ಥಿಂಪು(ಭೂತಾನ್‌)(ಫೆ.06): ಎಎಫ್‌ಸಿ ಕಪ್‌ 2020ರ ಪ್ರಾಥಮಿಕ ಹಂತದ 2ನೇ ಸುತ್ತಿನ ಮೊದಲ ಪಂದ್ಯದಲ್ಲಿ ಭೂತಾನ್‌ನ ಪಾರೋ ಎಫ್‌ಸಿ ವಿರುದ್ಧ 1-0 ಗೋಲಿನಿಂದ ಗೆಲುವು ಸಾಧಿಸಿದ ಬೆಂಗಳೂರು ಎಫ್‌ಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇಲ್ಲಿನ ಚಾಂಗ್ಲಿಮಿಥಾಂಗ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಚರಣದ ಪಂದ್ಯದಲ್ಲಿ ಯುವ ಆಟಗಾರರಿಂದ ಕೂಡಿದ್ದ ಬಿಎಫ್‌ಸಿ ನಿರೀಕ್ಷಿತ ಪ್ರದರ್ಶನ ತೋರದಿದ್ದರೂ, ಗೆಲುವು ಕೈಜಾರದಂತೆ ನೋಡಿಕೊಂಡಿತು.

ಇದನ್ನೂ ಓದಿ: ISL: ಅಗ್ರಸ್ಥಾನಕ್ಕೆ ಜಿಗಿದ ಬೆಂಗಳೂರು FC!

ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಬಿಎಫ್‌ಸಿಗೆ ಮೊದಲಾರ್ಧದಲ್ಲಿ ಯಶಸ್ಸು ಸಿಗಲಿಲ್ಲ. 51ನೇ ನಿಮಿಷದಲ್ಲಿ ಸೆಂಬಾಯ್‌ ಹಾಕಿಪ್‌ ಆಕರ್ಷಕ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ಮುನ್ನಡೆ ಕಾಯ್ದುಕೊಂಡ ಬೆಂಗಳೂರು ತಂಡ, ಗೆಲುವನ್ನು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: ಐಎಸ್‌ಎಲ್‌: ಬಿಎಫ್‌ಸಿಗೆ 2-0 ಜಯ

2ನೇ ಚರಣದ ಪಂದ್ಯ ಫೆ.12ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಟ್ಟಾರೆ ಗೋಲಿನ ಆಧಾರದ ಮೇಲೆ ವಿಜೇತ ತಂಡ ಯಾವುದೆನ್ನುವುದು ನಿರ್ಧಾರವಾಗಲಿದೆ. ಬಿಎಫ್‌ಸಿ ಗೆದ್ದರೆ, ಬಾಂಗ್ಲಾದ ಅಬಹಾನಿ ಢಾಕಾ ಹಾಗೂ ಮಾಲ್ಡೀವ್‌್ಸನ ಮಜಿಯಾ ಕ್ಲಬ್‌ ನಡುವಿನ ಪ್ರಾಥಮಿಕ ಹಂತದ 2ನೇ ಸುತ್ತಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಪ್ಲೇ-ಆಫ್‌ ಪಂದ್ಯದಲ್ಲಿ ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 2020ರ ಎಎಫ್‌ಸಿ ಕಪ್‌ನ ಗುಂಪು ಹಂತಕ್ಕೆ ಅರ್ಹತೆ ಪಡೆಯಲಿದೆ.