Asianet Suvarna News Asianet Suvarna News

FIFA World Cup: ಘಾನಾ ಶಾಕ್‌ನಿಂದ ಪೋರ್ಚುಗಲ್‌ ಪಾರು!

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಪೋರ್ಚುಗಲ್
ಘಾನಾ ವಿರುದ್ದ ರೋಚಕ ಗೆಲುವು ಸಾಧಿಸಿದ ಪೋರ್ಚುಗಲ್
5 ವಿವಿಧ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ ಮೊದಲ ಫುಟ್ಬಾಲಿಗ ಎನ್ನುವ ದಾಖಲೆ ರೊನಾಲ್ಡೋ ಪಾಲು

FIFA World Cup 2022 Cristiano Ronaldo Stars With Record Breaking Goal As Portugal Beat Ghana kvn
Author
First Published Nov 26, 2022, 8:27 AM IST

ದೋಹಾ(ನ.26): ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವ ದಾಖಲೆ ಬರೆಯುವುದರ ಜೊತೆಗೆ ವಿಶ್ವಕಪ್‌ನಲ್ಲಿ ಪೋರ್ಚುಗಲ್‌ ಶುಭಾರಂಭ ಮಾಡಲೂ ನೆರವಾದರು. ಘಾನಾ ವಿರುದ್ಧ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಪೋರ್ಚುಗಲ್‌ 3-2 ಗೋಲುಗಳ ರೋಚಕ ಗೆಲುವು ಸಾಧಿಸಿತು.

ಗೋಲು ರಹಿತ ಮೊದಲಾರ್ಧದ ಬಳಿಕ 65ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ರೊನಾಲ್ಡೋ ತಪ್ಪು ಮಾಡಲಿಲ್ಲ. ಆದರೆ 73ನೇ ನಿಮಿಷದಲ್ಲಿ ನಾಯಕ ಆ್ಯಂಡ್ರೆ ಆಯೆವ್‌ ಬಾರಿಸಿದ ಗೋಲಿನಿಂದ ಘಾನಾ ಸಮಬಲ ಸಾಧಿಸಿತು. ಬಳಿಕ 78ನೇ ನಿಮಿಷದಲ್ಲಿ ಜೊವೊ ಫೆಲಿಕ್ಸ್‌, 80ನೇ ನಿಮಿಷದಲ್ಲಿ ರಾಫೆಲ್‌ ಲಿಯೋ ಗೋಲು ಗಳಿಸಿ ಪೋರ್ಚುಗಲ್‌ ಮುನ್ನಡೆಯನ್ನು 3-1ಕ್ಕೇರಿಸಿದರು.

ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದ ಪೋರ್ಚುಗಲ್‌ನ ಕೋಚ್‌, ರೊನಾಲ್ಡೋ ಸೇರಿ ಕೆಲ ಪ್ರಮುಖ ಆಟಗಾರರನ್ನು ಮೈದಾನದಿಂದ ಹೊರ ಕರೆದರು. ಆದರೆ 89ನೇ ನಿಮಿಷದಲ್ಲಿ ಒಸ್ಮಾನ್‌ ಬುಕಾರಿ ಘಾನಾ ಪರ 2ನೇ ಗೋಲು ಬಾರಿಸಿ ಪಂದ್ಯ ಇನ್ನೂ ಜೀವಂತವಾಗಿರುವಂತೆ ಮಾಡಿದರು. ಕೊನೆ ಕ್ಷಣದಲ್ಲಿ ಇನಾಕಿ ವಿಲಿಯಮ್ಸ್‌, ಪೋರ್ಚುಗಲ್‌ನ ಗೋಲ್‌ ಕೀಪರ್‌ ಡಿಯೊಗೊ ಕೋಸ್ಟಾಅವರ ಹಿಂದಿನಿಂದ ಬಂದು ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಪ್ರಯತ್ನ ವಿಫಲವಾಯಿತು. ಪೋರ್ಚುಗಲ್‌ ಗೆಲ್ಲುವ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಾದ ಆತಂಕದಿಂದ ಪಾರಾಯಿತು.

5 ವಿಶ್ವಕಪ್‌ಗಳಲ್ಲಿ ಗೋಲು: ರೊನಾಲ್ಡೋ ಹೊಸ ದಾಖಲೆ!

5 ವಿವಿಧ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ ಮೊದಲ ಫುಟ್ಬಾಲಿಗ ಎನ್ನುವ ದಾಖಲೆಯನ್ನು ಕ್ರಿಸ್ಟಿಯಾನೋ ರೊನಾಲ್ಡೋ ಬರೆದಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿ ಗೋಲು ಹೊಡೆದಿದ್ದ ರೊನಾಲ್ಡೋ, 2010, 2014, 2018ರ ವಿಶ್ವಕಪ್‌ಗಳಲ್ಲೂ ಗೋಲು ಬಾರಿಸಿದ್ದರು. ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ, ಜರ್ಮನಿಯ ಮಾಜಿ ಫುಟ್ಬಾಲಿಗ ಮಿರೊಸ್ಲಾವ್‌ ಕ್ಲೋಸಾ, ಬ್ರೆಜಿಲ್‌ನ ದಂತಕಥೆ ಪೀಲೆ, ಜರ್ಮನಿಯ ಮಾಜಿ ಆಟಗಾರ ಉವೆ ಸೀಲಾರ್‌ ತಲಾ 4 ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ್ದಾರೆ.

FIFA World Cup ರಿಚಾರ್ಲಿಸನ್‌ ಕಿಕ್‌ಗೆ ಸರ್ಬಿಯಾ ಸೈಲೆಂಟ್‌..!

ವಿಶ್ವಕಪ್‌ನಲ್ಲಿ 18 ಪಂದ್ಯಗಳಲ್ಲಿ ರೊನಾಲ್ಡೋ 8 ಗೋಲು ಬಾರಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಪೋರ್ಚುಗಲ್‌ ತಾರೆ 118 ಗೋಲುಗಳನ್ನು ದಾಖಲಿಸಿದ್ದಾರೆ.

ನಂಬರ್ ಗೇಮ್‌:

01 ಬಾರಿ: ಪೋರ್ಚುಗಲ್‌ 4 ಪ್ರಯತ್ನಗಳಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಹಿಂದಿನ 3 ಆವೃತ್ತಿಗಳಲ್ಲಿ ಎರಡು ಡ್ರಾ, ಒಂದು ಸೋಲಿಗೆ ಗುರಿಯಾಗಿತ್ತು. ಇನ್ನು ಆಫ್ರಿಕಾ ರಾಷ್ಟ್ರಗಳ ವಿರುದ್ಧ ವಿಶ್ವಕಪ್‌ನಲ್ಲಿ ಪೋರ್ಚುಗಲ್‌ ಸತತ 5 ಪಂದ್ಯದಲ್ಲಿ ಅಜೇಯವಾಗಿ ಉಳಿದಿದೆ. 4 ಗೆಲುವು, 1 ಡ್ರಾ ಸಾಧಿಸಿದೆ.

05 ಬಾರಿ: ಘಾನಾ ವಿಶ್ವಕಪ್‌ನಲ್ಲಿ ಸತತ 5ನೇ ಸೋಲು ಕಂಡಿದೆ. ಪೋರ್ಚುಗಲ್‌ ವಿರುದ್ಧದ ಸೋಲಿಗೂ ಮುನ್ನ ತಂಡ 2 ಸೋಲು, 2 ಡ್ರಾಗೆ ತೃಪ್ತಿಪಟ್ಟಿತ್ತು. ಕಳೆದ 4 ಆವೃತ್ತಿಗಳಲ್ಲಿ ಘಾನಾ 3 ಬಾರಿ ತಾನಾಡಿದ ಮೊದಲ ಪಂದ್ಯಗಳಲ್ಲಿ ಸೋತಿದೆ.

04 ಬಾರಿ: ಮೊದಲಾರ್ಧದಲ್ಲಿ ಗೋಲು ದಾಖಲಾಗದೆ ದ್ವಿತೀಯಾರ್ಧದಲ್ಲಿ ಒಟ್ಟು 5 ಗೋಲಿಗೆ ಸಾಕ್ಷಿಯಾದ ಕೇವಲ 4ನೇ ವಿಶ್ವಕಪ್‌ ಪಂದ್ಯವಿದು.

Follow Us:
Download App:
  • android
  • ios