FIFA World Cup ನಾಕೌಟ್‌ಗೆ ಬ್ರೆಜಿಲ್ ಲಗ್ಗೆ, ಸ್ವಿಜರ್‌ಲೆಂಡ್ ವಿರುದ್ಧ 1-0 ಜಯ
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 16ನೇ ಸುತ್ತು ಪ್ರವೇಶಿಸಿದ ಬ್ರೆಜಿಲ್
‘ಜಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಸ್ವಿಜರ್‌ಲೆಂಡ್ ವಿರುದ್ಧ ಜಯಭೇರಿ
6 ಅಂಕಗಳೊಂದಿಗೆ ಗುಂಪಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡ ಬ್ರೆಜಿಲ್
ದೋಹಾ(ನ.29): ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿ ವಿಶ್ವಕಪ್‌ಗೆ ಕಾಲಿಟ್ಟಿರುವ ಬ್ರೆಜಿಲ್, ಗುಂಪು ಹಂತದಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ಸೋಮವಾರ ನಡೆದ ‘ಜಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಸ್ವಿಜರ್‌ಲೆಂಡ್ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಿ, 6 ಅಂಕಗಳೊಂದಿಗೆ ಗುಂಪಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತು.
83ನೇ ನಿಮಿಷದಲ್ಲಿ ಕ್ಯಾಸಿಮಿರೊ ಬಾರಿಸಿದ ಗೋಲು ಬ್ರೆಜಿಲ್ ಪಾಲಿಗೆ ಗೆಲುವಿನ ಗೋಲಾಯಿತು. ಇದಕ್ಕೂ ಮುನ್ನ 66ನೇ ನಿಮಿಷದಲ್ಲಿ ವಿನಿಶಿಯಸ್ ಜೂನಿಯರ್ ಬಾರಿಸಿದ ಗೋಲನ್ನು ಆಫ್‌ಸೈಡ್ ಎಂದು ನಿರಾಕರಿಸಲಾಯಿತು.
ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ಬ್ರೆಜಿಲ್ ಹಿಂದೆ ಬಿದ್ದರೂ, ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಯಾವುದೇ ಅಡ್ಡಿಯಾಗಲಿಲ್ಲ. ಸ್ವಿಜರ್‌ಲೆಂಡ್ ಆಕರ್ಷಕ ರಕ್ಷಣಾ ಕೌಶಲ್ಯಗಳನ್ನು ಪ್ರದರ್ಶಿಸಿ ಗಮನ ಸೆಳೆಯಿತು. ದ್ವಿತೀಯಾರ್ಧದಲ್ಲಿ ಚೆಂಡಿನ ಮೇಲೆ ಸ್ವಿಸ್ ಆಟಗಾರರಿಗೆ ಹೆಚ್ಚು ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಅದರಲ್ಲೂ ಒಂದು ಗೋಲು ದಾಖಲಾದ ಬಳಿಕ ಬ್ರೆಜಿಲ್ ಆಟಗಾರರು ಚೆಂಡು ಬಹುತೇಕ ಸಮಯ ತಮ್ಮ ಬಳಿಯೇ ಇರುವಂತೆ ನೋಡಿಕೊಂಡು, ಸ್ವಿಜರ್‌ಲೆಂಡ್‌ಗೆ ಪುಟಿದೇಳಲು ಅವಕಾಶವನ್ನೇ ನೀಡಲಿಲ್ಲ.
FIFA World Cup: ಮೊರೊಕ್ಕೊ ವಿರುದ್ಧ ಸೋಲು; ಬೆಲ್ಜಿಯಂನಲ್ಲಿ ಹಿಂಸಾಚಾರ; ಹಲವರು ವಶಕ್ಕೆ
ಮೊದಲ ಪಂದ್ಯದಲ್ಲಿ ಗೆದ್ದಿದ್ದ ಸ್ವಿಸ್ ತಂಡ ಈ ಸೋಲಿನೊಂದಿಗೆ ಹಿನ್ನಡೆ ಅನುಭವಿಸಿದ್ದು, ಕೊನೆ ಪಂದ್ಯದಲ್ಲಿ ಸರ್ಬಿಯಾ ವಿರುದ್ಧ ಗೆಲ್ಲಬೇಕಿದೆ. ಕ್ಯಾಮರೂನ್ ವಿರುದ್ಧ ಬ್ರೆಜಿಲ್ ಗೆದ್ದರೆ, ಸ್ವಿಜರ್‌ಲೆಂಡ್ ಡ್ರಾ ಸಾಧಿಸಿದರೂ ಸಾಕು ನಾಕೌಟ್‌ಗೇರಲಿದೆ.
ಜರ್ಮನಿ ನಾಕೌಟ್ ಕನಸು ಜೀವಂತ
ಅಲ್ ಖೋರ್: ‘ದೈತ್ಯರ ಕಾಳಗ’ ಎಂದೇ ಬಿಂಬಿತವಾಗಿದ್ದ ಸ್ಪೇನ್ ಹಾಗೂ ಜರ್ಮನಿ ನಡುವಿನ ಪಂದ್ಯ 1-1 ಗೋಲಿನ ಡ್ರಾನಲ್ಲಿ ಅಂತ್ಯಗೊಂಡಿತು. ಇದರೊಂದಿಗೆ ನಾಕೌಟ್ ಹಂತಕ್ಕೇರುವ ಜರ್ಮನಿ ತಂಡದ ಆಸೆ ಜೀವಂತವಾಗಿ ಉಳಿಯಿತಾದರೂ, ಸತತ 2ನೇ ಬಾರಿಗೆ ವಿಶ್ವಕಪ್ ಗುಂಪು ಹಂತದಿಂದಲೇ ಹೊರಬೀಳುವ ಆತಂಕ ಇನ್ನೂ ದೂರವಾಗಿಲ್ಲ. ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ನಿಕ್ಲಾಸ್ ಫುಲ್‌ಕ್ರುಗ್ 83ನೇ ನಿಮಿಷದಲ್ಲಿ ಬಾರಿಸಿದ ಗೋಲು ಜರ್ಮನಿ ಸತತ 2ನೇ ಸೋಲಿಗೆ ಗುರಿಯಾಗುವುದನ್ನು ತಪ್ಪಿಸಿತು. ಮೊದಲಾರ್ಧ ಗೋಲು ರಹಿತ ಮುಕ್ತಾಯಗೊಂಡ ಬಳಿಕ 62ನೇ ನಿಮಿಷದಲ್ಲಿ ಸ್ಪೇನ್ ಮೊದಲ ಗೋಲು ದಾಖಲಿಸಿತು. ಆಲ್ವಾರೊ ಮೊರಾಟ ಆಕರ್ಷಕ ಗೋಲಿನ ಮೂಲಕ ಸ್ಪೇನ್‌ಗೆ ಮುನ್ನಡೆ ಒದಗಿಸಿದರು. ಈ ಫಲಿತಾಂಶದೊಂದಿಗೆ ಸ್ಪೇನ್ ತನ್ನ ದಾಖಲೆ ಮುಂದುವರಿಸಿದೆ. 1988ರ ಯುರೋಪಿಯನ್ ಚಾಂಪಿಯನ್‌ನ ಬಳಿಕ ಅಧಿಕೃತ ಟೂರ್ನಿಗಳಲ್ಲಿ ಜರ್ಮನಿ ವಿರುದ್ಧ ಸ್ಪೇನ್ ಸೋತಿಲ್ಲ.
ನಾಕೌಟ್ ಲೆಕ್ಕಾಚಾರ ಹೇಗೆ?
ಗುರುವಾರ (ಡಿ.1) ಜರ್ಮನಿ ತನ್ನ ಅಂತಿಮ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಸೆಣಸಲಿದ್ದು, ಸ್ಪೇನ್‌ಗೆ ಜಪಾನ್ ಎದುರಾಗಲಿದೆ. ಜರ್ಮನಿ ಹಾಗೂ ಸ್ಪೇನ್ ಗೆದ್ದರೆ, ಎರಡೂ ತಂಡಗಳು ನಾಕೌಟ್‌ಗೆ ಪ್ರವೇಶಿಸಲಿವೆ. ಒಂದು ವೇಳೆ ಸ್ಪೇನ್ ವಿರುದ್ಧ ಜಪಾನ್ ಡ್ರಾ ಸಾಧಿಸಿದರೆ, ಗೋಲು ವ್ಯತ್ಯಾಸದಲ್ಲಿ ಜರ್ಮನಿ ಮುಂದಿದ್ದರೆ ಮಾತ್ರ ನಾಕೌಟ್‌ಗೆ ಪ್ರವೇಶ ಸಿಗಲಿದೆ. ಒಂದು ವೇಳೆ ಜಪಾನ್ ಗೆದ್ದರೆ, ಆಗ ಜರ್ಮನಿ ಸ್ಪೇನ್‌ಗಿಂತ ಹೆಚ್ಚು ಗೋಲು ವ್ಯತ್ಯಾಸ ಹೊಂದಬೇಕಿದೆ. ಸ್ಪೇನ್ 2 ಪಂದ್ಯದಲ್ಲಿ 8 ಗೋಲು ಬಾರಿಸಿ, 1 ಗೋಲು ಬಿಟ್ಟುಕೊಟ್ಟಿದೆ. ಅಂದರೆ ತಂಡದ ಗೋಲು ವ್ಯತ್ಯಾಸ +7. ಜರ್ಮನಿ 2 ಪಂದ್ಯದಲ್ಲಿ 2 ಗೋಲು ಬಾರಿಸಿ, 3 ಗೋಲು ಬಿಟ್ಟುಕೊಟ್ಟಿದೆ. ಹೀಗಾಗಿ ತಂಡದ ಗೋಲು ವ್ಯತ್ಯಾಸ -1. ಜಪಾನ್ ವಿರುದ್ಧ ಸ್ಪೇನ್ ಸೋತರೆ, ಜರ್ಮನಿ ಗೆದ್ದರೂ ಹೊರಬೀಳುವ ಸಾಧ್ಯತೆಯೇ ಹೆಚ್ಚು.
01 ಬಾರಿ: ವಿಶ್ವಕಪ್‌ನಲ್ಲಿ ಜರ್ಮನಿ ಸತತ 2 ಪಂದ್ಯಗಳಲ್ಲಿ ಗೆಲ್ಲಲು ವಿಫಲವಾಗಿರುವುದು ಇದೇ ಮೊದಲು. ಮೊದಲ ಪಂದ್ಯದಲ್ಲಿ ಜರ್ಮನಿ, ಜಪಾನ್ ವಿರುದ್ಧ ಪರಾಭವಗೊಂಡಿತ್ತು.