FIFA World Cup ಬ್ರೂನೊ ಫರ್ನಾಂಡೀಸ್ ಡಬಲ್ ಗೋಲು; ನಾಕೌಟ್‌ಗೇರಿದ ಪೋರ್ಚುಗಲ್..!
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ 16ರ ಘಟ್ಟ ತಲುಪಿದ ಪೋರ್ಚುಗಲ್
ಉರುಗ್ವೆ ಎದುರು ಭರ್ಜರಿ ಜಯ ಸಾಧಿಸಿದ ಪೋರ್ಚುಗಲ್
ಪೋರ್ಚುಗಲ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಬ್ರೂನೊ ಫರ್ನಾಂಡೀಸ್
ದೋಹಾ(ನ.29): ತಾರಾ ಫುಟ್ಬಾಲಿಗ ಬ್ರೂನೊ ಫರ್ನಾಂಡೀಸ್ ಬಾರಿಸಿದ ಎರಡು ಆಕರ್ಷಕ ಗೋಲುಗಳ ನೆರವಿನಿಂದ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪೋರ್ಚುಗಲ್ ತಂಡವು 2-0 ಅಂತರದಲ್ಲಿ ಉರುಗ್ವೆ ತಂಡವನ್ನು ಮಣಿಸಿದೆ. ಇದರೊಂದಿಗೆ ಫ್ರಾನ್ಸ್ ಹಾಗೂ ಬ್ರೆಜಿಲ್ ಬಳಿಕ ನಾಕೌಟ್ ಸ್ಥಾನ ಖಚಿತಪಡಿಸಿಕೊಂಡ ಮೂರನೇ ತಂಡ ಎನ್ನುವ ಗೌರವಕ್ಕೆ ಕ್ರಿಸ್ಟಿಯಾನೋ ರೊನಾಲ್ಡೋ ನೇತೃತ್ವದ ಪೋರ್ಚುಗಲ್ ತಂಡ ಪಾತ್ರವಾಗಿದೆ.
ಇಲ್ಲಿನ ಲುಸೈಲ್ ಸ್ಟೇಡಿಯಂನಲ್ಲಿ ಸೋಮವಾರ ತಡರಾತ್ರಿ ಸುಮಾರು 89 ಸಾವಿರಕ್ಕೂ ಅಧಿಕ ಮಂದಿ ಪ್ರೇಕ್ಷಕರ ನಡುವೆ ನಡೆದ ಫುಟ್ಬಾಲ್ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮಿಡ್ ಫೀಲ್ಡರ್ ಕೂಡಾ ಆಗಿರುವ ಬ್ರೂನೊ ಫರ್ನಾಂಡೀಸ್ ಮಿಂಚಿನ ಎರಡು ಗೋಲು ಬಾರಿಸುವ ಮೂಲಕ ಪೋರ್ಚುಗಲ್ ತಂಡವು 16ರ ಸುತ್ತು ಪ್ರವೇಶಿಸುವಲ್ಲಿ ಮಹತ್ತರ ಪಾತ್ರವಹಿಸಿದರು. ಪೋರ್ಚುಗಲ್ ಹಾಗೂ ಉರುಗ್ವೆ ತಂಡಗಳ ನಡುವಿನ ಪಂದ್ಯದ ಮೊದಲಾರ್ಥದಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಆದರೆ ದ್ವಿತಿಯಾರ್ಧ ಆರಂಭವಾಗಿ 9ನೇ ನಿಮಿಷದಲ್ಲೇ ಬ್ರೂನೊ, ಪೋರ್ಚುಗಲ್ ಪರ ಗೋಲಿನ ಖಾತೆ ತೆರೆದರು. ಇದಾದ ಬಳಿಕ ಪೆನಾಲ್ಟಿ ಅವಕಾಶ ಬಳಸಿಕೊಂಡ ಬ್ರೂನೊ ಮತ್ತೊಂದು ಗೋಲು ಬಾರಿಸುವ ಮೂಲಕ ಅಂತರವನ್ನು 2-0ಗೆ ಹಿಗ್ಗಿಸಿದರು.
ಇದೀಗ ಈ ಗೆಲುವಿನೊಂದಿಗೆ ಪೋರ್ಚುಗಲ್ ತಂಡವು ಗ್ರೂಪ್ 'ಎಚ್' ವಿಭಾಗದಲ್ಲಿ ಅಗ್ರಸ್ಥಾನದೊಂದಿಗೆ ನಾಕೌಟ್ ಹಂತ ಪ್ರವೇಶಿಸಿದೆ. ಇನ್ನೊಂದೆಡೆ ಉರುಗ್ವೆ ತಂಡವು ನಾಕೌಟ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ತಾನಾಡುವ ಕೊನೆಯ ಪಂದ್ಯದಲ್ಲಿ ಘಾನಾ ಎದುರು ಗೆಲುವು ದಾಖಲಿಸಬೇಕಿದೆ.
‘ಮೆಸ್ಸಿ ನನ್ನ ಕಣ್ಣಿಗೆ ಕಾಣದಂತೆ ಓಡಾಡಲಿ’ ಫುಟ್ಬಾಲ್ ದಿಗ್ಗಜನಿಗೆ ಮೆಕ್ಸಿಕೋ ಬಾಕ್ಸರ್‌ನಿಂದ ಬೆದರಿಕೆ!
ಈ ಪಂದ್ಯದಲ್ಲಿ ಪೋರ್ಚುಗಲ್ ಹಾಗೂ ಉರುಗ್ವೆ ತಂಡಗಳು ತಲಾ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದವು. ಡೇನಿಲ್ಲಾ ಪೆರೆರಿಯಾ ಬದಲಿಗೆ ಅನುಭವಿ ಆಟಗಾರ ಪೆಪೆಗೆ ಪೋರ್ಚುಗಲ್ ತಂಡವು ಮಣೆ ಹಾಕಿತ್ತು. ಪೆಪೆ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯವನ್ನಾಡಿದ ಮೂರನೇ ಅತ್ಯಂತ ಹಿರಿಯ ಔಟ್‌ಫೀಲ್ಡ್ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು. ಪೋರ್ಚುಗಲ್ ತಂಡವು ಮೊದಲಾರ್ಧದಲ್ಲಿಯೇ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಆದರೆ ಪೋರ್ಚುಗಲ್ ತಂಡವು ಗೋಲು ಬಾರಿಸಲು ಸಿಕ್ಕ ಅವಕಾಶಗಳನ್ನು ಉರುಗ್ವೆ ತಂಡದ ಗೋಲು ಕೀಪರ್ ಸೆರ್ಗಿಯೊ ರೊಚೆಟ್ ವಿಫಲಗೊಳಿಸಿದರು.
ಆಘಾತಕಾರಿ ಸೋಲು: ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ಹಿಂಸಾಚಾರ!
ಬ್ರಸೆಲ್ಸ್: ಮೊರಾಕ್ಕೊ ವಿರುದ್ಧ ಬೆಲ್ಜಿಯಂ ತಂಡ ಫುಟ್ಬಾಲ್ ವಿಶ್ವಕಪ್‌ನಲ್ಲಿ ಆಘಾತಕಾರಿ ಸೋಲು ಅನುಭವಿಸಿದ ಬಳಿಕ, ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನಲ್ಲಿ ಸಿಟ್ಟಿಗೆದ್ದ ಅಭಿಮಾನಿಗಳು ರಸ್ತೆಗಿಳಿದು ಹಿಂಸಾಚಾರದಲ್ಲಿ ಭಾಗಿಯಾದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಬೇಕಾಯಿತು. ರಸ್ತೆಯಲ್ಲಿದ್ದ ಕಾರುಗಳ ಮೇಲೆ ಇಟ್ಟಿಗೆಗಳನ್ನು ಎಸೆತ ಕಿಡಿಗೇಡಿಗಳು, ಅಂಗಡಿಗಳಿಗೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದರು. ಹಿಂಸಾಚಾರ ತಡೆಯಲು ಸ್ಥಳೀಯ ಆಡಳಿತ ಕೆಲ ಪ್ರದೇಶಗಳಲ್ಲಿ ಕರ್ಫ್ಯೂ ಸಹ ಜಾರಿ ಮಾಡಿತು. ಬೆಲ್ಜಿಯಂನ ಹಲವು ನಗರಗಳಲ್ಲಿರುವ ಮೊರಾಕ್ಕೊ ಮೂಲದ ಜನರು ಸಂಭ್ರಮಿಸಿದ್ದು ಸಹ ಸ್ಥಳೀಯ ಅಭಿಮಾನಿಗಳನ್ನು ಕೆರಳಿಸಿತು ಎನ್ನಲಾಗಿದೆ.