ಕತಾರ್‌ ಹೇರಿರುವ ನಿರ್ಬಂಧಗಳು ವಿಶ್ವಕಪ್‌ ವೀಕ್ಷಣೆಗೆ ತೆರಳಿರುವ ಪಾಶ್ಚಿಮಾತ್ಯ ದೇಶಗಳ ಅಭಿಮಾನಿಗಳ ಉಸಿರುಗಟ್ಟಿಸುತ್ತಿವೆ. ಪ್ರಮುಖವಾಗಿ ಮದ್ಯ ಸೇವನೆಗೆ ಇರುವ ಅಡೆ ತಡೆಗಳಿಂದ ಹೈರಾಣಾಗಿದ್ದಾರೆ. ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಕ್ರೀಡಾಂಗಣದೊಳಕ್ಕೆ ಮದ್ಯ ಕೊಂಡೊಯ್ಯುವ ಮೆಕ್ಸಿಕೋ ಅಭಿಮಾನಿಯ ಯತ್ನ ವಿಫಲವಾಗಿದೆ. ವ್ಯಕ್ತಿಯೊಬ್ಬ ಬೈನಾಕುಲರ್‌(ದೂರದರ್ಶಕ)ನೊಳಗೆ ಮದ್ಯವಿರಿಸಿದ್ದನ್ನು ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಪಂದ್ಯ ಮುಗಿದ ಮೇಲೆ ಕ್ರೀಡಾಂಗಣ ಸ್ವಚ್ಛಗೊಳಿಸಿ ಮನಸೆಳೆದ ಜಪಾನ್‌ ಫ್ಯಾನ್ಸ್‌!

ಅಲ್‌ ರಯ್ಯನ್‌: ಜರ್ಮನಿ ವಿರುದ್ಧ ತಮ್ಮ ತಂಡ ರೋಚಕ ಗೆಲುವು ಸಾಧಿಸಿದ ಬಳಿಕ ಜಪಾನ್‌ ಅಭಿಮಾನಿಗಳು ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ ಎಲ್ಲರ ಮನ ಸೆಳೆದಿದ್ದಾರೆ. ತಂಡ ಐತಿಹಾಸಿಕ ಗೆಲುವು ಪಡೆದ ಬಳಿಕ ಅಭಿಮಾನಿಗಳು ಅತಿರೇಕವಾಗಿ ವರ್ತಿಸದೆ ಕ್ರೀಡಾಂಗಣದ ಸ್ಟ್ಯಾಂಡ್‌ಗಳಲ್ಲಿ ಜನರು ಬಿಸಾಡಿದ್ದ ಕಸವನ್ನು ತೆಗೆದು, ಸ್ವಚ್ಛಗೊಳಿಸಿದರು. ಇದೇ ವೇಳೆ ಜಪಾನ್‌ ತಂಡ ಸಹ ಡ್ರೆಸ್ಸಿಂಗ್‌ ಕೊಠಡಿಯನ್ನು ಸ್ವಚ್ಛಗೊಳಿಸದೆ ನಂತರವೇ ಕ್ರೀಡಾಂಗಣದಿಂದ ಹೋಟೆಲ್‌ಗೆ ಹಿಂದಿರುಗಿತು.

ವಿಶ್ವ ಬಾಕ್ಸಿಂಗ್‌: ಏಳು ಭಾರತೀಯರು ಫೈನಲ್‌ಗೆ

ನವದೆಹಲಿ: ಸ್ಪೇನ್‌ನ ಲಾ ನುಸಿಯಾದಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ. ಭಾರತದ 7 ಬಾಕ್ಸರ್‌ಗಳು ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ವಿಭಾಗದಲ್ಲಿ ವಂಶಜ್‌, ಆಶಿಶ್‌ ಹಾಗೂ ವಿಶ್ವನಾಥ್‌ ಸುರೇಶ್‌, ಮಹಿಳೆಯರ ವಿಭಾಗದಲ್ಲಿ ಕೀರ್ತಿ, ಭಾವನಾ ಶರ್ಮಾ, ದೇವಿಕಾ, ರವೀನಾ ಫೈನಲ್‌ಗೇರಿದ್ದಾರೆ. ಇದೇ ವೇಳೆ ತಮನ್ಹಾ, ಕುಂಜುರಾಣಿ, ಮುಸ್ಕಾನ್‌ ಹಾಗೂ ಲಾಶು ಯಾದವ್‌ ಸೆಮೀಸ್‌ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಭಾರತ ಒಟ್ಟು 11 ಪಂದ್ಯಗಳನ್ನು ಖಚಿತಪಡಿಸಿಕೊಂಡಿದ್ದು, ಟೂರ್ನಿಯಲ್ಲಿ ನಂ.1 ಸ್ಥಾನ ಪಡೆದಿದೆ.

Follow Us:
Download App:
  • android
  • ios