ಫಿಫಾ ವಿಶ್ವಕಪ್ ಟೂರ್ನಿಯಲ್ಲಿಂದು ಅರ್ಜೆಂಟೀನಾ ತಂಡಕ್ಕೆ ಮೆಕ್ಸಿಕೋ ಸವಾಲುಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಪಡೆಗಿಂದು ಮಾಡು ಇಲ್ಲವೇ ಮಡಿ ಪಂದ್ಯಈಗಾಗಲೇ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾಗೆ ಶರಣಾಗಿರುವ ಅರ್ಜೆಂಟೀನಾ

ಲುಸೈಲ್‌(ನ.26): ಸೌದಿ ಅರೇಬಿಯಾ ವಿರುದ್ಧ ಮುಖಭಂಗಕ್ಕೊಳಗಾದ ಅರ್ಜೆಂಟೀನಾ, ವಿಶ್ವಕಪ್‌ನ ನಾಕೌಟ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಶನಿವಾರ ಮೆಕ್ಸಿಕೋ ವಿರುದ್ಧ ಗೆಲ್ಲಲೇಬೇಕಿದೆ. ಲಿಯೋನೆಲ್‌ ಮೆಸ್ಸಿ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

2014-16ರ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ್ದ ಗೆರಾರ್ಡೊ ಮಾರ್ಟಿನೋ ಈಗ ಮೆಕ್ಸಿಕೋ ಕೋಚ್‌ ಆಗಿದ್ದು, ಎದುರಾಳಿಯ ತಂತ್ರಗಾರಿಕೆ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಜ್ಞಾನ ಹೊಂದಿದ್ದಾರೆ. ಹೀಗಾಗಿ ಅರ್ಜೆಂಟೀನಾ ಹೊಸ ಹಾಗೂ ವಿಭಿನ್ನ ರಣತಂತ್ರಗಳೊಂದಿಗೆ ಮೈದಾನಕ್ಕಿಳಿಯಬೇಕಿದೆ. ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಮೆಕ್ಸಿಕೋ 3 ಬಾರಿ ಸೆಣಸಿದ್ದು, ಒಮ್ಮೆಯೂ ಗೆದ್ದಿಲ್ಲ. ಭಾರೀ ಒತ್ತಡದಲ್ಲಿರುವ ಮೆಸ್ಸಿಯ ಮ್ಯಾಜಿಕ್‌ಗೆ ಲುಸೈಲ್‌ ಕ್ರೀಡಾಂಗಣ ಸಾಕ್ಷಿಯಾಗುತ್ತಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಫ್ರಾನ್ಸ್‌ಗೆ ನಾಕೌಟ್‌ಗೇರುವ ತವಕ

ದೋಹಾ: ಮೊದಲ ಪಂದ್ಯದಲ್ಲಿ ಆಸ್ಪ್ರೇಲಿಯಾವನ್ನು 4-1ರಲ್ಲಿ ಸೋಲಿಸಿ ಶುಭಾರಂಭ ಮಾಡಿರುವ ಹಾಲಿ ಚಾಂಪಿಯನ್‌ ಫ್ರಾನ್ಸ್‌, ‘ಡಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಶನಿವಾರ ಡೆನ್ಮಾರ್ಕ್ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲಿ ಜಯಿಸಿದರೆ ತಂಡ ನಾಕೌಟ್‌ ಹಂತಕ್ಕೇರುವುದು ಬಹುತೇಕ ಖಚಿತವಾಗಲಿದೆ. ಕಿಲಿಯಾನ್‌ ಎಂಬಾಪೆ, ಓಲಿವರ್‌ ಗಿರೋರ್ಡ್‌ ಮೇಲೆ ಭಾರೀ ನಿರೀಕ್ಷೆ ಇದೆ.

FIFA World Cup: ಘಾನಾ ಶಾಕ್‌ನಿಂದ ಪೋರ್ಚುಗಲ್‌ ಪಾರು!

ಇನ್ನು ಶನಿವಾರದ ಮತ್ತೆರಡು ಪಂದ್ಯಗಳಲ್ಲಿ ಆಸ್ಪ್ರೇಲಿಯಾ ಹಾಗೂ ಟ್ಯುನೀಶಿಯಾ, ಪೋಲೆಂಡ್‌ ಹಾಗೂ ಸೌದಿ ಅರೇಬಿಯಾ ಸೆಣಸಲಿವೆ. ಆಸ್ಪ್ರೇಲಿಯಾ ಹಾಗೂ ಟ್ಯುನೀಶಿಯಾ ಮೊದಲ ಗೆಲುವಿಗೆ ಎದುರು ನೋಡುತ್ತಿದ್ದರೆ, ಸೌದಿ ಸತತ 2ನೇ ಜಯದೊಂದಿಗೆ ನಾಕೌಟ್‌ ಹಂತಕ್ಕೇರಲು ಕಾತರಿಸುತ್ತಿದೆ.

ಇಂದಿನ ಪಂದ್ಯಗಳು

ಆಸ್ಪ್ರೇಲಿಯಾ-ಟ್ಯುನೀಶಿಯಾ, ಮಧ್ಯಾಹ್ನ 3.30ಕ್ಕೆ

ಪೋಲೆಂಡ್‌-ಸೌದಿ ಅರೇಬಿಯಾ, ಸಂಜೆ 6.30ಕ್ಕೆ

ಫ್ರಾನ್ಸ್‌-ಡೆನ್ಮಾರ್ಕ್, ರಾತ್ರಿ 9.30ಕ್ಕೆ

ಅರ್ಜೆಂಟೀನಾ-ಮೆಕ್ಸಿಕೋ, ರಾತ್ರಿ 12.30ಕ್ಕೆ

ಆತಿಥೇಯ ಕತಾರ್‌ಗೆ ಸತತ 2ನೇ ಸೋಲು!

ದೋಹಾ: ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ಪಡೆಯುವ ಕತಾರ್‌ ಕನಸು ಮತ್ತೆ ಭಗ್ನಗೊಂಡಿದೆ. ಸೆನೆಗಲ್‌ ವಿರುದ್ಧ ಶುಕ್ರವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ 1-3 ಗೋಲುಗಳಲ್ಲಿ ಕತಾರ್‌ ಸೋಲುಂಡಿತು. ಫುಟ್ಬಾಲ್‌ ವಿಶ್ವಕಪ್‌ ಇತಿಹಾಸದಲ್ಲೇ ಆತಿಥೇಯ ತಂಡ ಆರಂಭಿಕ ಎರಡು ಪಂದ್ಯಗಳನ್ನು ಸೋತಿದ್ದು ಇದೇ ಮೊದಲು. 41ನೇ ನಿಮಿಷದಲ್ಲಿ ಬೌಲಾಯೆ ಡಿಯಾ, 48ನೇ ನಿಮಿಷದಲ್ಲಿ ಫಮಾರಾ ಡೈಡಿಯೊ, 84ನೇ ನಿಮಿಷದಲ್ಲಿ ಬಂಬಾ ಡಿಯೆಂಗ್‌ ಸೆನೆಗಲ್‌ ಪರ ಗೋಲು ಬಾರಿಸಿದರೆ, ಕತಾರ್‌ ಪರ 78ನೇ ನಿಮಿಷದಲ್ಲಿ ಮೊಹಮದ್‌ ಮುಂಟಾರಿ ಏಕೈಕ ಗೋಲು ದಾಖಲಿಸಿದರು. ಕತಾರ್‌ ಗುಂಪು ಹಂತದಲ್ಲೇ ಹೊರಬೀಳುವುದು ಬಹುತೇಕ ಖಚಿತವಾಗಿದೆ.

3 ನಿಮಿಷದಲ್ಲಿ 2 ಗೋಲು ಬಾರಿಸಿ ಗೆದ್ದ ಇರಾನ್‌!

ಅಲ್‌ ರಯ್ಯನ್‌: ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಹೀನಾಯ ಸೋಲಿಗೆ ಗುರಿಯಾಗಿದ್ದ 3 ಬಾರಿ ಏಷ್ಯಾ ಚಾಂಪಿಯನ್‌ ಇರಾನ್‌, ಶುಕ್ರವಾರ ವೇಲ್ಸ್‌ಗೆ ಆಘಾತ ನೀಡಿತು. ಕೊನೆ 3 ನಿಮಿಷಗಳಲ್ಲಿ 2 ಗೋಲು ಬಾರಿಸಿದ ಇರಾನ್‌ 2-0 ಅಂತರದಲ್ಲಿ ಜಯಿಸಿ ಸಂಭ್ರಮಿಸಿತು. 86ನೇ ನಿಮಿಷದಲ್ಲಿ ವೇಲ್ಸ್‌ ಗೋಲ್‌ಕೀಪರ್‌ ವೇಯ್‌್ನ ಹೆನ್ನೆಸ್ಸೆ ರೆಡ್‌ ಕಾರ್ಡ್‌ ಪಡೆದು ಮೈದಾನ ತೊರೆದಿದ್ದು ಇರಾನ್‌ಗೆ ಲಾಭವಾಯಿತು. 98ನೇ ನಿಮಿಷದಲ್ಲಿ ರೌಜೆಬ್‌ ಚೆಶಿಮಿ, 101ನೇ ನಿಮಿಷದಲ್ಲಿ ರಮಿನ್‌ ರೆಜಾಯಿಯನ್‌ ಗೋಲು ದಾಖಲಿಸಿ ಇರಾನ್‌, ಈ ವಿಶ್ವಕಪ್‌ನಲ್ಲಿ ಮೊದಲ ಗೆಲುವು ಸಾಧಿಸಲು ಕಾರಣರಾದರು. ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ವೇಲ್ಸ್‌, ಈ ಸೋಲಿನಿಂದಾಗಿ ಗುಂಪು ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಸಿಲುಕಿದೆ.